ಮೀಸೆ ಹುಟ್ಟೋ ಮೊದ್ಲೇ ಸೀಸೆಗೆ ಪರ್ಮಿಟ್…!! ಮದ್ಯ ಖರೀದಿ ವಯಸ್ಸಿನ ಮಿತಿ 21 ರಿಂದ 18 ಕ್ಕೆ ಇಳಿಕೆ

ಕರ್ನಾಟಕದ ಯುವಕ ಯುವತಿಯರೇ, ನಿಮಗೊಂದು ಸಂತಸದ ಸುದ್ದಿ! ನೀವೆಲ್ಲರೂ ರಾಕ್ ಆಗುವ ಸಂದರ್ಭವೊಂದು ಇದೀಗ ಬಂದಿದೆ. ಅದರಲ್ಲೂ ಮಧ್ಯಪ್ರಿಯರಾದ ಯೂತ್ಸ್ ಗಂತೂ ಸಂಭ್ರಮವೋ ಸಂಭ್ರಮ. ಯಾಕೆಂದರೆ ಕರ್ನಾಟಕದ ಅಬಕಾರಿ ಇಲಾಖೆಯಿಂದ ನಿಮಗೊಂದು ಸಖತ್ ಗುಡ್ ನ್ಯೂಸ್ ಸಿಕ್ಕಿದೆ. ಏನಪ್ಪಾ ಅದು ಅಂತಾ ಯೋಚಿಸ್ತಿದ್ಧೀರಾ? ಹಾಗಾದ್ರೆ ಈ ಸ್ಟೋರಿ ನೋಡಿ.

ಕರ್ನಾಟಕದಲ್ಲಿ ಇದುವರೆಗೂ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಯಾರಿಗೂ ಮಧ್ಯಮಾರಾಟ ಮಾಡುವಂತಿಲ್ಲ ಎಂಬ ನಿಯಮವಿತ್ತು. ಆದರೆ ಇದೀಗ ಈ ನಿರ್ಭಂಧವನ್ನು ಕರ್ನಾಟಕ ಅಬಕಾರಿ ಇಲಾಖೆ ಸಡಿಲ ಮಾಡಿದೆ. ಹೌದು 21 ವರ್ಷಗಳ ವಯಸ್ಸಿನ ಮಿತಿಯನ್ನು 18 ವರ್ಷಗಳಿಗೆ ಇಳಿಕೆ ಮಾಡಲು ಕರ್ನಾಟಕ ಅಬಕಾರಿ ಪರವಾನಗಿಗಳ ನಿಯಮಗಳು–1967ಕ್ಕೆ ತಿದ್ದುಪಡಿ ತರಲಾಗುತ್ತಿದೆ.

ಇದುವರೆಗೂ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ’ ಎಂದು ಸೆಕ್ಷನ್‌ 10 (1) (ಇ)ನಲ್ಲಿ ಹೇಳಲಾಗಿತ್ತು. ಆದರೀಗ ಅದನ್ನು ಸರ್ಕಾರ ಬದಲಿಸಿರುವ ಕಾರಣ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ಪ್ರಸ್ತಾಪವನ್ನು ಸಲ್ಲಿಸಲಾಗುವುದು ಎಂದು ಇಲಾಖೆ ಮಾಹಿತಿ ನೀಡಿದೆ.

ಅಬಕಾರಿ ನಿಯಮಗಳಿಗೆ ತಿದ್ದುಪಡಿ ತರಲು ಇಲಾಖೆಯು ಸಿದ್ಧಪಡಿಸಿರುವ ಕರಡು ಪ್ರತಿಯನ್ನು ಸೋಮವಾರ ಅಂದರೆ ಜನವರಿ 9ರ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಕರ್ನಾಟಕ ಅಬಕಾರಿ ಪರವಾನಗಿಗಳು (ಸಾಮಾನ್ಯ ಷರತ್ತುಗಳು) ನಿಯಮಗಳು–1967ರ ಸೆಕ್ಷನ್‌ 10 (1) (ಇ) ಅಡಿಯಲ್ಲಿ ಮದ್ಯ ಖರೀದಿದಾರನ ವಯಸ್ಸಿಗೆ ವಿಧಿಸಿದ್ದ ನಿರ್ಬಂಧವನ್ನು ಸಡಿಲಿಸುವ ಉಲ್ಲೇಖ ತಿದ್ದುಪಡಿಯು ಈ ಕರಡಿನಲ್ಲಿದ್ದು ಯೂತ್ಸ್ ಗಂತೂ ಸಂತೋಷದ ಹೊನಲು ಹರಿಸಿದಂತಾಗಿದೆ.

ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಅಬ್ಬರ ಬೇರೆ ಜೋರಾಗಿದೆ. ಈಗ ತಾನೆ ಹೊಸ ವರ್ಷದ ಹೊಸ್ತಿಲನ್ನೂ ದಾಟಿದ್ದೇವೆ. ಇವೆಲ್ಲದರ ನಡುವೆ ಸರ್ಕಾರ ಯುವಕ ಯುವತಿಯರಿಗೆ ಈ ಗುಡ್ ನ್ಯೂಸ್ ನೀಡಿದ್ದು, ಮಧ್ಯಪ್ರಿಯ ಯೂತ್ಸ್ ಎಲ್ಲರೂ ರಾಕ್ ಆಗುವಂತೆ ಮಾಡಿದೆ. ಕದ್ದು ಮುಚ್ಚಿ ಸುರಪಾನ ಗೈಯ್ಯುತ್ತಿದ್ದವರೆಲ್ಲರೂ ಇದೀಗ ಎದುರು ಬದುರು ಕುಳಿತು ಎಣ್ಣೆ ಹೊಡೆಯಲು ಸರ್ಕಾರ ಅನುವು ಮಾಡಿಕೊಟ್ಟು ಮೀಸೆ ಹುಟ್ಟೋ ಮೊದ್ಲೇ ಸೀಸೆಗೆ ಪರ್ಮಿಟ್ ನೀಡಿದಂತಾಗಿದೆ.

ಒಟ್ಟಿನಲ್ಲಿ ಇದರ ಕುರಿತು ಇನ್ನು ಪರ ವಿರೋಧಗಳ ಚರ್ಚೆಗಳೂ ಆರಂಭ ಆಗಬಹುದು. ಮುಖ್ಯವಾಗಿ ಪೋಷಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿಬಹುದು ಎಂಬ ಮಾಹಿತಿಗಳು ಬಂದಿವೆ. ಯಾಕೆಂದರೆ ಮಕ್ಕಳ ಭವಿಷ್ಯದ ಬಗ್ಗೆ ಹೆತ್ತವರು ಹೆಚ್ಚಿನ ಕನಸಿಟ್ಟುಕೊಂಡಿರುತ್ತಾರೆ. ಆದರೆ ಇಂತಹ ನಿಯಮ ಸಡಿಲಿಕೆಗಳಿಂದ ಮಕ್ಕಳ ಅಡ್ಡ ದಾರಿಗಳಿಗೆ ಸರ್ಕಾರ ಸುಗಮದಾರಿ ಕರುಣಿಸಿದಂತಾಗುತ್ತದೆ ಎಂಬುದು ಅವರ ವಿರೋಧಕ್ಕೆ ಕಾರಣ ಎನ್ನಬಹುದು.

Leave A Reply

Your email address will not be published.