ಅಸಲಿ ಚಿನ್ನವನ್ನು ನಕಲಿ ಎಂದು ಭಾವಿಸಿ ತಿಪ್ಪೆಗೆಸೆದ ಕಳ್ಳರು! ಕದ್ದ ಚಿನ್ನವನ್ನು ತಿಪ್ಪೆಗೆಸೆಯಲು ಕಾರಣವೇನು ಗೊತ್ತೆ?
ಚಿನ್ನದಂತೆ ಹೊಳೆಯುವ ಯಾವ ವಸ್ತುವನ್ನಾದರೂ ಕೂಡ ನಾವುಗಳು ಇದು ಚಿನ್ನವೋ, ಅಲ್ಲವೋ ಎಂದು ಒಮ್ಮೆಯಾದರೂ ಪರೀಕ್ಷಿಸುತ್ತೇವೆ. ಆದರೆ ಇಲ್ಲೊಂದು ಕಳ್ಳರ ತಂಡ ಕದ್ದ ಅಸಲಿ ಚಿನ್ನವನ್ನೇ ನಕಲಿ ಎಂದು ಭಾವಿಸಿ ತಿಪ್ಪೆಗೆ ಬಿಸಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕುವೆಂಪುನಗರದ ಮನೆಯೊಂದಕ್ಕೆ ನುಗ್ಗಿದ್ದ ನಾಲ್ವರು ಕಳ್ಳರ ಗ್ಯಾಂಗ್ ಒಂದು ಮನೆಯಲ್ಲಿದ್ದ ಸಿಸಿಟಿವಿಗಳನ್ನು ತಿರುಚಿ 19 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಳವು ಮಾಡಿದ್ದರು. ನಂತರ ಅದನ್ನು ಜ್ಯೂವೆಲ್ಲರಿ ಶಾಪ್‌ವೊಂದಕ್ಕೆ ಮಾರಾಟ ಮಾಡಲು ಹೋಗಿದ್ದಾರೆ.
ಕಳ್ಳರು ಚಿನ್ನವನ್ನು ಅಂಗಡಿ ಮಾಲೀಕನಿಗೆ ನೀಡಿದಾಗ ಮಾಲೀಕನಿಗೆ ಇದು ಕಳವು ವಸ್ತು ಅನ್ನೋದು ಗೊತ್ತಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಮಾಲಿಕ ಬುದ್ದಿವಂತಿಕೆಯಿಂದ ಇದು ನಕಲಿ ಚಿನ್ನ, ಯಾವುದಕ್ಕೂ ಉಪಯೋಗವಾಗದು ಎಂದಿದ್ದಾನೆ. ಇದರಿಂದ ನಿರಾಸೆಗೊಂಡ ಕಳ್ಳರು ವಾಪಸು ಬರುವಾಗ ದಾರಿಯಲ್ಲಿ ಕಂಡ ಕಸದ ರಾಶಿಗೆ ಪೂರ್ತಿ ಚಿನ್ನವನ್ನು ಎಸೆದು ಹೋಗಿದ್ದಾರೆ.
ಕಳ್ಳರು ವಾಪಸ್ ಹೋದುದನ್ನು ಖಚಿತಪಡಿಸಿಕೊಂಡ ನಂತರ ಚಿನ್ನದಂಗಡಿ ಮಾಲೀಕನು ರಾಮಮೂರ್ತಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಅಲರ್ಟ್ ಆದ ಪೊಲೀಸರು, ಕಸದಲ್ಲಿ ಬಿಸಾಕಿದ್ದ ಚಿನ್ನವನ್ನು ಹುಡುಕಿ ವಾಪಸ್ ತಂದಿದ್ದಾರೆ. ತಿಪ್ಪೆಯಲ್ಲಿದ್ದ ಚಿನ್ನವು 19 ಲಕ್ಷ ಮೌಲ್ಯದಷ್ಟು ಬೆಲೆಬಾಳುತ್ತಿತ್ತು.
ಚಿನ್ನವನ್ನು ಹುಡುಕಿ ತಂದ ಪೋಲಿಸರು ಕಳೆದುಕೊಂಡವರಿಗೆ ಹಿಂದಿರುಗಿಸಿದ್ದಾರೆ. ಬಳಿಕ ಈ ಸಂಬಂಧ ದೂರು ದಾಖಲಿಸಿಕೊಂಡು ವೆಂಕಟೇಶ್, ಹರೀಶ್, ರಾಜೇಶ್ ಅಲಿಯಾಸ್ ಕ್ರ್ಯಾಕ್ ಹಾಗೂ ರಾಜ್ ಕಿರಣ್ ಎಂಬವರನ್ನು ಬಂಧಿಸಿದ್ದಾರೆ. ಇದೀಗ ವಿಚಾರಣೆ ನಡೆಯುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.