ಬೆಳಗಾವಿಯಲ್ಲಿ ವಿಶ್ವ ಹಿಂದೂ ಅಂತರ್ಜಾತಿ ವಿವಾಹಿತರ ಸಮಾವೇಶ | ಲವ್ ಜಿಹಾದ್ ತಡೆಗಟ್ಟಲು ಆಯೋಜನೆ!!

ಭಾರತದಾದ್ಯಂತ ಇಂದು ಅಂತರ್ಜಾತಿ ವಿವಾಹದ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಹಲವರು ಇದಕ್ಕೆ ಪ್ರೋತ್ಸಾಹ ನೀಡಿದರೆ ಇನ್ನು ಕೆಲವರು ಇದನ್ನು ವಿರೋದಿಸುತ್ತಲೇ ಬಂದಿದ್ದಾರೆ. ತನ್ನ ಧರ್ಮದವರಲ್ಲದ ಇತರ ಧರ್ಮದ ಯುವಕ, ಯುವತಿಯರನ್ನು ಮದುವೆಯಾಗುವುದನ್ನು ಹಾಗೂ ಲವ್ ಜಿಹಾದ್ ನಂತಹ ಪ್ರಕರಣಗಳನ್ನು ತಪ್ಪಿಸುವ ಸಲುವಾಗಿ ಮತ್ತು ಮುಖ್ಯವಾಗಿ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡುವ ಸಲುವಾಗಿ ಇಂದು ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸುವುದು ಸೂಕ್ತ ಎಂಬುದು ಅದರ ಪರವಾಗಿರುವವರ ವಾದ. ಈ ಹಿನ್ನೆಲೆಯಲ್ಲಿ ಇದೀಗ ವಿಶ್ವ ಹಿಂದೂ ಅಂತರ್ಜಾತಿ ವಿವಾಹ ಪ್ರೋತ್ಸಾಹ ಸಂಘವು ಹುಟ್ಟುಕೊಂಡಿದ್ದು, ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಅಂತರ್ಜಾತಿ ವಿವಾಹಿತರ ಸಮಾವೇಶ ಕೂಡ ನಡೆಯಲಿದೆ.

ಬರುವ ಜನವರಿ, ದಿನಾಂಕ 4 ಮತ್ತು 5 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮನ್ನಿಕೇರಿಯ ಶ್ರೀ ಮಹಾಂತಲಿಂಗೇಶ್ವರ ಮಠದಲ್ಲಿ ವಿಶ್ವ ಹಿಂದೂ ಅಂತರ್ಜಾತಿ ವಿವಾಹಿತರ ಸಮಾವೇಶ ನಡೆಯಲಿದೆ ಎಂದು ವಿಶ್ವ ಹಿಂದೂ ಅಂತರ್ಜಾತಿ ವಿವಾಹ ಪ್ರೋತ್ಸಹ ಸಂಘದ ಗೌರವಾಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ತಿಳಿಸಿದ್ದಾರೆ. ಸಮಾಜದಲ್ಲಿ ಮೇಲು , ಕೀಳು , ತಾರತಮ್ಯ ಭಾವನೆಗಳನ್ನು ನಿವಾರಣೆ ಮಾಡಿ ಹಿಂದೂಗಳಲ್ಲಿ ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲು ವ್ಯಾಪಕ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಅಂತರ್ಜಾತಿ ವಿವಾಹವಾದ ದಂಪತಿಗಳನ್ನು ಗೌರವಿಸುವುದು, ಅವರ ಸಂಕಷ್ಟಗಳಿಗೆ ಸ್ಪಂಧಿಸುವುದು, ದಂಪತಿಗಳಿಗೆ ಪ್ರೋತ್ಸಾಹ ನೀಡುವ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿ ಕೊಡುವುದು ಮತ್ತು ಲವ್ ಜಿಹಾದ್ ನಂಥ ಪ್ರಕರಣಗಳನ್ನು ಹಾಗೂ ಹಿಂದೂಗಳು ಮತಾಂತರವಾಗುವುದನ್ನು ತಡೆಗಟ್ಟಲು ಇಂತಹ ಸಮ್ಮೇಳನಗಳನ್ನು ನಡೆಸುವುದು ಅವಶ್ಯವಾಗಿದೆ ಎಂದು ಅವರು ಹೇಳಿದರು.

ಸಮ್ಮೇಳನದಲ್ಲಿ ರಾಜಕೀಯ ಗಣ್ಯಮಾನ್ಯರು, ಸಮಾಜದ ಮುಖಂಡರು ಹಾಗೂ ಹಲವು ಮಠದ ಸ್ವಾಮಿಗಳು ಪಾಲ್ಗೊಳ್ಳಲಿದ್ದಾರೆ. ಜನವರಿ 4 ರಂದು ಬುಧವಾರ ಬೆಳಿಗ್ಗೆ 10 ಗಂಟೆಗೆ ಅಂತರ್ಜಾತಿ ವಿವಾಹಿತರ ಸ್ನೇಹ ಸಮ್ಮೇಳನವನ್ನು ಸತೀಶ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ. ಮಠದ ಅಧ್ಯಕ್ಷರಾದ ವಿಜಯಸಿದ್ಧೇಶ್ವರ ಸ್ವಾಮೀಜಿ, ಡಾ. ಆರೂಢಭಾರತೀ ಸ್ವಾಮೀಜಿ ಮೊದಲಾದವರು ಪಾಲ್ಗೊಳ್ಳುತ್ತಾರೆ. ಹಾಗೂ ರಾತ್ರಿ 7.30ಕ್ಕೆ ನಡೆಯುವ ವಿರಾಟ್ ಹಿಂದೂ ಧರ್ಮ ಜಾಗೃತಿಯ ಸಮಾವೇಶವನ್ನು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ.

ಈ ಸಮ್ಮೇಳನದಲ್ಲಿ ಜಾತ್ಯಾತೀತ ಜ್ಯೋತಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು. ಅಂತರ್ಜಾತಿ ವಿವಾಹಿತ ಹಿಂದೂ ಮಾತೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ನಡೆಸಲಾಗುವುದು. ಜೊತೆಗೆ ಎಲ್ಲರೂ ಒಂದೇ ಎಂಬ ಭಾವನೆ ಬೆಳೆಸಲು ಸಹಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಾಹಿತಿ ದೊರೆತಿದೆ.

ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಅಂತರ್ಜಾತಿ ವಿವಾಹಿತರು ಸದಸ್ಯರಿರುವ ಈ 2021ರಲ್ಲಿ ರಾಜ್ಯ ಮಟ್ಟದ ಈ ವಿಶ್ವ ಹಿಂದೂ ಅಂತರ್ಜಾತಿ ವಿವಾಹ ಪ್ರೋತ್ಸಾಹ ಸಂಘವು ಹಿಂದುಗಳಲ್ಲಿನ ಮೇಲು- ಕೀಳು, ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು 2021ರಲ್ಲಿ ಮನ್ನಿಕೇರಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ. ಪ್ರಸ್ತುತ ಸಂಘದ ಗೌರವಾಧ್ಯಕ್ಷರಾಗಿ ಬೆಂಗಳೂರಿನ ರಾಮೋಹಳ್ಳಿಯ ಸಿದ್ಧಾರೂಢ ಮಿಷನ್‌ ಆಶ್ರಮದ ಡಾ. ಆರೂಢ ಭಾರತಿ ಸ್ವಾಮೀಜಿ , ಕಾರ್ಯನಿರ್ವಹಿಸುತ್ತಿದ್ದು, ಉಪಾಧ್ಯಕ್ಷರಾಗಿ ರಾಮದುರ್ಗದ ಶ್ರೀ ಸಿದ್ಧಾರೂಢ ಮಠದ ಶ್ರೀ ಜಗದಾತ್ಮಾನಂದ ಸ್ವಾಮೀಜಿ , ಪ್ರಧಾನ ಕಾರ್ಯದರ್ಶಿ ಕಲ್ಲಯ್ಯಾ ಈ ಹಿರೇಮಠ ಕಾರ್ಯನಿರ್ವಹಿಸುತ್ತಿದ್ದಾರೆ.

Leave A Reply

Your email address will not be published.