ಹುಡುಗಿಗೆ 18 ವರ್ಷ ಆಗಿಲ್ಲವೆಂದು ಕಾದ ಪ್ರಿಯಕರ | ನಂತರ ಮದುವೆಯಾದ, ಆದರೆ ತನಗೆ ಮದುವೆ ವಯಸ್ಸು ಆಗಿಲ್ಲ ಎಂದು ಮರೆತ, ಮುಂದೇನಾಯ್ತು?

ವಿವಾಹ ಆಗಲು ಗಂಡು ಮತ್ತು ಹೆಣ್ಣಿಗೆ ವಯಸ್ಸಿನ ಮಿತಿ ಇರುವ ವಿಚಾರ ಈಗಾಗಲೇ ತಿಳಿದಿರುವ ವಿಚಾರ. ಹೆಚ್ಚಾಗಿ ಅಪ್ರಾಪ್ತ ಹುಡುಗಿಯನ್ನು ಮದುವೆ ಮಾಡಿ ಕೊಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ ಆದರೆ ಇಲ್ಲೊಬ್ಬ ಅಪ್ರಾಪ್ತ ಹುಡುಗ ವಿವಾಹ ಆಗಿರುವ ಘಟನೆ ಬೆಳಕಿಗೆ ಬಂದಿದೆ.

 

ಹೌದು ಅಪ್ರಾಪ್ತನೋರ್ವ ಯುವತಿಯನ್ನು ಮದುವೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಮದುವೆಗೆ ಕಾನೂನಿನಲ್ಲಿ ಮಾನ್ಯತೆ ಇಲ್ಲ ಎಂದು ತಿಳಿಸಿರುವ ಪೊಲೀಸರು ಆರೋಪಿಗಳನ್ನು ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಬಂಧಿಸಿದ್ದಾರೆ.

ನೀಲಸಂದ್ರದಲ್ಲಿ ವಾಸವಾಗಿದ್ದ ಬಾಲಕ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಯುವತಿ ಕೂಡ ಇದೇ ಪ್ರದೇಶದಲ್ಲಿ ವಾಸವಾಗಿದ್ದಳು. ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಪರಸ್ಪರ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಯುವತಿಗೆ 18 ವರ್ಷ ಆಗುವವರೆಗೆ ಕಾದ ಅಪ್ರಾಪ್ತ ಮನೆಯವರ ವಿರೋಧದ ನಡುವೆಯೂ ಕಳೆದ ನ.4 ರಂದು ತಮಿಳುನಾಡಿನ ತಿರುವಳ್ಳೂರು ಓಡಿಹೋಗಿ ಮದುವೆ ಮಾಡಿಕೊಂಡಿದ್ದರು. ಇತ್ತ ಯುವತಿ ನಾಪತ್ತೆಯಾಗಿರುವ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿ ಯುವಕನ ಬಗ್ಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇದೇ ಡಿಸೆಂಬರ್ 23ರಂದು ತಿರಿವಳ್ಳೂರಿನಲ್ಲಿ ಇಬ್ಬರನ್ನು ಪತ್ತೆ ಹಚ್ಚಿ ನಗರಕ್ಕೆ ಕರೆತಂದಿದ್ದರು.

ಪೊಲೀಸ್ ವಿಚಾರಣೆಯ ವೇಳೆ ಕಾನೂನು ಪ್ರಕಾರವೇ ಯುವತಿ ಒಪ್ಪಿಗೆ ಪಡೆದೇ ಮದುವೆಯಾಗಿದ್ದೇನೆ ಎಂದು ಯುವಕ ವಾದಿಸಿದ್ದ. ಯುವತಿಯೂ ಪ್ರಿಯಕರನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಳು. ಇಬ್ಬರ ಆಧಾರ್ ಕಾರ್ಡ್ ತರಿಸಿಕೊಂಡು ಪರಿಶೀಲಿಸಿದಾಗ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಹುಡುಗಿಗೆ 18 ವರ್ಷ ತುಂಬಿದ್ದರೆ ಹುಡುಗನಿಗೆ 20 ವರ್ಷ 6 ತಿಂಗಳು ಮಾತ್ರ ಆಗಿತ್ತು. ಕಾನೂನು ಪ್ರಕಾರ ಮದುವೆ ಮಾಡಿಕೊಳ್ಳಲು ಹುಡುಗನ ವಯಸ್ಸು 21 ಆಗಿರಬೇಕು. ಹೀಗಾಗಿ ಇಬ್ಬರ ನಡುವಿನ ವಿವಾಹಕ್ಕೆ ಕಾನೂನು ಮಾನ್ಯತೆಯಿಲ್ಲ.

ಇದೀಗ ಮದುವೆ ಮಾಡಿಸಿದ ಆರೋಪದಡಿ ಹುಡುಗನ ಅಕ್ಕ ಹಾಗೂ ಸ್ನೇಹಿತನನ್ನು ಬಾಲ್ಯವಿವಾಹ ತಡೆ ಕಾಯ್ದೆಯಡಿ ಬಂಧಿಸಿ ಠಾಣಾ ಜಾಮೀನಿನ ಮೇರೆಗೆ ಬಿಟ್ಟುಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

Leave A Reply

Your email address will not be published.