Chamarajanagara: 3 ನೇ ತರಗತಿ ಬಾಲಕಿಗೆ ಹಾರ್ಟ್ ಅಟ್ಯಾಕ್!

Chamarajanagara: ಜ.06 (ಇಂದು) ಸೋಮವಾರ ವಿದ್ಯಾರ್ಥಿನಿಯೋರ್ವಳು ಕುಸಿದು ಬಿದ್ದು ಮೃತಪಟ್ಟ ಘಟನೆಯೊಂದು ನಗರದ ಶಾಲೆಯಲ್ಲಿ ನಡೆದಿದೆ. ಮಗುವಿನ ಸಾವಿಗೆ ಕಾರಣವಾಗಿದ್ದು ಹಾರ್ಟ್ ಅಟ್ಯಾಕ್. ತರಗತಿಯಲ್ಲಿ ಕುಳಿತಲ್ಲಿಯೇ ಕಾರ್ಡಿಯಾಕ್ ಅರೆಸ್ಟ್ ಆಗಿ ಬಿದ್ದಿದ್ದ ಹುಡುಗಿ ಅನಂತರ ಮೇಲೇಳಲೇ ಇಲ್ಲ.
ಬೆಳಗ್ಗೆ ಎಂದಿನ ಹಾಗೆ ನಗು ನಗುತ್ತಾ, ಕೈ ಬೀಸಿ ಸಂಜೆ ಮನೆಗೆ ಬರುವೆ ಅಮ್ಮ ಎಂದು ಹೇಳಿ ಹೋದ ಮಗಳು, ಮಧ್ಯಾಹ್ನದೊತ್ತಿಗೆ ಹೆಣವಾಗಿ ಬಂದಿದ್ದಾಳೆ. ಪೋಷಕರ ಆಕ್ರಂದನ ಹೇಳತೀರದು.
ತಾಲೂಕಿನ ಬದನಗುಪ್ಪೆ ಗ್ರಾಮದ ಲಿಂಗರಾಜು ಎಂಬುವರ ಪುತ್ರಿ ತೇಜಸ್ವಿನಿ (08) ಎಂಬಾಕೆಯೇ ಸಾವಿಗೀಡಾದ ಬಾಲಕಿ.
ತೇಜಸ್ವಿನಿ ಸಂತ ಫ್ರಾನ್ಸಿಸ್ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದು, ಶಾಲೆಯಲ್ಲಿದ್ದ ಸಂದರ್ಭದಲ್ಲಿ ಸೋಮವಾರ ಬೆಳಗ್ಗೆ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಶಾಲೆಯವರು ಜೆಎಸ್‌ಎಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿ ಮಗುವನ್ನು ಪರಿಶೀಲಿಸಿದ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಇನ್ನು ಈ ಘಟನೆಯ ಕುರಿತು ಶಾಲೆಯ ಮುಖ್ಯೋಪಾಧ್ಯಾಯ ಪ್ರಭಾಕರ್ ಅವರು ಮಾಧ್ಯಮವೊಂದಕ್ಕೆ ತಮ್ಮ ಪ್ರತಿಕ್ರಿಯೆ ನೀಡಿದ್ದು, ಎರಡು ಪಿರಿಯಡ್ ಆದ ನಂತರ ಶಾರ್ಟ್ ಬ್ರೇಕ್ ಇತ್ತು. ಈ ಸಮಯದಲ್ಲಿ ನೋಟ್‌ಬುಕ್ ಹಿಡಿದು ತೇಜಸ್ವಿನಿ ಬಂದಿದ್ದು, ಕೂಡಲೇ ಕುಸಿದು ಬಿದ್ದಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಚೆಸ್ಟ್ ಮಸಾಜ್, ಇಸಿಜಿ ಮಾಡಿಸಿದ್ದು, ಆದರೆ ವೈದ್ಯರು ಬಾಲಕಿ ಹೃದಯಾಘಾತದಿಂದ ಮೃತ ಹೊಂದಿರುವಾಗಿ ಹೇಳಿದ್ದಾರೆ.
ಪೋಷಕರಿಗೆ ಮಾಹಿತಿ ನೀಡಿದ್ದು, ಪೋಸ್ಟ್ ಮಾರ್ಟಂಗೆ ಪೋಷಕರು ಒಪ್ಪಲಿಲ್ಲ. ಬದನಗುಪ್ಪೆಯ ನಿವಾಸಕ್ಕೆ ಮೃತದೇಹ ಕಳುಹಿಸಿಕೊಡಲಾಗಿದೆ ಎಂಬ ಮಾಹಿತಿಯನ್ನು ಮಾಧ್ಯಮಕ್ಕೆ ನೀಡಿದ್ದಾರೆ.
ಇತ್ತ ಪೋಷಕರಿಗೆ ತೇಜಸ್ವಿನಿ ಒಬ್ಬಳೇ ಮಗಳಾಗಿದ್ದು, ಮಗುವನ್ನು ಕಳೆದುಕೊಂಡ ದಂಪತಿ ದುಃಖ ಹೇಳತೀರದು.
Comments are closed.