Areca Nut : ಅಡಕೆ ಬೆಲೆ ಕುಸಿತ | ಬೆಳೆಗಾರರಲ್ಲಿ ಆತಂಕ

ಶಿವಮೊಗ್ಗದಲ್ಲಿ  ರೈತರ ಮೊಗದಲ್ಲಿ ಸಂತಸ ತರಿಸಿ ನೆಮ್ಮದಿಯ ನಿಟ್ಟುಸಿರ ಬಿಡಲು ಕಾರಣವಾಗಿದ್ದ ಅಡಕೆ ಧಾರಣೆ ಏರಿಕೆ ಕಂಡಿದ್ದು, ಇದೀಗ ದಿಡಿರ್ ಕುಸಿತ ಕಂಡಿದ್ದು ಮತ್ತೊಮ್ಮೆ ರೈತರಿಗೆ ಹತಾಶೆ ಉಂಟು ಮಾಡಿದೆ.


ಇಡಿ ಮಾದರಿ ಅಡಕೆ ಪ್ರತಿ ಕ್ವಿಂಟಲ್‌ಗೆ ಸರಾಸರಿ 11-12 ಸಾವಿರ ರೂ.ಇಳಿಕೆ ಕಂಡಿದ್ದು, ದರ ಏರಿಕೆ ಕಂಡ ಸಂದರ್ಭ ಇನಷ್ಟು ಏರಿಕೆಯಾಗುವ ನಿರೀಕ್ಷೆ ಹೊಂದಿದ್ದ ರೈತರು ಅಡಕೆ ಮಾರಾಟ ಮಾಡದೇ ಬಾಕಿ ಉಳಿಸಿಕೊಂಡವರು  ಪರದಾಡುವ ಸ್ಥಿತಿ ಉದ್ಭವ ವಾಗಿದೆ.

2022ರ ಆಗಸ್ಟ್‌ 1 ರಂದು ರಾಶಿಇಡಿ  ಮಾದರಿಯ ಅಡಕೆ ಗರಿಷ್ಠ ಕ್ವಿಂಟಲ್‌ಗೆ 38,320 ರೂ. ಇದ್ದ ದರ  ಏರಿಕೆ ಕಂಡು  ತಿಂಗಳಾಂತ್ಯಕ್ಕೆ ರಾಶಿಇಡಿ ಮಾದರಿಯ ಅಡಕೆ ಕ್ವಿಂಟಲ್‌ ಒಂದಕ್ಕೆ ಗರಿಷ್ಠ 54 ಸಾವಿರ ರೂಪಾಯಿ ಗೆ ತಲುಪಿತ್ತು. ಸೆ. 1 ರಂದು ಕ್ವಿಂಟಲ್‌ಗೆ 55 ಸಾವಿರ ರು. ತಲುಪಿದ ಅಡಕೆ ಬಳಿಕ ಇಳಿಕೆ ಕಾಣುತ್ತಾ ಬಂದಿದೆ. ಈ ವೇಳೆಯಲ್ಲಿಯೇ ಮಾರುಕಟ್ಟೆ ವಿಶ್ಲೇಷಕರಲ್ಲಿ ಕೆಲವರು ದರ ಇಳಿಕೆಯ ಸೂಚನೆ ಕೂಡ ನೀಡಿದ್ದರು. ತಾವು ಬೆಳೆದ ಬೆಳೆಗೆ ಕೊಂಚ ಮಟ್ಟಿಗಾದರು ಲಾಭ ಸಿಗಲಿ ಎಂಬ ಅಭಿಲಾಷೆ ಹೊತ್ತು ರೈತರು 60 ಸಾವಿರ ರು. ಮುಟ್ಟಬಹುದೆಂದು ಅಡಕೆಯನ್ನು ಮಾರಾಟ ಮಾಡದೆ ದಾಸ್ತಾನು ಮಾಡಿದ್ದಾರೆ.

ಇಳಿಕೆಯ ಹಾದಿ ಹಿಡಿದಿದ್ದ ಅಡಕೆ ನವಂಬರ್‌ ಮೊದಲ ವಾರದಲ್ಲಿ 48 ಸಾವಿರಕ್ಕೆ ಇಳಿದರೆ, ಮಾಸಾಂತ್ಯಕ್ಕೆ 47 ಸಾವಿರದಲ್ಲಿ ಸ್ಥಿರವಾಗಿತ್ತು. ಡಿಸೆಂಬರ್‌ ಮೊದಲ ವಾರದಲ್ಲಿ ಮತ್ತೆ ಕುಸಿತ ಕಂಡು ನ. 6 ರಲ್ಲಿ ಪ್ರತಿ ಕ್ವಿಂಟಾಲ್‌ಗೆ 44 ಸಾವಿರಕ್ಕೆ ಇಳಿಕೆ ಕಂಡಿದೆ.

ಮಾರುಕಟ್ಟೆಯಲ್ಲಿ ಬೆಳೆಗಳ ದರ ಹಾವು ಏಣಿಯ ರೀತಿ ಒಮ್ಮೆ ಏರಿಕೆ ಕಂಡರೆ ಮತ್ತೊಮ್ಮೆ ದಿಡಿರನೆ ಕುಸಿಯುತ್ತದೆ.ಈ ಇಳಿಕೆ ಗತಿ ನಿಲ್ಲುವಂತೆ ಕಂಡು ಬರುತ್ತಿಲ್ಲ ಅಷ್ಟೆ ಅಲ್ಲದೆ, 40 ಸಾವಿರಕ್ಕೆ ಬಂದು ನಿಲ್ಲುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.  ಹೀಗೆ, ಆಗಾಗ ಬೆಲೆಯಲ್ಲಿ ಏರಿಕೆ – ಇಳಿಕೆ ಕಂಡು ಬರುತ್ತಿರುವುದರಿಂದ ರೈತರು ಮಾರುಕಟ್ಟೆಯ ಸ್ಥಿತಿಗತಿ ಬಗ್ಗೆ ಪರಾಮರ್ಶೆ ನಡೆಸಲು ಆಗದೆ ಪರದಾಡುತ್ತಿದ್ದು, ಈ ಏರಿಕೆ ಕಂಡ ಅಡಿಕೆ ಬೆಲೆಯ ದರ ಇದ್ದಕ್ಕಿಂದಂತೆ ಇಳಿಕೆ ಕಾಣಲು ಕಾರಣವೇನು??? ಎಂಬ ಪ್ರಶ್ನೆ ಸಹಜವಾಗಿ ಮೂಡಿದ್ದು, ಉತ್ತರ ಮಾತ್ರ ಕಂಡು ಕೊಳ್ಳಲು ಸಾಧ್ಯವಾಗಿಲ್ಲ.

ಕೇವಲ ನಮ್ಮ ಯೋಚನಾಶಕ್ತಿಯ ಅನುಸಾರ , ಇಲ್ಲವೇ ತಿಳಿವಳಿಕೆಯ ಮೂಲಕ  ಬಂದಿರುವ ಮಾಹಿತಿಯನ್ನು  ವಿಶ್ಲೇಷಣೆ ನಡೆಸಿ ಊಹಿಸಬಹುದು ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .

ಇದರ ಜೊತೆಗೆ ಉತ್ತರ ಭಾರತದಲ್ಲಿ ಚಳಿ ಶುರುವಾಗುತ್ತಿದ್ದಂತೆ ಜನ ಮನೆಯಿಂದ ಹೊರ ಬರುವುದು ಕಡಿಮೆಯಾಗುತ್ತಿದ್ದು, ಇದರಿಂದ ಗುಟ್ಕಾ ಬಳಕೆ ಕಡಿಮೆಯಾಗುತ್ತಿದೆ. ಇದು ಹಿಂದಿನಿಂದಲೂ ನಡೆದು ಬಂದಿದ್ದು, ಉತ್ತರ ಭಾರತದ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಇಲ್ಲಿ ದರ ಕುಸಿಯುತ್ತದೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲಾಗಾಯ್ತಿನಿಂದಲೂ ಅಡಕೆ ದರ ಏರಿಳಿತ ಕಂಡು ಬರುತ್ತಿದ್ದು, ಇದಕ್ಕೆ ಸರಿಯಾದ ಕಾರಣ ತಿಳಿಯಲು ಆಗುತ್ತಿಲ್ಲ.  ಇದರಲ್ಲಿ ಕೆಲವು ಪ್ರಭಾವಿ ಮತ್ತು ಅತಿ ಸಾಮರ್ಥ್ಯದ ವ್ಯಕ್ತಿಗಳ ಕೈವಾಡ ಮಾತ್ರ ಇರಬಹುದು ಎನ್ನಲಾಗುತ್ತಿದೆ.

ಇಷ್ಟೇ ಅಲ್ಲದೆ, ಗುಜರಾತ್‌ ಚುನಾವಣೆಯ ಸಂದರ್ಭ ನಡೆದಿದೆ  ಎನ್ನಲಾದ ಇಡಿ ರೈಡ್‌ಗಳು, ಬಿಲ್‌ ಇಲ್ಲದ ನೂರಾರು ಲೋಡ್‌ ಅಡಕೆಯನ್ನು ಸೀಜ್‌ ಮಾಡಿರುವುದು ಹಣದ ಹರಿವಿಗೆ ತೊಡಕು ಉಂಟು ಮಾಡಿದೆ ಎನ್ನಲಾಗಿದೆ.

ಈಗಾಗಲೆ ಇಳಿಕೆ ಕಂಡಿರುವ ಅಡಿಕೆ ದರ, ಮತ್ತೊಮ್ಮೆ  ಇನ್ನಷ್ಟು ಇಳಿಯಬಹುದೆಂದು ಊಹಿಸಲಾಗಿದ್ದು,  ಆದರೀಗ ರೈತರು ತಮ್ಮ ಅಡಕೆಯನ್ನು  ಮಾರಾಟ ಮಾಡುವ ಅನಿವಾರ್ಯ ಸ್ಥಿತಿಯಲ್ಲಿದ್ದು, ಒಂದೆಡೆ ಧಾರಣೆ ಇಳಿಯುತ್ತಿರುವುದು ಕಾರಣವಾಗಿದ್ದು,  ಮತ್ತೊಂದೆಡೆ,  ಹೊಸ ಅಡಕೆ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಬರುತ್ತಿದ್ದು, ಬೇಡಿಕೆ ಕಡಿಮೆಯಾಗುತ್ತಿದೆ.  ಇದು ಕೂಡ ಧಾರಣೆ ಇಳಿಕೆಗೆ ಪೂರಕ ವಾತಾವರಣ ನಿರ್ಮಿಸಿದಂತಾಗಿದೆ

Leave A Reply

Your email address will not be published.