Varaha Roopam Song: ಮತ್ತೆ ಯೂಟ್ಯೂಬ್ಗೆ ಬಂತು ‘ವರಾಹ ರೂಪಂ’ ಹಾಡು
ಜಗತ್ತಿನಾದ್ಯಂತ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಕಾಂತಾರ’ ಸಿನಿಮಾಗೆ ‘ವರಾಹ ರೂಪಂ..’ ಹಾಡು ದೊಡ್ದ ತಲೆ ನೋವಾಗಿ ಪರಿಣಮಿಸಿದ್ದು, ಈ ಹಾಡನ್ನು ನಕಲಿ ಮಾಡಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಹಾಡನ್ನು ಬ್ಯಾನ್ ಮಾಡಲಾಗಿತ್ತು. ಆದರೆ ಇದೀಗ, ಮತ್ತೆ ವರಾಹ ರೂಪಂ ಹಾಡು ಯೂಟ್ಯೂಬ್ನಲ್ಲಿ ಪ್ರತ್ಯಕ್ಷವಾಗಿದ್ದು, ‘ಕಾಂತಾರ’ ಸಿನಿಮಾ ಕಾನೂನು ಹೋರಾಟದಲ್ಲಿ ಗೆಲುವನ್ನು ಬಾಚಿಕೊಂಡಿತೇ?? ಎಂಬ ಪ್ರಶ್ನೆ ಸಹಜವಾಗಿ ಹುಟ್ಟಿಕೊಂಡಿವೆ.
ರಿಷಬ್ ಶೆಟ್ಟಿ ನಟಿಸಿ, ನಿದೇರ್ಶನ ಮಾಡಿರುವ ‘ಕಾಂತಾರ’ (Kantara Movie) ಚಿತ್ರ ಇಡೀ ದೇಶಾದ್ಯಂತ ಬಿಡುಗಡೆಯಾಗಿ ಭರ್ಜರಿ ಸಕ್ಸಸ್ ಕಂಡಿದೆ.ಕಾಂತಾರ ಸಿನಿಮಾದ ಹವಾ ಎಷ್ಟರಮಟ್ಟಿಗೆ ಇದೆ ಎನ್ನುವುದನ್ನು ವಿವರಿಸಬೇಕಾಗಿಲ್ಲ!! ಬಾಕ್ಸ್ ಆಫೀಸಲ್ಲಿ ಭರ್ಜರಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಸಿನಿಮಾ ಎಲ್ಲ ಹಿಟ್ ಸಿನಿಮಾಗಳ ದಾಖಲೆ ಪುಡಿ ಮಾಡಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಇಂದಿಗೂ ಕನ್ನಡದ ಕಾಂತಾರ ಅರ್ಭಟ ಕಮ್ಮಿ ಆಗಿಲ್ಲ.
ಕಾಂತಾರ’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಡಿ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸಿದ್ದು, ರಿಷಬ್ ಶೆಟ್ಟಿ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ, ಅಜನೀಶ್ ಲೋಕನಾಥ್ ಸಂಗೀತ ಮತ್ತು ಅರವಿಂದ್ ಅವರ ಛಾಯಾಗ್ರಹಣವಿದೆ. ‘ಕಾಂತಾರ’ ಚಿತ್ರವು 50 ದಿನಗಳನ್ನು ಪೂರೈಸಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಸಿನಿಮಾದಲ್ಲಿರುವ ವರಾಹ ರೂಪಂ ಹಾಡು ಎಲ್ಲರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ‘ವರಾಹ ರೂಪಂ..’ಹಾಡು ವಿವಾದದ ”ನವರಸಂ..’ ಹಾಡಿನ ಟ್ಯೂನ್ ‘ವರಾಹ ರೂಪಂ..’ನಲ್ಲಿ ಬಳಕೆ ಆಗಿದೆ ಎಂಬ ಆರೋಪ ಹಲವಾರು ಬಾರಿ ಕೇಳಿಬಂದಿದ್ದು ,ಈ ಹಾಡಿನ ಟ್ಯೂನ್ ಮೇಲೆ ಕೃತಿಚೌರ್ಯದ ಆರೋಪವನ್ನೂ ಕೂಡ ಮಾಡಲಾಗಿತ್ತು.ಮಲಯಾಳಂನ ಖ್ಯಾತ ಮ್ಯೂಸಿಕ್ ಬ್ಯಾಂಡ್ ‘ತೈಕ್ಕುಡಂ ಬ್ರಿಡ್ಜ್’ (Thaikkudam Bridge) ಕೋರ್ಟ್ ಮೆಟ್ಟಿಲೇರಿತ್ತು. ಕೇರಳದ ಕೋಯಿಕ್ಕೋಡ್ ಹಾಗೂ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯಗಳು ಅರ್ಜಿ ವಿಚಾರಣೆಯನ್ನು ಮಾಡಿ ‘ಹಾಡನ್ನು ಅನುಮತಿ ಇಲ್ಲದೆ ಪ್ರಸಾರ ಮಾಡಬಾರದು’ ಎಂದು ಆದೇಶ ನೀಡಿತ್ತು. ಹಾಡಿನ ರಾಗ ಮತ್ತು ಇದರಲ್ಲಿ ಬಳಸಲಾಗಿರುವ ಸಂಗೀತ ಒರಿಜಿನಲ್ ಅಲ್ಲವೆಂದು ಆರೋಪವು ಚಿತ್ರ ತಂಡದ ಮೇಲೆ ಇದ್ದ ಹಿನ್ನಲೆ ಹಾಡನ್ನು ಪ್ರಸಾರ ಮಾಡದಂತೆ ಕೇರಳದ ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿತ್ತು. ಹಾಗಾಗಿ ಯೂಟ್ಯೂಬ್, ಮ್ಯೂಸಿಕ್ ಆ್ಯಪ್ಗಳಾದ ‘ಸಾವನ್..’ ಮೊದಲಾದ ಪ್ಲಾಟ್ಫಾರ್ಮ್ಗಳಿಂದ ಈ ಸಾಂಗ್ ಡಿಲೀಟ್ ಮಾಡಲಾಗಿತ್ತು.
ಕೋಯಿಕ್ಕೋಡ್ (ಕಲ್ಲಿಕೋಟೆ) ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಹಾಡಿನ ಬಳಕೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿತ್ತು. ಹಾಡನ್ನು ಸಿನಿಮಾದಿಂದ ತೆಗೆಯುವಂತೆ ಸೂಚಿಸಿತ್ತು. ಇತ್ತ ಕೋಯಿಕ್ಕೋಡ್ (ಕಲ್ಲಿಕೋಟೆ) ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಂತೆಯೇ, ಕಾಂತಾರ ತಂಡ ಹೈಕೋರ್ಟ್ ಮೊರೆ ಹೊಕ್ಕಿತ್ತು.
ಆದರೆ ಇದೀಗ, ‘ವರಾಹ ರೂಪಂ’ ಹಾಡು ಯೂಟ್ಯೂಬ್ನಲ್ಲಿ ಪ್ರತ್ಯಕ್ಷವಾಗಿದೆ. ಹಾಗಾದ್ರೆ ಕಾನೂನು ಹೋರಾಟದಲ್ಲಿ ‘ಕಾಂತಾರ’ ಚಿತ್ರಕ್ಕೆ ಗೆಲುವು ದೊರೆಯಿತೆ ಎಂಬ ಅನುಮಾನ ಬುಗಿಲೆದ್ದಿವೆ. ಓಟಿಟಿಯಲ್ಲಿ ‘ಕಾಂತಾರ’ ಚಿತ್ರ ಬಿಡುಗಡೆಯಾದಾಗ ಕೂಡ ಬೇರೆ ಟ್ಯೂನ್ ಬಳಕೆ ಮಾಡಲಾಗಿತ್ತು. ಈ ಬಳಿಕ ತಡೆಯಾಜ್ಞೆ ತೆರವಾಗಿ, ಹಾಡನ್ನು ಪುನಃ ಬಳಸಿಕೊಳ್ಳುವುದಕ್ಕೆ ಅನುಮತಿ ಲಭಿಸಿದೆ.
ಹಾಗಾಗಿ, ತಕ್ಷಣಕ್ಕೆ ಜಾರಿಗೆ ಬರುವಂತೆ ಇಂದಿನಿಂದ ಚಿತ್ರಮಂದಿರ, ಓಟಿಟಿ, ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲ ವೇದಿಕೆಗಳಲ್ಲೂ ಮೂಲ ‘ವರಾಹ ರೂಪಂ’ ಹಾಡು ಪುನಃ ದೊರೆಯಲಿದೆ.