ಹೆಲ್ಮೆಟ್ ಧರಿಸಿ ಕೂದಲು ಉದುರಲಾರಂಭಿಸಿದೆಯೇ ? ತಡೆಗಟ್ಟಲು ಬೆಸ್ಟ್ ಉಪಾಯ ಇಲ್ಲಿದೆ
ಹೆಲ್ಮೆಟ್ ಧರಿಸುವುದರಿಂದ ಕೆಲವರಿಗೆ ಕೂದಲು ಉದುರುವ ಸಮಸ್ಯೆ ಕಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ತಲೆಕೂದಲು ಉದುರುವ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ಹೆಲ್ಮೆಟ್ ಧರಿಸುವವರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ತಲೆಯ ಸುರಕ್ಷತೆಗೆ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಅದು ಮುಖ್ಯ ಕೂಡ ಹೌದು. ಆದರೆ ಅದರಿಂದಾಗುವ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಏನು ಎಂಬುದು ಎಲ್ಲರಿಗೂ ಗೊಂದಲದ ಪ್ರಶ್ನೆ ಆಗಿದೆ.
ಇನ್ನು ಮುಂದೆ ಹೆಲ್ಮೆಟ್ ಧರಿಸಿ ಕೂದಲು ಉದುರುವ ಚಿಂತೆ ಬೇಡ ಇಲ್ಲಿದೆ ಸುಲಭ ಪರಿಹಾರ :
- ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ನಿಮ್ಮ ಹೆಲ್ಮೆಟ್ ಅನ್ನು ಸ್ವಚ್ಛಗೊಳಿಸಬೇಕು. ಎಲ್ಲಾ ಉತ್ತಮ ಗುಣಮಟ್ಟದ ಹೆಲ್ಮೆಟ್ಗಳ ಒಳಭಾಗದಲ್ಲಿರುವ ಮೆತ್ತನೆಯ ಬಟ್ಟೆಯನ್ನು ತೆಗೆದುಹಾಕಬಹುದು ಮತ್ತು ತೊಳೆಯಬಹುದು. ಈ ರೀತಿಯಾಗಿ, ನೀವು ಅಲ್ಲಿ ಸಂಗ್ರಹವಾಗಿರುವ ಯಾವುದೇ ಧೂಳು, ಬೆವರು ಮತ್ತು ಬ್ಯಾಕ್ಟೀರಿಯಾವನ್ನು ಸ್ವಚ್ಛಗೊಳಿಸಿ. ಅದರ ಉಳಿದ ಭಾಗವನ್ನು ಸ್ವಚ್ಛವಾದ ಒದ್ದೆಯಾದ ಬಟ್ಟೆಯಿಂದ ಚೆನ್ನಾಗಿ ಒರೆಸಿ. ಇದರಿಂದ ಹೆಲ್ಮೆಟ್ ಕೊಳೆಯಿಂದ ಕೂದಲು ಉದುರುವ ಸಮಸ್ಯೆಯಾಗದು.
- ಹೆಲ್ಮೆಟ್ ಧರಿಸಿದಾಗ ಒಳಗಿನಿಂದ ಬೆವರುವುದರಿಂದ ತಲೆಹೊಟ್ಟಿನ ಸಮಸ್ಯೆ ಕಾಡಬಹುದು. ಹೀಗಾಗಿ ಪ್ರತಿದಿನ ತಲೆಸ್ನಾನ ಮಾಡಿ. ಕೂದಲನ್ನು, ಕೂದಲಿನ ಬುಡವನ್ನು ಸ್ವಚ್ಛವಾಗಿರಿಸಿಕೊಳ್ಳಿ. ಇದರಿಂದ ಕೂದಲಿನ ನಡುವೆ ಕೊಳೆ ಕೂರದೆ, ಶುಷ್ಕತೆಯನ್ನು ನಿವಾರಿಸಿ ಕೂದಲು ಉದುರುವ ಸಮಸ್ಯೆ ಇರುವುದಿಲ್ಲ.
- ಕೂದಲು ಒದ್ದೆಯಿದ್ದಾಗ ಹೆಲ್ಮೆಟ್ ಧರಿಸಿದರೆ ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಮ್ಮೆ ತಲೆಹೊಟ್ಟು, ಸೀಳು ಕೂದಲಿನ ಸಮಸ್ಯೆ ಎದುರಾದರೆ ಕೂದಲು ಉದುರಲು ಆರಂಭವಾಗುತ್ತದೆ. ಹೀಗಾಗಿ ತಲೆಸ್ನಾನ ಮಾಡಿದ ಬಳಿಕ ಕೂದಲನ್ನು ಚೆನ್ನಾಗಿ ಒರೆಸಿಕೊಂಡು, ಒಣಗಿದ ಮೇಲೆಯೇ ಹೆಲ್ಮೆಟ್ ಧರಿಸುವ ಅಭ್ಯಾಸ ಮಾಡಿಕೊಳ್ಳಿ.
- ನಿಮ್ಮ ಕೂದಲು ಮತ್ತು ಹೆಲ್ಮೆಟ್ ನಡುವೆ ತೆಳುವಾದ, ಹತ್ತಿ ಬಟ್ಟೆಯನ್ನು ಇರಿಸಿ. ಹೀಗೆ ಮಾಡುವುದರಿಂದ ನಿಮ್ಮ ಕೂದಲು ಹೆಲ್ಮೆಟ್ನ ಒಳಭಾಗವು ಉಂಟುಮಾಡಬಹುದಾದ ಘರ್ಷಣೆಗೆ ಒಳಗಾಗುವುದನ್ನು ತಡೆಯುತ್ತದೆ. ಬಟ್ಟೆಯು ಬೆವರು ಹೀರಿಕೊಳ್ಳಲು ಸಹಾಯ ಮಾಡುತ್ತದೆ, ಇದು ನಿಮ್ಮ ಕೂದಲನ್ನು ಮತ್ತು ಹೆಲ್ಮೆಟ್ನ ಒಳಪದರವನ್ನು ಹಾಳಾಗದಂತೆ ರಕ್ಷಿಸುತ್ತದೆ. ಕೂದಲು ಉದುರುವ ಸಮಸ್ಯೆಯೂ ಎದುರಾಗುವುದಿಲ್ಲ.
• ಕೂದಲಿನ ಕಿರು ಚೀಲಗಳಿಗೆ ಸರಿಯಾದ ಪೋಷಕಾಂಶ ದೊರಕದೆ ಇದ್ದರೆ ಕೂದಲು ಉದುರಬಹುದು. ಹೀಗಾಗಿ ಎರಡು ದಿನಕ್ಕೊಮ್ಮೆಯಾದರೂ ಉಗುರು ಬೆಚ್ಚಗಿನ ಎಣ್ಣೆ ಹಚ್ಚಿ ತಲೆಯನ್ನು ಮಸಾಜ್ ಮಾಡಿ. ಇದು ರಕ್ತಪರಿಚಲನೆಯನ್ನು ಹೆಚ್ಚಿಸಲು ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಈ ಮೇಲಿನ ಸಲಹೆಗಳನ್ನು ನೀವು ಪಾಲಿಸಿದಲ್ಲಿ ಹೆಲ್ಮೆಟ್ ಧರಿಸಿ ಕೂದಲು ಉದುರುವುದನ್ನು ತಪ್ಪಿಸಿಕೊಳ್ಳಬಹುದಾಗಿದೆ.