ಇನ್ನು ಮುಂದೆ ನಟ ಅಮಿತಾಬ್ ಬಚ್ಚನ್ ಧ್ವನಿ, ಫೋಟೋ, ಹೆಸರನ್ನು ಬಳಸುವಂತಿಲ್ಲ – ಹೈಕೋರ್ಟ್ ಸೂಚನೆ
ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ತನ್ನ ಅನುಮತಿ ಇಲ್ಲದೇ ಬಹುತೇಕ ಜನರು, ಸಂಸ್ಥೆಗಳು ಹೆಸರು, ಫೋಟೋ, ಧ್ವನಿಯನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ನಟ ಅಮಿತಾಬ್ ಬಚ್ಚನ್ ಅಸಮಾಧಾನ ಹೊಂದಿರುವುದಾಗಿ ಮಾಹಿತಿ ದೊರಕಿದೆ.
ಹಾಗಾಗಿ ಬಾಲಿವುಡ್ ಹಿರಿಯ ನಟ, ಬಿ ಟೌನ್ ನಲ್ಲಿ ಬಿಗ್ ಬಿ ಎಂದೇ ಖ್ಯಾತಿಗಳಿಸಿರುವ ಅಮಿತಾಬ್ ಬಚ್ಚನ್ ಅವರ ಹೆಸರನ್ನಾಗಲಿ, ಫೋಟೋ ಅಥವಾ ಧ್ವನಿಯನ್ನು ಅವರ ಅನುಮತಿ ಇಲ್ಲದೇ ಬಳಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ನವೆಂಬರ್ 25 ರಂದು ಆದೇಶ ನೀಡಿದೆ.
ಈಗಾಗಲೇ ಬಚ್ಚನ್ ಅವರ ಹೆಸರು, ಫೋಟೋ, ಧ್ವನಿ ಬಳಸಿ ಉಪಯೋಗಿಸಿರುವ ಕಂಟೆಂಟ್ ಗಳನ್ನು ತೆಗೆದು ಹಾಕುವಂತೆ ಹೈಕೋರ್ಟ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಟೆಲಿಕಾಂ ಸರ್ವಿಸ್ ಪ್ರೊವೈಡರ್ಸ್ ಗಳಿಗೆ ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.
ನಟ ಅಮಿತಾಬ್ ಬಚ್ಚನ್ (80ವರ್ಷ) ಹೈಕೋರ್ಟ್ ಮೆಟ್ಟಿಲೇರಿ ತನ್ನ ಅನುಮತಿ ಇಲ್ಲದೇ ಹೆಸರು, ಫೋಟೋ, ಧ್ವನಿಯನ್ನು ಬಳಸದಂತೆ ನಿರ್ದೇಶನ ನೀಡಬೇಕೆಂದು ಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನನ್ನ ಕಕ್ಷಿದಾರನ ಹೆಸರನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಚಿತ್ರಣವನ್ನು ನೀಡುತ್ತೇನೆ ಎಂದು ವಾದ ಮಂಡಿಸಿರುವ ಹಿರಿಯ ವಕೀಲ ಹರೀಶ್ ಸಾಳ್ವೆ, ಯಾರೋ ಒಬ್ಬರು ಟಿ-ಶರ್ಟ್ ಗಳನ್ನು ತಯಾರಿಸುತ್ತಾರೆ, ನಂತರ ಅದಕ್ಕೆ ಅಮಿತಾಬ್ ಫೋಟೋ ಅಚ್ಚೊತ್ತುತ್ತಾರೆ. ಇನ್ನು ಕೆಲವರು ಅವರ ಪೋಸ್ಟರ್ ಗಳನ್ನು ಮಾರಾಟ ಮಾಡುತ್ತಾರೆ. ಇನ್ಯಾರೋ “ಅಮಿತಾಬ್ ಬಚ್ಚನ್ ಡಾಟ್ ಕಾಮ್ ಎಂಬ ಹೆಸರನ್ನು ರಿಜಿಸ್ಟರ್ಡ್ ಮಾಡುತ್ತಾರೆ. ಹೀಗಾಗಿ ಬಚ್ಚನ್ ಅವರ ಹೆಸರು, ಫೋಟೋ , ಧ್ವನಿಯನ್ನು ಬಳಸದಂತೆ ಎಚ್ಚರಿಕೆ ನೀಡಬೇಕೆಂದು ಬಿಗ್ ಬಿ ಕೋರ್ಟ್ ಮೆಟ್ಟಿಲೇರಿದ್ದರು.
ಈ ಕುರಿತಾಗಿ ದೆಹಲಿ ಹೈಕೋರ್ಟ್ ಶುಕ್ರವಾರ ನವೆಂಬರ್ 25 ರಂದು ಈ ಮೇಲಿನಂತೆ ಆದೇಶ ನೀಡಿದೆ. ಆದೇಶ ಮೀರಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೋರ್ಟ್ ನಿರ್ಧರಿಸಿದೆ.