ಮಂಗಳೂರು : ರಿಕ್ಷಾ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ | ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸ್ಫೋಟ ನಡೆಯಿತೇ?

ಮಂಗಳೂರಲ್ಲಿ ನಡೆದ ಸ್ಫೋಟದ ರೂವಾರಿ ವಹಿಸಿದ್ದ ಪ್ರಮುಖ ಆರೋಪಿ ಶಾರೀಕ್‌ ಬಗ್ಗೆ ವಿಚಾರಣೆ ಕಾರ್ಯ ಮುಂದುವರಿಯುತ್ತಿದೆ. ಈ ನಡುವೆ ಆರೋಪಿ ಶಾರಿಕ್ ಆರೋಗ್ಯ ಸುಧಾರಣೆಯ ಬಗ್ಗೆ ವೈದ್ಯರು ದೃಢಪಡಿಸಿದ ಬಳಿಕವಷ್ಟೆ ಆರೋಪಿಯ ವಿಚಾರಣೆ ನಡೆಸಲಾಗುತ್ತದೆ ಎನ್ನಲಾಗಿದೆ.

ಈ ಘಟನೆ ನಡೆದ ದಿನ ನಕಲಿ ಆಧಾರ್‌ ಕಾರ್ಡ್‌, ನಕಲಿ ಸಿಮ್‌ ಕಾರ್ಡ್‌ ಬಳಸಿ ತಲೆಮರೆಸಿಕೊಂಡಿದ್ದ ಶಾರೀಕ್‌ ಬ್ಯಾಂಕ್‌ ಖಾತೆಗಳನ್ನು ಕೂಡ ಹೊಂದಿದ್ದು, ಈ ಖಾತೆಗಳ ಅಸಲಿ ವಿಚಾರಗಳ ಬಗ್ಗೆ ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ. ಇದರ ಜೊತೆಗೆ ಆತನ ಮನೆಯವರು, ಸಂಬಂಧಿಕರು ಮತ್ತು ಇತರ ಕೆಲವು ಮಂದಿಯ ಬ್ಯಾಂಕ್‌ ಖಾತೆಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.


ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟ ನಡೆದ ಸ್ಥಳದಲ್ಲಿ ಸಿಕ್ಕಿದ ಆಧಾರ್‌ ಕಾರ್ಡ್‌ ನಕಲಿ ಎಂಬುದು ತಿಳಿಯುತ್ತಿದ್ದಂತೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಆರಂಭಿಸಿದ್ದು, ಆತನ ಬಳಿ ಇದ್ದ ಮೊಬೈಲ್‌ನತ್ತ ಗಮನ ಕೇಂದ್ರೀಕರಿಸಿದ್ದಾರೆ. ಆ ಬಳಿಕ ಆತ ಶಾರೀಕ್‌ ಮೇಲೆ ಸಂಶಯ ಹೆಚ್ಚಾಗಿದ್ದು, ಆತನ ಕುಟುಂಬಸ್ಥರು ದೃಢಪಡಿಸಿದ ಬಳಿಕ ಪೊಲೀಸರು ಅಧಿಕೃತವಾಗಿ ಆತ ಶಾರೀಕ್‌ ಎಂಬ ಮಾಹಿತಿ ಬಹಿರಂಗಪಡಿಸಿದ್ದಾರೆ.

ಸ್ಫೋಟಕ ರಾಸಾಯನಿಕಗಳು, ಡಿಟೋ ನೇಟರ್‌ ಮೊದಲಾದವುಗಳನ್ನು ಹೊಂದಿದ್ದ ಕುಕ್ಕರ್‌ 3 ಲೀಟರ್‌ ಸಾಮರ್ಥ್ಯ ಉಳ್ಳದ್ದು ಎನ್ನಲಾಗಿದೆ. ಶಾರ್ಟ್‌ ಸರ್ಕ್ನೂಟ್‌ನಿಂದಾಗಿ ಆಟೋ ರಿಕ್ಷಾದಲ್ಲೇ ಆಕಸ್ಮಿಕವಾಗಿ ಸ್ಫೋಟಗೊಂಡಿದ್ದು, ಇದು ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಸ್ಫೋಟಗೊಂಡಿದ್ದರೆ ಭಾರೀ ಅನಾಹುತವಾಗುವ ಸಂಭವ ಹೆಚ್ಚಿತ್ತು ಎಂದು ವಿಧಿವಿಜ್ಞಾನ ಪ್ರಯೋಗಾಲಯದ ಪ್ರಾಥಮಿಕ ವರದಿಗಳು ತಿಳಿಸಿವೆ.


ಈ ನಡುವೆ ಆಟೋಚಾಲಕ ಪುರುಷೋತ್ತಮ ಅವರ ಸ್ಫೋಟದಲ್ಲಿ ಗಾಯಗೊಂಡಿರುವ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ಆರೋಗ್ಯ ಸುಧಾರಿಸುತ್ತಿದೆ ಎನ್ನಲಾಗಿದ್ದು, ಅವರಿಗೆ ಸರಕಾರದಿಂದ ಸೂಕ್ತ ಪರಿಹಾರ ಬಿಡುಗಡೆ ಮಾಡಲು ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ರವಿ ಕುಮಾರ್‌ ಎಂ.ಆರ್‌. ಮಾಹಿತಿ ನೀಡಿದ್ದಾರೆ.

ಅಲ್ಲದೆ, ಮಂಗಳೂರು ನಗರದ ಹಲವೆಡೆ ಸಿಸಿ ಕೆಮರಾಗಳನ್ನು ಅಳವಡಿಸಿದ್ದರೂ ಕೂಡ ಅವುಗಳಲ್ಲಿ ಬಹುತೇಕ ಹೆಚ್ಚಿನವು ಕೆಟ್ಟು ಹೋಗಿದ್ದು, ಇನ್ನೊಂದೆಡೆ ಗುಪ್ತಚರ ಇಲಾಖೆ ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಈ ಹಿಂದೆ ನಗರದಲ್ಲಿ ಉಗ್ರರ ಪರ ಗೋಡೆ ಬರಹ ಪ್ರಕರಣಗಳು ನಡೆದಿದ್ದರೂ ಸಂಭಾವ್ಯ ಭಯೋತ್ಪಾದಕ ಕೃತ್ಯಗಳ ತಡೆಗೆ ವಿಶೇಷ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೂಡ ಸಾರ್ವಜನಿಕರಿಂದ ಕೇಳಿಬರುತ್ತಿವೆ.

ಕಾನೂನು ಸುವ್ಯವಸ್ಥೆಯ ಕಾಪಾಡುವ ನಿಟ್ಟಿನಲ್ಲಿ ಎಡಿಜಿಪಿ ಆಲೋಕ್‌ ಕುಮಾರ್‌ ಅವರು ಸಿಸಿ ಕೆಮರಾಗಳ ಅಳವಡಿಕೆಗೆ ಒತ್ತು ನೀಡುವಂತೆ ಸ್ಥಳೀಯ ಪೊಲೀಸರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಇದರ ನಡುವೆ ಒಂದೂವರೆ ತಿಂಗಳು ಮೈಸೂರಿನಲ್ಲಿ ಶಂಕಿತ ವಾಸವಿದ್ದ ಎನ್ನಲಾಗಿದೆ. ಈ ಬಾಂಬ್‌ ಸ್ಫೋಟ ಘಟನೆಯ ಬಳಿಕ ಮಂಗಳೂರಿನಲ್ಲಿ ಎನ್‌ಐಎ ಘಟಕ ಸ್ಥಾಪಿಸಬೇಕೆಂಬ ಬೇಡಿಕೆ ಸಾರ್ವಜನಿಕ ವಲಯದಿಂದ ಜೋರಾಗಿ ಕೇಳಿ ಬರುತ್ತಿದೆ.

ಕಳೆದ ತಿಂಗಳು ಕೊಯಮತ್ತೂರಿನಲ್ಲಿ ನಡೆದ ಸ್ಫೋಟಕ್ಕೂ ನಗರದ ನಾಗುರಿಯಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ ಸಂಬಂಧ ಇದೆಯೇ ಎಂಬ ಅನುಮಾನ ಈಗ ದಟ್ಟವಾಗಿ ಕಾಡುತ್ತಿದ್ದು, ಹೀಗಾಗಿ, ಪೋಲಿಸ್ ಪಡೆ ತನಿಖೆ ನಡೆಸುತ್ತಿದ್ದಾರೆ. ಇವರೆಡೂ ಸ್ಫೋಟಗಳು ಧಾರ್ಮಿಕ ಕ್ಷೇತ್ರಗಳ ಬಳಿಯೇ ನಡೆದಿರುವುದು ಗಮನಾರ್ಹ ಸಂಗತಿಯಾಗಿದೆ.

ಕಳೆದ ಅ. 23ರಂದು ಸಂಜೆ ಕೊಯಮತ್ತೂರಿನ ಕೊಟ್ಟಾಯಿ ಈಶ್ವರನ್‌ ದೇವಸ್ಥಾನ ದಾಟಿದ ಅನಂತರ ಕಾರಿನಲ್ಲಿ ಬಾಂಬ್‌ ಸ್ಫೋಟವಾಗಿದ್ದು, ಅದರಲ್ಲಿ ಓರ್ವ ಮೃತಪಟ್ಟಿದ್ದಾನೆ. ನ. 19ರಂದು ನಾಗುರಿಯಲ್ಲಿ ಕಂಕನಾಡಿ ಗರೋಡಿ ಬ್ರಹ್ಮಬೈದರ್ಕಳ ಕ್ಷೇತ್ರ ದಾಟಿ ಕೂಡಲೇ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡಿದ್ದು, ಇದರಲ್ಲಿ ಚಾಲಕ ಪುರುಷೋತ್ತಮ ಮತ್ತು ಆರೋಪಿ ಶಾರೀಕ್‌ ಗಾಯಗೊಂಡಿದ್ದಾರೆ.

ಉಗ್ರರು ಭಾರೀ ದೊಡ್ಡ ಮಟ್ಟದ ಸಂಚು ರೂಪಿಸಿದ್ದರು ಕೂಡ ದೊಡ್ಡ ಪ್ರಮಾದವೊಂದು ಸಣ್ಣದರಲ್ಲೆ ಮುಗಿದಿದೆ ಎನ್ನಲಾಗುತ್ತಿದೆ.
ಅಧರ್ಮದ ವಿರುದ್ಧ ಹೋರಾಡಿದ ವೀರಪುರುಷರಾದ ಕೋಟಿ-ಚೆನ್ನಯರ ಕ್ಷೇತ್ರವಾದ ಗರೋಡಿ ದಾಟಿದ ಕೂಡಲೇ ಸ್ಫೋಟ ಸಂಭವಿಸಿದ್ದು, ಇದು ಕ್ಷೇತ್ರದ ಮಹಿಮೆ ಎನ್ನುವ ನಂಬಿಕೆ ಅಲ್ಲಿನ ಜನರಲ್ಲಿ ಮೂಡಿದೆ.

Leave A Reply

Your email address will not be published.