Graduate Chaiwali: ‘ಪದವೀಧರೆ ಚಾಯ್​ವಾಲಿ’ಯ ಕಣ್ಣೀರಿಗೆ ಕರಗಿದ ಸೋನು ಸೂದ್

‘ಗ್ರ್ಯಾಜುಯೆಟ್ ಚಾಯ್​ವಾಲಿ’ ಎಂದೇ ಜನರ ಗಮನ ಸೆಳೆದಿದ್ದ ಪ್ರಿಯಾಂಕಾ ಗುಪ್ತಾರವರ ಕಣ್ಣೀರಿಗೆ ಕರಗಿದ ಸೋನು ಸೂದ್​ ಅವರು ಇದೀಗ ಪ್ರತಿಕ್ರಿಯಿಸಿದ್ದಾರೆ.

ಪ್ರಿಯಾಂಕಾ ಗುಪ್ತಾರವರು ಅರ್ಥಶಾಸ್ತ್ರದಲ್ಲಿ ಪದವಿ ಶಿಕ್ಷಣವನ್ನು ಪಡೆಡಿದ್ದರೂ ಕೂಡ ಯಾವುದೇ ಸೂಕ್ತವಾದ ಉದ್ಯೋಗ ಸಿಗದ ಕಾರಣ ತಮ್ಮದೇ ಸ್ವಂತ ಟೀ ಅಂಗಡಿ ಶುರು ಮಾಡುವ ಮೂಲಕ ಫೇಮಸ್​ ಆಗಿದ್ದರು. ಹಲವು ಸಂಕಷ್ಟಗಳ ನಡುವೆಯೂ ತಮ್ಮ ಟೀ ಅಂಗಡಿಯನ್ನು ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಟೀ ಅಂಗಡಿಯನ್ನು ಪಾಟ್ನಾ ಮಹಾನಗರ ಪಾಲಿಕೆಯ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಇದರಿಂದ ಎದುರಾಗಿರುವ ಅಸಹಾಯಕ ಪರಿಸ್ಥಿತಿಯನ್ನು ಅವರು ವಿಡಿಯೋ ಮೂಲಕ ವಿವರಿಸಿದ್ದರು.

‘ನಾನು ಏನಾದರೂ ಹೊಸತನ್ನು ಮಾಡಬೇಕು ಎಂದು ನಿರ್ಧರಿಸಿದ್ದೆ. ಜನರು ಕೂಡ ಬೆಂಬಲ ನೀಡಿದ್ದಾರೆ ಮತ್ತು ನೀಡುತ್ತಿದ್ದಾರೆ. ಆದರೆ ಇದು ಬಿಹಾರ್​. ಇಲ್ಲಿ ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತ ಎಂಬ ಕಲ್ಪನೆಯನ್ನು ಹೊಂದಿದ್ದಾರೆ. ಪಾಟ್ನಾದಲ್ಲಿ ಅನೇಕ ಅಕ್ರಮ ವ್ಯವಹಾರಗಳು ನಡೆಯುತ್ತಿದ್ದರೂ ಅದರ ವಿರುದ್ಧವಾಗಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಆದರೆ ಒಬ್ಬಳು ಹುಡುಗಿ ತನ್ನ ಸ್ವಂತ ಬಿಸ್ನೆಸ್​ ಮಾಡಿದಾಗ ಪದೇ ಪದೇ ಅಡ್ಡಿಪಡಿಸುತ್ತಾರೆ’ ಎಂದು ಪ್ರಿಯಾಂಕಾ ಗುಪ್ತಾ ಕೆಲವೇ ದಿನಗಳ ಹಿಂದೆ ಕಣ್ಣೀರು ಹಾಕಿದ್ದರು.

ಅವರ ಕಷ್ಟಕ್ಕೆ ಸ್ಪಂದಿಸಿದ ಸೋನು ಸೂದ್​ ‘ಪ್ರಿಯಾಂಕಾ ಅವರ ಟೀ ಶಾಪ್​ಗೆ ವ್ಯವಸ್ಥೆ ಆಗಿದ್ದೂ, ಈಗ ಅವರನ್ನು ಎತ್ತಂಗಡಿ ಮಾಡಿಸಲು ಯಾರೂ ಬರುವುದಿಲ್ಲ. ಶೀಘ್ರವೇ ನಾನು ಬಿಹಾರಕ್ಕೆ ಬಂದು ಅವರ ಅಂಗಡಿಯಲ್ಲಿ ಟೀ ಸವಿಯುತ್ತೇನೆ’ ಎಂದು ಸೋನು ಸೂದ್​ ಟ್ವೀಟ್​ ಮಾಡಿದ್ದಾರೆ. ರಿಯಲ್​ ಹೀರೋ ಮಾಡಿದ ಸಹಾಯಕ್ಕೆ ಅಭಿಮಾನಿಗಳು ಭೇಷ್​ ಎನ್ನುತ್ತಿದ್ದಾರೆ.

ಮೊದಲ ಬಾರಿ ಲಾಕ್​ ಡೌನ್ ಆರಂಭ ಆದಾಗಿನಿಂದಲೂ ಸೋನು ಸೂದ್​ ಅವರು ಅನೇಕ ಜನರಿಗೆ ಸಹಾಯ ಮಾಡುತ್ತಾ ಬಂದಿದ್ದೂ, ಕಷ್ಟದಲ್ಲಿ ಇರುವ ಜನರ ಕೈ ಹಿಡಿಯುವ ಮೂಲಕ ಅವರು ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಎಷ್ಟೋ ಜನರ ಸರ್ಜರಿಗೆ ನೆರವಾಗಿರುವ ಇವರು, ನೆಲೆಸಲು ಮನೆ ಇಲ್ಲದವರಿಗೆ ಆಶ್ರಯ ಒದಗಿಸಿದ್ದಾರೆ. ಸಾಕಷ್ಟು ಮಂದಿಯ ಶಿಕ್ಷಣಕ್ಕೆ ಹಣದ ಸಹಾಯ ಮಾಡಿದ್ದಾರೆ. ಇದೀಗ ಪ್ರಿಯಾಂಕಾ ಗುಪ್ತಾಗೂ ಸಹಾಯ ಹಸ್ತ ಚಾಚಿದ್ದಾರೆ.

ಈಗ ಬೇರೆ ಬೇರೆ ಕಡೆಗಳಲ್ಲಿ ತಮ್ಮ ಟೀ ಅಂಗಡಿಯ ಶಾಖೆ ಆರಂಭಿಸಲು ಪ್ರಿಯಾಂಕಾ ಗುಪ್ತಾ ಮುಂದಾಗಿದ್ದೂ, ಇವರನ್ನು ಬೆಂಬಲಿಸಲು ಅನೇಕರು ಕೈ ಜೋಡಿಸಿದ್ದಾರೆ. ಈ ಕುರಿತು ಪ್ರಿಯಾಂಕಾ ಮಾಡಿರುವ ಸೋಶಿಯಲ್​ ಮೀಡಿಯಾ ಪೋಸ್ಟ್​ ವೈರಲ್​ ಆಗಿದೆ.

Leave A Reply

Your email address will not be published.