Online Fraud : ಫೇಸ್ ಬುಕ್ ಬೆಳದಿಂಗಳ ಬಾಲೆಗೆ ಮನಸೋತು ಬರೋಬ್ಬರಿ 41 ಲಕ್ಷ ಕಳೆದುಕೊಂಡ ವ್ಯಕ್ತಿ | ಬಣ್ಣದ ಮಾತಿಗೆ ಮರಳಾಗಿ ಲಕ್ಷ ಲಕ್ಷ ಗೋತಾ!!!
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಸದುಪಯೋಗದ ಬದಲು ದುರುಪಯೋಗವೇ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣದ ಮೂಲಕ ಸಾಕಷ್ಟು ವಂಚನೆಗಳು ನಡೆಯುತ್ತಿವೆ. ಅದರಲ್ಲೂ ಹಣಗಳಿಸಲು ವಂಚಕರು ಸೋಷಿಯಲ್ ಮೀಡಿಯಾವನ್ನು ವ್ಯವಸ್ಥಿತವಾಗಿ ಬಳಸಿಕೊಂಡಿದ್ದಾರೆ. ಫೇಸ್ಬುಕ್, ವಾಟ್ಸಪ್ ಮೂಲಕ ಪರಿಚಯ ಮಾಡಿಕೊಂಡು ಬಳಿಕ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುವುದು. ಹೀಗೇ ಫೇಕ್ ಫೇಸ್ಬುಕ್ ಐಡಿಗಳನ್ನು ತಯಾರಿಸಿ ಅದರ ಮೂಲಕ ಹಣ ಪಡೆಯುವಂತಹ ಪ್ರಕರಣಗಳು ಎಷ್ಟೋ ಇವೆ. ಅದೇ ರೀತಿ ಇಲ್ಲೊಬ್ಬ ಅಮಾಯಕ ಫೇಸ್ ಬುಕ್ ಬೆಳದಿಂಗಳ ಬಾಲೆಗೆ ಮನಸೋತು ಆಕೆಯ ಬಣ್ಣ ಬಣ್ಣದ ಮಾತಿಗೆ ಮರಳಾಗಿ ಲಕ್ಷ ಲಕ್ಷ ಕಳೆದುಕೊಂಡು ಕಂಗಾಲಾಗಿದ್ದಾನೆ.
ವಿಜಯಪುರ ಜಿಲ್ಲೆಯ ಅಲಮೇಲ ತಾಲೂಕಿನ ಬಗಲೂರ ಗ್ರಾಮದ ಪರಮೇಶ್ವರ್ ಹಿಪ್ಪರಗಿ ಇವರು ತೆಲಂಗಾಣ ರಂಗಾರೆಡ್ಡಿ ಜಿಲ್ಲೆಯಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ತನ್ನ ಸ್ವಗ್ರಾಮದಲ್ಲಿದ್ದಾಗ ಕಳೆದ ಜೂನ್ 29 ರಂದು ಮಂಜುಳಾ ಕೆ.ಆರ್ ಎಂಬ ಫೇಸ್ ಬುಕ್ ಅಕೌಂಟ್‍ನಿಂದ ಫ್ರೇಂಡ್ ರಿಕ್ವೆಸ್ಟ್ ಬಂದಿದೆ. ರಿಕ್ವೆಸ್ಟ್ ನೋಡುತ್ತಿದ್ದಂತೆ ಪರಮೇಶ್ವರ್ accept ಮಾಡಿದ್ದಾರೆ. ರಿಕ್ವೆಸ್ಟ್ ಕನ್ಫರ್ಮ್ ಆಗುತ್ತಿದ್ದಂತೆ ಪರಮೇಶ್ವರ್ ತನ್ನ ಜಾಲದಲ್ಲಿ ಬಿದ್ದಿರುವುದು ಯುವತಿಗೆ ಕನ್ಫರ್ಮ್ ಆಗಿದೆ. ನಂತರ ಪ್ರತಿದಿನ ಮೆಸೇಜ್ ಮಾಡುವ ಮೂಲಕ ಪರಮೇಶ್ವರ್ ತನ್ನ ಸಖಿಯೊಂದಿಗೆ ಸಲುಗೆ ಬೆಳಸಿಕೊಂಡಿದ್ದಾನೆ.
ಅಕ್ಟೋಬರ್ 14 ರಂದು, ತಾಯಿಯ ಆರೋಗ್ಯ ಸರಿಯಿಲ್ಲ ಹಾಗಾಗಿ 700 ರೂ ಫೋನ್ ಪೇ ಮಾಡು ಎಂದು ಯುವತಿ ಸಂದೇಶ ಕಳಿಸಿದ್ದಾಳೆ. ಆಗ ಪರಮೇಶ್ವರ್ ಕೇಳಿದ್ದಕ್ಕಿಂತ ಹೆಚ್ಚಾಗಿಯೇ ಹಣ ಕಳಿಸಿದ್ದು, ಸುಮಾರು 2000 ರೂ ಫೋನ್ ಪೇ ಮಾಡಿದ್ದಾನೆ. ಬಳಿಕ ಒಂದು ವಾರದ ಕಳೆದ ಮೇಲೆ ತಾಯಿ ಮೃತಳಾಗಿದ್ದಾಳೆ ಅಂತಾ 2000 ರೂ. ಕಳಿಸಲು ಸಂದೇಶ ಬಂದಿದೆ. ಆಗಲೂ ಕೂಡ ಪರಮೇಶ್ವರ್ ಹಿಂದೂ ಮುಂದು ಯೋಚಿಸದೆ 2000 ರೂ ಕಳಿಸಿದ್ದಾನೆ.
ಅದೇ ರೀತಿ ಬೆಳದಿಂಗಳ ಬಾಲೆ ಕೇಳಿದಾಗೆಲ್ಲ ಕೇಳಿದಷ್ಟು, ಪರಮೇಶ್ವರ ಹಣದ ಮಳೆ ಸುರಿಸಿದ್ದಾನೆ. ಕೆಲ ದಿನಗಳ ನಂತರ ಮಂಜುಳಾ ಕರೆ ಮಾಡಿ ಪರಮೇಶ್ವರ್‍ಗೆ ತಾನು ಐಎಎಸ್ ಪರೀಕ್ಷೆ ಪಾಸ್ ಆಗಿದ್ದೇನೆ. ಇನ್ನು ಡಿಸಿ ಪೋಸ್ಟ್ ಸಿಗುತ್ತದೆ. ಇದೀಗ ಹಾಸನದಲ್ಲಿದ್ದೇನೆ ನನ್ನನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಬೆಂಗಳೂರಿಗೆ ಹೋಗಬೇಕೆಂದಿರುವೆ ಆದರೆ ಅಲ್ಲಿನ ಖರ್ಚಿಗೆ ನನ್ನ ಬಳಿ ಹಣವಿಲ್ಲ. ಹಣಕಾಸಿನ ಸಹಾಯ ಮಾಡಿದ್ರೆ ನಾನು ನಿನ್ನನ್ನು ಮದುವೆ ಆಗುತ್ತೇನೆ ಅಂತಾ ತನ್ನ ಬಣ್ಣದ ಮಾತಿನಿಂದ ಮರುಳು ಮಾಡಿದ್ದಾಳೆ.
ಈ ಬಣ್ಣ ಬಣ್ಣದ ಮಾತಿಗೆ ಮರಳಾಗಿ, ಇದನ್ನು ಸತ್ಯ ಎಂದು ನಂಬಿ ದುರಾಸೆಗೆ ಬಿದ್ದ ಪರಮೇಶ್ವರ್ ಸುಮಾರು 50 ಸಾವಿರ ರೂ ಹಾಕಿದ್ದಾನೆ. ಹೀಗೇ ಹಣದ ಮೋಹದಿಂದ ಯುವತಿ, ಮತ್ತೆ ಕೆಲ ದಿನಗಳ ನಂತರ ಮತ್ತಷ್ಟು ಸಲುಗೆಯಿಂದ, ಪ್ರೀತಿಯಿಂದ ಮಾತನಾಡಿ ಹಂತ, ಹಂತವಾಗಿ ಅಷ್ಟಿಷ್ಟಲ್ಲ ಬರೋಬ್ಬರಿ 41.26 ಲಕ್ಷ ಆತನಿಂದ ಲಪಟಾಯಿಸಿದ್ದಾಳೆ. ನಂತರ ತನ್ನ ಬಳಿ ಹಣವಿಲ್ಲ ಎಂದು ಪರಮೆಶ್ವರ್ ಮಂಜುಳಾಗೆ ಹೇಳಿದ್ದಾನೆ. ಆಗ ಮಂಜುಳಾ ಪರಮೇಶ್ವರ್‍ಗೆ 2.21 ಲಕ್ಷ ರೂ ವಾಪಾಸ್ ನೀಡಿದ್ದಾಳೆ.
ಇಷ್ಟಾದ ಮೇಲೆ ಮಂಜುಳಾ ಮತ್ತೆ ಹಣಕ್ಕೆ ಪರಮೇಶ್ವರ್ ಗೆ ಬೇಡಿಕೆ ಇಟ್ಟಿದ್ದಾಳೆ. ಹಣ ಬೇಕೆಂದು ಪೀಡಿಸಿದ್ದಾಳೆ. ಇಷ್ಟೆಲ್ಲಾ ನಡೆದ ಬಳಿಕ ಬೆಳದಿಂಗಳ ಬಾಲೆಯ ಮೇಲೆ ಸಂಶಯ ಬಂದು, ಆಕೆಯ ಮಾತಿನ ಹಳ್ಳಕ್ಕೆ ಬಿದ್ದಿರುವೆ ಎಂದು ಅರಿವಾಗಿ ಪರಮೇಶ್ವರ್ ನವೆಂಬರ್ 15ರಂದು ವಿಜಯಪುರದ ಸಿಇಎನ್ ಪೋಲಿಸ್ ಠಾಣೆಯಲ್ಲಿ ಮಂಜುಳಾ ವಿರುದ್ಧ ವಂಚನೆ ಕೇಸ್ ದಾಖಲಿಸಿದ್ದಾನೆ. ಸದ್ಯ ಸಿಂದಗಿ ಪೊಲಿಸ್ ಠಾಣೆಗೆ ಕೇಸ್ ವರ್ಗಾವಣೆ ಆಗಿದ್ದು, ಇದೀಗ ಪೋಲಿಸರು ಮಹಾ ವಂಚಕಿ ಮಂಜುಳಾಗಾಗಿ ಬಲೆ ಬೀಸಿದ್ದಾರೆ ಎನ್ನಲಾಗಿದೆ.