ಇಂದು ಬಳ್ಳಾರಿಯಲ್ಲಿ ಬಿಜೆಪಿ `ST’ ಸಮಾವೇಶ : 10 ಲಕ್ಷ ಜನರು ಭಾಗಿ ನಿರೀಕ್ಷೆ

ಬಳ್ಳಾರಿ : ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳದ ಸಂಪೂರ್ಣ ಶ್ರೇಯಸ್ಸನ್ನು ರಾಜ್ಯ ಬಿಜೆಪಿ ಸರ್ಕಾರ ತನ್ನದಾಗಿಸಿಕೊಳ್ಳಲು ಮುಂದಾಗಿದೆ. ಇದೇ ಭಾಗವಾಗಿ ಇಂದು ಬಳ್ಳಾರಿಯಲ್ಲಿ ರಾಜ್ಯಮಟ್ಟದ ಬಿಜೆಪಿ ಎಸ್‌ಟಿ ಸಮಾವೇಶವನ್ನು ಆಯೋಜಿಸಿದೆ.

ಅತಿ ಹೆಚ್ಚು ಎಸ್‌ಟಿ ಮೀಸಲು ಕ್ಷೇತ್ರಗಳನ್ನು ಹೊಂದಿರುವ ಬಳ್ಳಾರಿ ಜಿಲ್ಲೆಯಲ್ಲಿ ಎಸ್‌ಟಿ ಸಮಾವೇಶ ಮಾಡುವ ಮೂಲಕ ಮತಗಳನ್ನು ಕಬಳಿಸಲು ಬಿಜೆಪಿ ಸರ್ಕಾರ ಮುಂದಾಗಿದೆ. ಸಮಾವೇಶದಲ್ಲಿ ಅಂದಾಜು 10 ಲಕ್ಷ ಜನ ಸೇರುವ ನಿರೀಕ್ಷೆಯನ್ನು ರಾಜ್ಯ ಬಿಜೆಪಿ ನಾಯಕರು ಹೊಂದಿದ್ದು, ಇದೊಂದು ಐತಿಹಾಸಿಕ ಎಸ್‌ಟಿ ಸಮಾವೇಶ ಆಗಲಿದೆ ಎಂಬುದು ಬಿಜೆಪಿ ನಾಯಕರ ಅಂದಾಜು ಆಗಿದೆ. ಈ ಕುರಿತು ಬಳ್ಳಾರಿಯಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಬಳ್ಳಾರಿಯಲ್ಲಿ ಎಸ್‌ಟಿ ಮೋರ್ಚಾ ಸಮಾವೇಶ ನಡೆಯಲಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾಗವಹಿಸಲಿದ್ದಾರೆ.

ಸಮಾವೇಶದಲ್ಲಿ ಸುಮಾರು 10 ಲಕ್ಷ ಜನ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಕೊಪ್ಪಳ, ರಾಯಚೂರು, ಚಿತ್ರದುರ್ಗ, ಬಳ್ಳಾರಿ ಸುತ್ತಲಿನ ಪ್ರದೇಶಗಳಿಂದ ಅತಿ ಹೆಚ್ಚು ಜನರು ಬರುವ ನಿರೀಕ್ಷೆ ಇದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಮಾವೇಶಕ್ಕೆ ಜನರು ಬರಲಿದ್ದಾರೆ. ಬಿಜೆಪಿ ಸರ್ಕಾರದ ಬಗ್ಗೆ ಕಾಂಗ್ರೆಸ್ ಮುಖಂಡರು ಸುಳ್ಳು ಮಾಹಿತಿಯನ್ನು ಜನರ ಮನದಲ್ಲಿ ಬಿತ್ತಿದ್ದರು. ಅದನ್ನು ಹೋಗಲಾಡಿಸುವ ಮಾದರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರವು ಮೀಸಲಾತಿಯನ್ನು ಹೆಚ್ಚಿಸಿದೆ. ಇದು ಬಿಜೆಪಿಯ ಬದ್ಧತೆಗೆ ಸ್ಪಷ್ಟ ನಿದರ್ಶನ ಎಂದರು.

ಪಕ್ಷಕ್ಕೆ ಮಾರ್ಗದರ್ಶನ ನೀಡಿದ್ದ ಬಿಎಸ್‌ವೈ ಇದಕ್ಕಾಗಿ ಎಸ್‌ಟಿ ಸಮುದಾಯದ ಪರವಾಗಿ ಪಕ್ಷಕ್ಕೆ ಮಾರ್ಗದರ್ಶನ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹಾಗೂ ರಾಜ್ಯ ಸಚಿವ ಸಂಪುಟಕ್ಕೆ ಧನ್ಯವಾದಗಳನ್ನು ತಿಳಿಸಿಲು ಎಸ್‌ಟಿ ಸಮಾವೇಶವನ್ನು ಮಾಡುತ್ತಿದ್ದೇವೆ. ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ನಳಿನ್‌ ಕುಮಾರ್ ಕಟೀಲ್, ಕೇಂದ್ರ, ರಾಜ್ಯ ಸಚಿವರು, ಕೋರ್ ಕಮಿಟಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಾಗ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಗೆ ನಮನ ಸಲ್ಲಿಸಿ ನಮ್ಮ ಸಮಾಜದ ಆತ್ಮಾಭಿಮಾನವನ್ನು ಹೆಚ್ಚಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷವು ಕೇವಲ ಮತ ಬ್ಯಾಂಕ್ ರಾಜಕೀಯದಲ್ಲಿ ನಮ್ಮ ಸಮುದಾಯವನ್ನು ಬಳಸಿಕೊಂಡಿತ್ತು. ಆದರೆ ಬಿಜೆಪಿ ನಮ್ಮ ಸಮುದಾಯಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತಿದೆ. ಮುಂದಿನ 2023ರ ಚುನಾವಣೆಯಲ್ಲಿ ಬಿಜೆಪಿಗೆ ನಾವೆಲ್ಲರೂ ಮತ ಹಾಕುವ ಮೂಲಕ ಋಣವನ್ನು ತೀರಿಸಲು ಬದ್ಧರಿದ್ದೇವೆ. ಬಿಜೆಪಿ ಡಬಲ್ ಎಂಜಿನ್ ಸರ್ಕಾರಗಳ ಜನೋಪಯೋಗಿ ಕಾರ್ಯಕ್ರಮಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಟ್ಟು, ನಾವೆಲ್ಲರೂ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರನ್ನು ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳುತ್ತೇವೆ ಎಂದರು.

2013ರಿಂದ 18ರವರೆಗೆ ಕಾಂಗ್ರೆಸ್ ಸರ್ಕಾರವಿದ್ದಾಗ ಏನೂ ಮಾಡಲ್ಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ನೀವವು ಏಕೆ ಮೀಸಲಾತಿ ಕೊಡಲಿಲ್ಲ? ಎಂದು ಕಾಂಗ್ರೆಸ್ ನಾಯಕರು ಉತ್ತರಿಸಬೇಕು ಎಂದರು. ಸಮಾವೇಶಕ್ಕಾಗಿ ಸುಮಾರು 130ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶವನ್ನು ಬಳಕೆ ಮಾಡಲಾಗಿದೆ. 2040 ಅಡಿಗಳ ನಡುವೆ ಎರಡು ಮುಖ್ಯ ವೇದಿಕೆ ನಿರ್ಮಾಣ ಆಗಲಿದೆ. 4060 ಅಡಿಯ ಗಣ್ಯರ ವೇದಿಕೆ ಇರಲಿದೆ. 3,20,000 ಚದರ ಅಡಿ ಪೆಂಡಲ್ ವ್ಯವಸ್ಥೆ ಇದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ವಿಶೇಷ ವೇದಿಕೆ ನಿರ್ಮಾಣ ಮಾಡಲಾಗಿದೆ ಎಂದರು

ಸುಮಾರು 1೦,೦೦೦ ಚದುರ ಅಡಿಯಲ್ಲಿ ಅಡುಗೆ ತಯಾರಿಕೆಗಾಗಿ ಬಳಕೆ ಮಾಡಲಾಗಿದ್ದು, ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಊಟದ ವ್ಯವಸ್ಥೆ ಇರುತ್ತದೆ. ಸುಮಾರು 300ಕ್ಕೂ ಹೆಚ್ಚು ಕೌಂಟರ್‌ಗಳಲ್ಲಿ ಬಫೆ ಸಿಸ್ಟಮ್‌ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕಾಗಿ ಸುಮಾರು 41 ಸಮಿತಿಗಳಲ್ಲಿ 3000ಕ್ಕೂ ಹೆಚ್ಚು ಕಾರ್ಯಕರ್ತರನ್ನು ನೇಮಿಸಲಾಗಿದೆ. ಸಮಾವೇಶಕ್ಕಾಗಿ ಸುಮಾರು 8,000 ರಿಂದ 10,000 ಬಸ್‌ಗಳು, 20,000 ಕ್ರೂಸರ್, 10,000 ಕಾರು, 25,000 ಬೈಕ್‌ಗಳು ಆಗಮಿಸಲಿವೆ. ಜೊತೆಗೆ 10,0000 ಮಹಿಳಾ ಕಾರ್ಯಕರ್ತರಿಂದ ಬಳ್ಳಾರಿ ನಗರದಿಂದ ಸಮಾವೇಶಕ್ಕೆ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲಾಗುತ್ತದೆ. ಎರಡು ಹೆಲಿಕಾಪ್ಟರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ವಿಮ್ಸ್ ನೇತೃತ್ವದಲ್ಲಿ ಆರೋಗ್ಯ ಸಮಸ್ಯೆ ಎದುರಿಸಲು ವೈದ್ಯಕೀಯ ವ್ಯವಸ್ಥೆ ಕೂಡ ಇಡುತ್ತದೆ ಎಂದು ಸಚಿವ ಶ್ರೀರಾಮುಲು ಮಾಹಿತಿ ನೀಡಿದರು.

Leave A Reply

Your email address will not be published.