ಮತದಾರರ ಪಟ್ಟಿ ವಿವಾದ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಟಾಂಗ್| ಇದು ಕೆಜಿಎಫ್ ಚಿತ್ರದ ಸೇಡಿನ ಕಥೆಯೂ ಅಲ್ಲ, ಕಾಂತಾರ ಚಿತ್ರದ ದಂತಕಥೆಯೂ ಅಲ್ಲ

ಮತದಾರರ ಪಟ್ಟಿ ಪರಿಷ್ಕರಣೆ ವಿಷಯವಾಗಿ ಎರಡು ದಿನಗಳಿಂದ ಕರ್ನಾಟಕದಲ್ಲಿ ಭಾರೀ ಗದ್ದಲ ಉಂಟಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಲ್ಲಿ ಮತದಾರರ ಖಾಸಗಿ ಸಂಗತಿಗಳು ಸೋರಿಕೆ ಆಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಅದರಲ್ಲೂ ಸಚಿವ ಅಶ್ವತ್ಥ್ ನಾರಾಯಣ್ ಅವರ ಬಗ್ಗೆಯೇ ಅನುಮಾನ ವ್ಯಕ್ತ ಪಡಿಸಿದೆ. ಈ ಅನುಮಾನಕ್ಕೆ ಕಾರಣ ಹೊಂಬಾಳೆ ಎಂಬ ಹೆಸರು. ಹಾಗಾದರೆ ಈ ಅನುಮಾನಗಳ ಹಿನ್ನೆಲೆಯೇನು?

ಹೊಂಬಾಳೆ ಫಿಲ್ಮಸ್ ಸಂಸ್ಥೆಯು ಸಚಿವ ಅಶ್ವತ್ಥ್ ನಾರಾಯಣ್ ಅವರ ಸಂಬಂಧಿಕರಾದ ವಿಜಯ್ ಕುಮಾರ್ ಅವರದ್ದಾಗಿದೆ. ಈ ಹೊಂಬಾಳೆ ಫಿಲ್ಮಸ್ ಬ್ಯಾನರ್ ನಲ್ಲಿ ಕೆಜಿಎಫ್, ಕಾಂತಾರ ಸೇರಿದಂತೆ ಹಲವು ಚಿತ್ರಗಳು ನಿರ್ಮಾಣಗೊಂಡಿವೆ.

ಇದೀಗ ‘ಹೊಂಬಾಳೆ’ ಎನ್ನುವ ಹೆಸರೇ ಮತದಾರರ ಪಟ್ಟಿಯ ವಿವಾದಕ್ಕೆ ಕಾರಣವಾಗಿದ್ದು, ಇದು ಚಿಲುಮೆ ಎಂಬ ಹೆಸರಿನ ಸಂಸ್ಥೆಯ ಜೊತೆ ಸೇರಿಕೊಂಡಿದೆ. ಮತದಾರರ ಪಟ್ಟಿಯ ದುರುಪಯೋಗಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಯ ಹೆಸರು ಹೆಚ್ಚಾಗಿ ಕೇಳಿಬಂದಿದೆ. ಚಿಲುಮೆ ಸಂಸ್ಥೆಯು ಈ ಹಿಂದೆ ಹೊಂಬಾಳೆ ಹೆಸರಿನಲ್ಲಿ ಚಟುವಟಿಕೆಯಲ್ಲಿತ್ತು ಎನ್ನುವುದು ವಿವಾದಕ್ಕೆ ಕಾರಣವಾದ ಅಂಶವಾಗಿದೆ.

ಹೊಂಬಾಳೆ ಹೆಸರು ಕೇಳಿ ಬರುತ್ತಿದ್ದಂತೆಯೇ ಆದ ಘಟನೆಗೂ ಸಚಿವ ಅಶ್ವತ್ಥ್ ನಾರಾಯಣ್ ಅವರಿಗೂ ಏನೋ ಸಂಬಂಧವಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಆರೋಪವಾಗಿದೆ. ಹಾಗಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೊಂಬಾಳೆ ಫಿಲ್ಮಸ್ ಸಂಸ್ಥೆಯನ್ನು ತಿವಿಯಲು, ಈ ಬ್ಯಾನರ್ ನಿಂದ ನಿರ್ಮಾಣವಾದ ಎರಡು ಚಿತ್ರಗಳ ಹೆಸರನ್ನು ಬಳಸಿಕೊಂಡು ಅಶ್ವತ್ಥ್ ನಾರಾಯಣ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಈ ಬಗ್ಗೆ ಸರಣಿಯ ಟ್ವಿಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ‘ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ಕೆಜಿಎಫ್ ಚಿತ್ರದ ರಾಕಿಭಾಯ್ ನ ಸೇಡಿನ ಕಥೆಯೂ ಅಲ್ಲ, ಕಾಂತಾರ ಚಿತ್ರದ ಗುಳಿಗ, ಪಂಜುರ್ಲಿಯ ದಂತಕಥೆಯೂ ಅಲ್ಲ. ಯಾರು ಯಾವ ಕೆಲಸ ಮಾಡಬೇಕೋ ಅದನ್ನೇ ಮಾಡಬೇಕು’ ಎಂದು ಟ್ವಿಟ್ ಮಾಡಿದ್ದಾರೆ. ಸದ್ಯ ಈ ಟ್ವಿಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಷ್ಟೇ ಅಲ್ಲದೆ, ವೀಕ್ಷಕರು ಈ ಟ್ವೀಟ್ ಗೆ ಸ್ಪಂದಿಸಿದ್ದಾರೆ.

Leave A Reply

Your email address will not be published.