ಎಚ್ಚರ : Dating App ಬಳಸಿದರೆ ನಿಮ್ಮ ಜೀವಕ್ಕೆ ಅಪಾಯ | ಒಂಟಿ ಜೀವಗಳೇ ಟಾರ್ಗೆಟ್!
ದೇಶದ ರಾಜಧಾನಿ ದೆಹಲಿಯಲ್ಲಿ ಶ್ರದ್ಧಾ (Shraddha) ಹತ್ಯೆಯ ಪ್ರಕರಣ ದೇಶವನ್ನೇ ತಲ್ಲಣಗೊಳಿಸಿದೆ. ಈ ಪ್ರಕರಣದ ಬೆನ್ನಲ್ಲೇ ಡೇಟಿಂಗ್ ಆ್ಯಪ್ ಗಳು ಎಷ್ಟು ನಂಬಿಕೆಗೆ ಅರ್ಹ ಎಂಬ ಬಗ್ಗೆ ಪ್ರಶ್ನೆ ಬುಗಿಲೆದಿದ್ದು ,ಯುವ ಜನತೆಯ ಅದರಲ್ಲೂ ಕೂಡ ಒಬ್ಬಂಟಿ ಇರುವ ಜೀವ, ಮನಸ್ಸುಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಮನೆಯವರೆಲ್ಲ ಕೂತು ಮಾತುಕತೆ ನಡೆಸಿ, ಗುರು ಹಿರಿಯರು ನಿಶ್ಚಯ ಮಾಡಿದ್ದ ಎಷ್ಟೋ ಮದುವೆಗಳೇ ಇಂದು ಮುರಿದು ಹೋಗುತ್ತಿದ್ದು, ಈ ನಡುವೆ ಡೇಟಿಂಗ್ ಆ್ಯಪ್ (Dating App) ಗಳಲ್ಲಿ ಪರಿಚಯವಾದ ಪ್ರೀತಿ, ಗೆಳೆತನ ಎಷ್ಟು ದಿನ ಬಾಳಬಹುದು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಇತ್ತೀಚೆಗೆ ಡೇಟಿಂಗ್ ಆ್ಯಪ್ ಗಳು ಹೆಚ್ಚಾಗಿದ್ದು, ಹಣ ಕಟ್ಟಿ ರಿಜಿಸ್ಟರ್ ಮಾಡಿ ಕೊಂಡ ತಕ್ಷಣ ಹುಡುಗನದ್ದೋ ಇಲ್ಲವೇ ಹುಡುಗಿಯದ್ದೋ ನಂಬರ್ ಸಿಕ್ಕಿದ ಬಳಿಕ ರಿಯಲ್ ಕಹಾನಿ ಶುರುವಾಗುತ್ತದೆ. ಅಮಾಯಕ ಹೆಣ್ಣುಮಕ್ಕಳೇ ಈ ಡೇಟಿಂಗ್ ಆ್ಯಪ್ ಗಳಲ್ಲಿ ಬಲಿಪಶುವಾಗಿ, ಜೀವಕ್ಕೆ ಕಂಟಕ ಬಂದರೂ ಅಚ್ಚರಿಯಿಲ್ಲ. ಇದಲ್ಲದೆ, ಶೇ.90 ಗಂಡು ಮಕ್ಕಳ ಪ್ರೊಫೈಲ್ ಗಳು ಫೇಕ್ ಎಂಬ ಮಾಹಿತಿಯಿದೆ.
ಮುದುಕನಾಗಿದ್ದರೂ ಕೂಡ ಹಾದಿ ಹರೆಯದ ಹೀರೋ ಮಾದರಿಯ ಫೋಟೋ (Photo) ಹಾಕುವ ಇಲ್ಲವೆ ಬೇರೆ ಯಾರದ್ದೋ ಫೋಟೋ ಹಾಕಿ ಹೆಣ್ಣುಮಕ್ಕಳನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುವ ಸಲುವಾಗಿ ನಾನಾ ತಂತ್ರ ಬಳಕೆ ಮಾಡುವುದು ಸಹಜ ಪ್ರಕ್ರಿಯೆ ಯಾಗಿ ಬಿಟ್ಟಿದ್ದು, ಇವತ್ತು ಎಂಗೇಜ್ ಮೆಂಟ್ ನಾಳೆ ಮದುವೆ, ನಾಡಿದ್ದು ಡಿವೋರ್ಸ್ ಅಲ್ಲಿ ಎರಡು ಜೀವಗಳ ಮದುವೆ ಪುರಾಣ ಅಂತ್ಯ ಕಂಡು ನಾನೊಂದು ತೀರ.. ನೀನೊಂದು ತೀರ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.
ಒಳ್ಳೆಯ ಕೆಲಸದಲ್ಲಿದ್ದ ಮಹಿಳಾ ಮಣಿಗಳನ್ನೆ ಟಾರ್ಗೆಟ್ ಮಾಡಿ ಅದರಲ್ಲೂ ಕೂಡ ಕೈ ತುಂಬಾ ಸಂಬಳ ಪಡೆಯುವವರಾದರೆ , ತಮ್ಮ ಜಾಲಕ್ಕೆ ಬೀಳಿಸುವ ಎಲ್ಲ ಪ್ರಯೋಗವು ನಡೆಯುತ್ತದೆ. ಇದರ ಜೊತೆಗೆ ನೋಡೋಕೆ ಚೆನ್ನಾಗಿದ್ದು, ಫ್ಯಾಮಿಲಿ ಆರ್ಥಿಕವಾಗಿ ಚೆನ್ನಾಗಿದ್ದು, ವಿಧವೆಯರು ಹಾಗೂ ಡಿವೋರ್ಸ್ ಆಗಿರುವ ಮಹಿಳೆಯರೇ ಈ ಡೇಟಿಂಗ್ ಆ್ಯಪ್ ಗಳ ಬಲಿಪಶುಗಳಾಗಿರುತ್ತಾರೆ.
ಡೇಟಿಂಗ್ ಆ್ಯಪ್ ಗಳಲ್ಲಿ ಪರಿಚಯವಾದ ಹೆಣ್ಣುಮಕ್ಕಳ ನಂಬರ್ ಪಡೆದು ಸಭ್ಯಸ್ಥರಂತೆ ನಟಿಸಿ, ಹರೆಯದ ಹೆಣ್ಮಕ್ಕಳು ಪ್ರೀತಿಯಾಸೆಗೆ, ವಿಧವೆ ಅಥವಾ ಡಿವೋರ್ಸ್ ಆಗಿರುವ ಹೆಣ್ಣುಮಕ್ಕಳು ಜೀವನಕ್ಕೆ ಆಸರೆಯಾಗಬಹುದು ಅನ್ನುವ ಕಾರಣಕ್ಕೋ ಏನೋ ಹೆಣ್ಣುಮಕ್ಕಳು ಇವರಿಡುವ ಮದುವೆ ಅನ್ನೊ ಆಫರ್ (Marriage Offer) ಒಪ್ಪಿಕೊಳ್ಳುತ್ತಾರೆ. ಹಣದ ಅವಶ್ಯಕತೆ ಇರುವವರ ತರ ನಟಿಸಿ ಇದೇ ಹೆಣ್ಣುಮಕ್ಕಳು ಕಷ್ಟಪಟ್ಟು ಕೂಡಿಟ್ಟ ಲಕ್ಷಾಂತರ ಹಣ ಪಡೆದು, ಹೆಣ್ಣಿನ ಜೇಬು ಖಾಲಿ ಮಾಡಿ ಹೆಣ್ಣಿನ ಬಾಳಿನಲ್ಲಿ ಸಾಧ್ಯವಾದಷ್ಟು ಚೆಲ್ಲಾಟ ಸಲ್ಲಾಪ ನಡೆಸಿ ಬೋರ್ ಎನಿಸಿದಾಗ ಪರಾರಿಯಾದರೆ, ಮತ್ತೆ ಆ ಹೆಣ್ಣಿನ ಜೀವನದ ಕನಸು ನುಚ್ಚು ನೂರಾಗಿ ಮಾನ ಮರ್ಯಾದೆಯ ಅಂಜಿಕೆಯಲ್ಲಿ ಜೀವನ ಸಾಗಿಸುವವರೆ ಹೆಚ್ಚು.
ಹಾಗಾಗಿ, ಇಂತಹ ಡೇಟಿಂಗ್ ಆ್ಯಪ್ಗಳಿಂದ ಏನು ಪ್ರಯೋಜನ?? ಹೆಣ್ಮಕ್ಕಳ ಜೀವ ಜೀವನದ ಜೊತೆಗೆ ಚೆಲ್ಲಾಟದ ಜೊತೆಗೆ ಹಣವನ್ನೂ ಕಳೆದುಕೊಳ್ಳುವ ಜೊತೆಗೆ ಜೀವ ಕಳೆದುಕೊಂಡ ನಿದರ್ಶನ ಕೂಡ ನಮ್ಮ ಮುಂದಿದೆ. ದೆಹಲಿಯ ಪ್ರಕರಣದ ಬಳಿಕ ಡೇಟಿಂಗ್ ಆ್ಯಪ್ಗಳನ್ನು ಬ್ಯಾನ್ ಮಾಡಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಜೋರಾಗಿ ಕೇಳಿಬರುತ್ತಿದೆ.