ಪೊಲೀಸಪ್ಪನೋರ್ವ ಮೇಲಾಧಿಕಾರಿಗೆ ಬರೆದ ರಜೆ ಲೆಟರ್ ವೈರಲ್ | ಅಷ್ಟಕ್ಕೂ ಈ ರಜೆ ಲೆಟರ್ ನಲ್ಲಿ ಅಂತದ್ದೇನಿತ್ತು, ಗೊತ್ತೇ?
ಕೆಲಸ ಮಾಡುವ ಪ್ರತಿ ಉದ್ಯೋಗಿ ರಜೆಯನ್ನು ಅಪೇಕ್ಷಿಸುವುದು ಸಹಜ. ಅದರಲ್ಲೂ ಕೂಡ ಖಾಕಿ ಪಡೆಯ ವಿಚಾರಕ್ಕೆ ಬರುವುದಾದರೆ ಹಗಲಿರುಳು ದೇಶದಲ್ಲಿ ಕಾನೂನು ಸುವ್ಯವಸ್ಥೆ (Law And Order) ಕಾಪಾಡುವ ದೃಷ್ಟಿಯಲ್ಲಿ ದುಡಿಯುವುದು ವಾಡಿಕೆ.
ಕರ್ತವ್ಯದ ವಿಚಾರಕ್ಕೆ ಬಂದರೆ ಮನೆಯ ಕಡೆಗೂ ಗಮನ ನೀಡಲು ಆಗದಷ್ಟು ಒತ್ತಡಯುತ ಜೀವನ ಶೈಲಿಯಲ್ಲಿ ಕೆಲಸದ ಕಡೆಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಹಿರಿಮೆ ಅವರದ್ದು. ಪ್ರಕರಣಗಳ ಕುರಿತಾದ ತನಿಖೆ, ವಿಐಪಿ ಬಂದೋಬಸ್ತ್ ಅಲ್ಲಿ ಕೆಲಸ ನಿರ್ವಹಿಸಬೇಕಾಗಿ ಬಂದರೆ, ಪೊಲೀಸರಿಗೆ ರಜೆ (Leave) ಇರಲಿ ವಾರದ ರಜೆ ಕೂಡ ಸಿಗೋದು ಅನುಮಾನ. ಹಾಗಾಗಿ, ಕುಟುಂಬದ ಜೊತೆಗೂ ಸಮಯ ಕಳೆಯಲು ಸಾಧ್ಯವಾಗದೆ ಪರದಾಡುವ ಅವರ ಪಾಡು ಹೇಳಲಾಗದು. ಇನ್ನೂ ದೂರದ ಊರುಗಳಿಂದ ಬಂದು ನಗರದಲ್ಲಿ ಕೆಲಸ ಮಾಡುವ ಪೊಲೀಸರ ಕಥೆಯೂ ಕೂಡ ಇದಕ್ಕೆ ಹೊರತಾಗಿಲ್ಲ.
ಸಾಮಾನ್ಯವಾಗಿ ಶಾಲೆಗಳಲ್ಲಿ ಇಲ್ಲವೇ ಕೆಲಸ ನಿರ್ವಹಿಸುವ ಕಚೇರಿಗಳಲ್ಲಿ ರಜೆಗಾಗಿ ಅರ್ಜಿ ಸಲ್ಲಿಸಿ ಮನವಿ ಮಾಡುವುದು ಗೊತ್ತಿರುವ ವಿಚಾರ.ಆದರೆ ಇಲ್ಲೊಬ್ಬ ಪೋಲಿಸ್ ಪೇದೆ ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಅರೆ ಇದೇನಪ್ಪಾ ಕಹಾನಿ ಅಂತ ಯೋಚಿಸುತ್ತಿದ್ದೀರಾ?? ಇಲ್ಲಿದೆ ನೋಡಿ ಅದರ ಡೀಟೈಲ್ಸ್:
ಈ ನಡುವೆ ದಾವಣಗೆರೆಯ (Davanagere) ಪೊಲೀಸರೊಬ್ಬರು ವಾರದ ರಜೆಗಾಗಿ ಪೊಲೀಸ್ ನಿರೀಕ್ಷಕ ಸಿ.ಬಿ ರಿಷ್ಯಂತ್ ಅವರಿಗೆ ಪತ್ರ ಬರೆದಿದ್ದಾರೆ.
ಹೌದು!!.ದಾವಣಗೆರೆಯ ಪೊಲೀಸರೊಬ್ಬರಿಗೆ ವಾರದ ರಜೆಯೂ ಸಿಗದೆ ಚಿಂತೆಗೀಡಾಗಿದ್ದು, ತಮ್ಮ ಜಿಲ್ಲೆಯ ಹನುಮಂತಪ್ಪ ನೀಲಗುಂದ ಎಂಬವರು ರಜೆಗಾಗಿ ಪತ್ರ ಬರೆದಿದ್ದಾರೆ. ಪೊಲೀಸ್ ಕಾನ್ಸ್ಟೇಬಲ್ ಹನುಮಂತಪ್ಪ ನೀಲಗುಂದ ಅವರಿಗೆ ಮನೆಯಲ್ಲಿ ಮದುವೆ ಮಾಡಲು ಮುಂದಾಗಿದ್ದು, ಹುಡುಗಿಯನ್ನೂ ನೋಡಿ ಓಕೆ ಆಗಿದ್ದು, ಹೀಗಾಗಿ ಸಂಪ್ರದಾಯದಂತೆ ಹುಡುಗಿ ಮನೆಯವರು ಹುಡುಗನ ಮನೆಗೆ ಬರಲು ತೀರ್ಮಾನಿಸಿದ್ದರು. ಈ ವೇಳೆ ಕಾನ್ಸ್ಟೇಬಲ್ಗೆ ಊರಿಗೆ ತೆರಳಬೇಕಾಗಿತ್ತು. ಆದರೆ ಕಾನ್ಸ್ಟೇಬಲ್ ಹನುಮಂತಪ್ಪಗೆ ಕನಿಷ್ಠ ವಾರದ ರಜೆಯೂ ಲಭ್ಯವಾಗದೆ ಇದ್ದುದರಿಂದ ಕಂಗೆಟ್ಟ ಹನುಮಂತಪ್ಪ ನೇರವಾಗಿ ಜಿಲ್ಲಾ ಪೊಲೀಸ್ ನಿರೀಕ್ಷಕರಿಗೆ ಪತ್ರ ಬರೆದಿದ್ದಾರೆ.
ಪೊಲೀಸ್ ಪೇದೆ ಬರೆದ ಪತ್ರದಲ್ಲೇನಿದೆ?ಮಾನ್ಯರೇ, ನನಗೆ ಒಂದು ದಿನದ ವಾರದ ರಜೆ ಕೋರಿ ಮನವಿ ಪತ್ರವನ್ನು ಬರೆಯುತ್ತಿದ್ದು, ಮದುವೆಯಾಗಲು ಇಚ್ಛಿಸುವ ಹುಡುಗಿ ಮನೆಯ ಕಡೆಯವರು ನನ್ನ ಮನೆಗೆ ಬರುವ ಕಾರ್ಯಕ್ರಮ ನಿಗದಿಯಾಗಿದೆ. ಹೀಗಾಗಿ ತಾವುಗಳು 13-11-22ರಂದು ಒಂದು ದಿನದ ವಾರದ ರಜೆಯನ್ನು ಮಂಜೂರು ಮಾಡಬೇಕೆಂದು ಕೋರುತ್ತಿದ್ದೇನೆ ಎಂದು ಹನುಮಂತಪ್ಪ ನೀಲಗುಂದ ಪತ್ರ ಬರೆದಿದ್ದಾರೆ.
ದಾವಣಗೆರೆ ಪೊಲೀಸ್ ನಿರೀಕ್ಷಕರಿಗೆ ಈ ಪತ್ರ ತಲುಪುತ್ತಿದ್ದಂತೆ ರಜೆ ನೀಡಿದ್ದು, ಇದಲ್ಲದೆ, ನೀವು ಮದುವೆಯಾಗಲು ಇಚ್ಛಿಸಿರುವ ಹುಡುಗಿ ಒಪ್ಪಿಕೊಂಡು, ಶೀಘ್ರದಲ್ಲಿ ನಿಮ್ಮನ್ನು ಮದುವೆ ಆಗಲಿ ಎಂದು ಪೊಲೀಸ್ ನಿರೀಕ್ಷಕ ಸಿ.ಬಿ.ರಿಷ್ಯಂತ್ ಐಪಿಎಸ್ ಶುಭಹಾರೈಸಿದ್ದಾರೆ.
ಇದೆ ರೀತಿ, ಕೆಲ ತಿಂಗಳ ಹಿಂದೆ ಹೊಸದಾಗಿ ಮದುವೆಯಾದ ಪೇದೆ ಕೂಡ ರಜೆಗಾಗಿ ಪತ್ರ ಬರೆದಿದ್ದರು ಎನ್ನಲಾಗಿದ್ದು, ನಾನು ಹೊಸದಾಗಿ ಮದುವೆ ಆಗಿದ್ದು, ಅಲ್ಲದೇ ಹೊಸ ಹುರುಪಿನಲ್ಲಿದ್ದೇನೆ. ಹಾಗಾಗಿ ನನಗೆ 10 ದಿನ ಪರಿವರ್ತಿತ ರಜೆ ಅಥವಾ ಗಳಿಕೆ ರಜೆ ನೀಡಿ ಎಂದು ಪೇದೆಯೊಬ್ಬರು ವಿನೂತನವಾಗಿ ರಜೆ ಪತ್ರವನ್ನು ಬರೆದಿದ್ದಾರೆ. ಪೇದೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು .ನಮ್ಮ ಮನೆಯಲ್ಲಿ ದೇವರ ಪೂಜಾ ಕಾರ್ಯಕ್ರಮ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಮಾರುತಿ, ಇವೆಲ್ಲವನ್ನೂ ಪರಿಗಣಿಸಿ ಹತ್ತು ದಿನ ರಜೆ ನೀಡಬೇಕು ಎಂದು ಮನವಿ ಮಾಡಿದ್ದರು. ಹಾಗಾಗಿ, ರಜೆ ಕೂಡ ಪಡೆದು ಕೊಂಡಿದ್ದರು.