ಜಿ.ಪಂ. ,ತಾ.ಪಂ.ಚುನಾವಣೆ ಹೈಕೋರ್ಟ್ ಆದೇಶ ಪಾಲಿಸುವಂತೆ ಸುಪ್ರೀಂ ಸೂಚನೆ

ಬೆಂಗಳೂರು: ಈಗಾಗಲೇ ಅವಧಿ ಮುಗಿದಿರುವ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸುವ ಸಂಬಂಧ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ರಾಜ್ಯ ಚುನಾವಣಾ ಆಯೋಗಕ್ಕೆ (ಎಸ್‌ಇಸಿ) ಹಿನ್ನಡೆಯುಂಟಾಗಿದೆ. ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ವಿಕ್ರಂನಾಥ್ ನೇತೃತ್ವದ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ಹೈಕೋರ್ಟ್ ಆದೇಶವನ್ನು ಪಾಲಿಸುವಂತೆ ಆಯೋಗಕ್ಕೆ ಸೂಚಿಸಿದೆ.

 

ಕಳೆದ ವರ್ಷ ಮೇ ತಿಂಗಳಲ್ಲಿ ನಿಗದಿಯಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸುವ ಕುರಿತು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಲಿಲ್ಲ. ಇದೀಗ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಅರ್ಜಿಯು ಹೈಕೋಟ್‌ರ್ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವಾಗ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಕಾರಣ ನೀಡಿತು. ಕ್ಷೇತ್ರಗಳ ವಿಂಗಡಣೆ ಮತ್ತು ಮೀಸಲಾತಿಯನ್ನು ಪೂರ್ಣಗೊಳಿಸಲು ಇದೇ ಮೇ ತಿಂಗಳಲ್ಲಿ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ 12 ವಾರಗಳ ಕಾಲಾವಕಾಶ ನೀಡಿದ್ದು, ಇನ್ನು ಕೆಲ ದಿನಗಳಲ್ಲಿ ಅದು ಮುಕ್ತಾಯಗೊಳ್ಳಲಿದೆ. ಈ ಸಂಬಂಧ ಅಗತ್ಯ ಬಿದ್ದರೆ ಮತ್ತೆ ಹೈಕೋರ್ಟ್ ಮೊರೆ ಹೋಗುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್‌ಗಳ ಅಧಿಕಾರದ ಅವಧಿ ಮುಗಿದಾಗ ಚುನಾವಣಾ ಆಯೋಗವು ಚುನಾವಣೆ ನಡೆಸಲು ಸಜ್ಜಾಗಿತ್ತು. ಚುನಾವಣಾ ಆಯೋಗ ಕ್ಷೇತ್ರ ಮರುವಿಂಗಡಣೆ ನಡೆಸಿತ್ತಲ್ಲದೆ ಮೀಸಲಾತಿ ನಿಗದಿಯನ್ನು ನಡೆಸಿತ್ತು. ಚುನಾವಣಾ ದಿನಾಂಕಗಳನ್ನು ಘೋಷಿಸುವ ಹೊತ್ತಿಗೆ, ರಾಜ್ಯ ಸರ್ಕಾರವು ಚುನಾವಣಾ ಆಯೋಗದಿಂದ ಕ್ಷೇತ್ರ ಮರುವಿಂಗಡಣೆ ಮತ್ತು ಮೀಸಲಾತಿಯ ಅಧಿಕಾರವನ್ನು ಹಿಂತೆಗೆದುಕೊಂಡು ಪ್ರತ್ಯೇಕ ಸೀಮಾ ನಿರ್ಣಯ ಆಯೋಗವನ್ನು ಸ್ಥಾಪಿಸಿತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಚುನಾವಣಾ ಆಯೋಗ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಕಳೆದ ಮೇ ತಿಂಗಳಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕ್ಷೇತ್ರ ಪುನರ್ವಿಂಗಡಣೆ ಮತ್ತು ಮೀಸಲಾತಿ ನಿಗದಿಗೆ ಚುನಾವಣಾ ಆಯೋಗಕ್ಕೆ 12 ವಾರಗಳ ಗಡುವು ವಿಧಿಸಿತ್ತು. 12 ವಾರಗಳ ನಂತರ ಒಂದು ವಾರದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು ಎಂದೂ ಆಯೋಗಕ್ಕೆ ಆದೇಶಿಸಿತ್ತು.

ಈ ಪ್ರಕ್ರಿಯೆ ಪೂರ್ಣಗೊಳಿಸಲು ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಸೀಮಾ ನಿರ್ಣಯ ಆಯೋಗವು ಸರ್ಕಾರಕ್ಕೆ ಸೆಪ್ಟೆಂಬರಲ್ಲಿ ಮನವಿ ಮಾಡಿತ್ತು. ಈ ಸಂಬಂಧ ಹೈಕೋಟ್‌ರ್ಗೆ ಸರ್ಕಾರ ಪ್ರಮಾಣಪತ್ರ ಸಲ್ಲಿಸಿತ್ತು. ಹೈಕೋರ್ಟ್ ಮತ್ತೆ 12 ವಾರಗಳ ಕಾಲಾವಕಾಶ ನೀಡಿತ್ತು. ಆಯೋಗ ಸಿದ್ಧಪಡಿಸಿರುವ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ಪ್ರಕಾರವೇ ಚುನಾವಣೆ ನಡೆಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿತ್ತು.

Leave A Reply

Your email address will not be published.