‘ಕಾಂತಾರ’ ದಲ್ಲಿ ಪರಿಶಿಷ್ಟ ಜಾತಿಯವರನ್ನು ಕೀಳಾಗಿ ಬಿಂಬಿಸಲಾಗಿದೆ – ಸಮತಾ ಸೈನಿಕ ದಳ ಕಾರ್ಯದರ್ಶಿ ಲೋಲಾಕ್ಷ

‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದ್ದು, ಹಲವಾರು ದಾಖಲೆಗಳನ್ನೂ ಬರೆದಿದೆ. ಅಷ್ಟೇ ಅಲ್ಲದೆ ಜನರೆಲ್ಲಾ ಮೆಚ್ಚಿ ಹಚ್ಚಿಕೊಂಡಿದ್ದಾರೆ. ಆದರೆ ಇದೀಗ ಕಾಂತಾರ ವಿವಾದಕ್ಕೆ ಸಿಲುಕಿಕೊಂಡಿದೆ. ಈ ಸಿನಿಮಾದಲ್ಲಿ ಪರಿಶಿಷ್ಟ ಜಾತಿಯವರನ್ನು ಕೀಳಾಗಿ ತೋರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತವಾಗಿದೆ.

‘ದೈವಾರಾಧನೆಯಲ್ಲಿ ತೊಡಗಿರುವ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯವನ್ನು ‘ಕಾಂತಾರ ಒಂದು ದಂತ ಕಥೆ’ ಚಲನಚಿತ್ರದ ಕೆಲವು ದೃಶ್ಯಗಳಲ್ಲಿ ಕೀಳಾಗಿ ಬಿಂಬಿಸಲಾಗಿದೆ. ದೈವಾರಾಧನೆಯನ್ನು ವಿಕೃತಗೊಳಿಸಿ ಹಿಂಸೆಯನ್ನು ಪ್ರಚೋದಿಸಲಾಗಿದೆ’ ಎಂದು ಸಮತಾ ಸೈನಿಕ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸಿನಿಮಾದಲ್ಲಿ ಇರುವ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಬೇಕು. ಅಲ್ಲಿಯವರೆಗೆ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಬೇಕು’ ಎಂದು ಒತ್ತಾಯಿಸಿದರು. ‘ಚಿತ್ರ ತಂಡದ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಆದರೆ ಸಿನಿಮಾದಲ್ಲಿ ದೈವನರ್ತಕ ಸಮುದಾಯದ ವ್ಯಕ್ತಿಗಳನ್ನು ಅದರಲ್ಲಿಯೂ ಮಹಿಳೆಯರನ್ನು ಮತ್ತು ಯುವಜನರನ್ನು ಅವಮಾನ ಮಾಡುವ ಕೆಲವು ದೃಶ್ಯಗಳಿವೆ. ದೈವಾರಾಧನೆಯಲ್ಲಿ ಮಾನವ ವಿರೋಧಿ ಹಿಂಸೆಗೆ ಅವಕಾಶ ಇಲ್ಲ. ಈ ಚಿತ್ರದ ಕೆಲವು ದೃಶ್ಯಗಳಿಂದ ದೈವನಿಂದನೆಯಾಗಿದೆ. ಅಷ್ಟಾದರೂ ಈ ಸಿನಿಮಾ‌ಗೆ ಚಲನಚಿತ್ರ ಸೆನ್ಸಾರ್‌ ಮಂಡಳಿಯು ಯು/ಎ ಪ್ರಮಾಣಪತ್ರವನ್ನು ನೀಡಿದೆ. ಈ ಕ್ರಮ ಸರಿಯಲ್ಲ’ ಎಂದು ಹೇಳಿದರು.

ಅಸ್ಪೃಶ್ಯತಾ ಆಚರಣೆ ಮತ್ತು ಪರಿಶಿಷ್ಟ ಸಮುದಾಯಗಳ ಅವಮಾನ, ದೌರ್ಜನ್ಯಗಳು ಶಿಕ್ಷಾರ್ಹ ಅಪರಾಧ. ಕಾಂತಾರ ಸಿನಿಮಾದಲ್ಲಿ ಇಂತಹ ಕೆಲವು ದೃಶ್ಯಗಳು ಕಂಡು ದೈವ ನರ್ತಕ ಸಮುದಾಯದವರನ್ನು ನೋಡಿ ನಗುವಂತಾಗಿದೆ. ಇಂತಹ ದೃಶ್ಯಗಳಿಗೆ ಕತ್ತರಿ ಹಾಕಬೇಕು. ಅವುಗಳನ್ನು ಚಿತ್ರದಿಂದ ತೆಗೆಯಬೇಕು ಅಲ್ಲಿಯವರೆಗೂ ಈ ಚಿತ್ರದ ಪ್ರದರ್ಶನವನ್ನು ತಡೆಯಲು ಜಿಲ್ಲಾ ದಂಡಾಧಿಕಾರಿಯವರು ಕ್ರಮಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

Leave A Reply

Your email address will not be published.