ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಾಲಯಗಳಲ್ಲಿ ಮುದ್ರಾ ಧಾರಣೆ , ಜಯಂತಿ ಆಚರಣೆಗಳಿಗೆ ಅವಕಾಶವಿಲ್ಲ | ಮಾಧ್ವರ ವಿರೋಧ

ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಮಾಡಿರುವ ಆದೇಶವೊಂದು ಇದೀಗ ಮಾಧ್ವ ತತ್ವ ಅನುಯಾಯಿಗಳ ವಿರೋಧಕ್ಕೆ ಕಾರಣವಾಗಿದೆ. ಇಲಾಖಾ ವ್ಯಾಪ್ತಿಗೆ ಒಳಪಟ್ಟ ದೇವಾಲಯಗಳಲ್ಲಿ ಮುದ್ರಾಧಾರಣೆ ಸಹಿತ ಕೆಲವು ಆಚರಣೆಗಳಿಗೆ ಅವಕಾಶವಿಲ್ಲ ಎಂದು ಸರಕಾರ ಹೇಳಿದೆ.

ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಾಲಯಗಳಲ್ಲಿ ಮುದ್ರಾ ಧಾರಣೆ , ಜಯಂತಿ ಆಚರಣೆಗಳಿಗೆ ಅವಕಾಶವಿಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆದೇಶ ಮಾಡಿದ್ದಾರೆ. ಮುದ್ರ ಧಾರಣೆ ಸಂಪ್ರದಾಯವನ್ನು ಪಾಲಿಸುವ ಮಾಧ್ವ ಸಂಪ್ರದಾಯ ಅನುಯಾಯಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಯಾ ದೇವಾಲಯಗಳಲ್ಲಿ ಚಾಲ್ತಿಯಲ್ಲಿರುವ ಪದ್ಧತಿ ಸಂಪ್ರದಾಯಗಳಿಗೆ ವಿರುದ್ಧವಾದ ಆಚರಣೆ ನಡೆಸುವಂತಿಲ್ಲ.

ಈ ರೀತಿ ಧಾರ್ಮಿಕ ಆಚರಣೆ ನಡೆಸುವುದು ತಪ್ಪು, ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕರ್ನಾಟಕ ಕರಾವಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಾಧ್ವ ತತ್ವ ಅನುಸರಿಸುವವರಿದ್ದಾರೆ. ಈ ಆದೇಶದ ಹಿಂದೆ ತ್ರಿಮತಸ್ಥ ಬ್ರಾಹ್ಮಣ ಪಂಗಡಗಳ ನಡುವೆ ಒಡಕು ಮಾಡುವ ಪಿತೂರಿ ಇರುವ ಅನುಮಾನ ಹುಟ್ಟುಹಾಕಿದೆ. ಮಧ್ವಾಚಾರ್ಯರನ್ನು ಗುರುಗಳು ಎಂದು ಸ್ವೀಕರಿಸಿರುವ ದೊಡ್ಡ ಸಮುದಾಯಕ್ಕೆ ಈ ಆದೇಶದಿಂದ ನೋವಾಗಿದ್ದು, ದೇವಸ್ಥಾನದ ಚಾವಡಿಗಳಲ್ಲಿ ಅನೇಕ ವರ್ಷಗಳಿಂದ ಮುದ್ರಾಧಾರಣೆ ನಡೆಸಲಾಗುತ್ತಿದೆ. ಇದು ಭಕ್ತರ ಅನುಕೂಲಕ್ಕೆ ನಡೆದುಕೊಂಡು ಬಂದ ಸಂಪ್ರದಾಯವೇ ಹೊರತು ಯಾರ ಒತ್ತಾಯದ ಮುದ್ರಾಧಾರಣೆ ಮಾಡುವುದಿಲ್ಲವೆಂದು ಹೇಳಿದ್ದು, ಹಾಗಾಗಿ ಈ ಆದೇಶವನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಮಾಧ್ವ ಸಮುದಾಯ ಆಗ್ರಹಿಸಿದೆ.

ಈ ಬಗ್ಗೆ ಸ್ವತಃ ಮಾಧ್ವ ಸಂಪ್ರದಾಯಕ್ಕೆ ಸೇರಿದ ಉಡುಪಿಯ ಶಾಸಕ ರಘುಪತಿ ಭಟ್ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಉಡುಪಿಯ ಅಷ್ಟ ಮಠಾಧೀಶರು ಕೂಡಾ ಈ ಬಗ್ಗೆ ಚರ್ಚೆ ನಡೆಸಿ ಸರಕಾರದ ಗಮನ ಸೆಳೆಯಲು ತೀರ್ಮಾನಿಸಿದ್ದಾರೆ.

Leave A Reply

Your email address will not be published.