ಮಾಡಿದ್ದುಣ್ಣೋ ಮಾರಾಯ |ಇನ್ನೊಬ್ಬ ಬೈಕ್ ಸವಾರನನ್ನು ಕಾಲಿನಲ್ಲಿ ತುಳಿಯೋದಕ್ಕೆ ಹೋದಾಕೆಗೆ ಏನಾಯಿತು ನೋಡಿ | ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್‌

ನಮ್ಮಲ್ಲಿ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ರೂಲ್ಸ್ ಬ್ರೇಕ್ ಮಾಡುವವರು ಒಂದು ಕಡೆಯಾದರೆ, ರೋಡನ್ನು ತಮ್ಮ ಮನೆಯಂತೆ ತಂಗುದಾಣ ಮಾಡಿಕೊಳ್ಳುವ ಕುಡುಕರ ಸಂಘ ಒಂದೆಡೆ ಇವುಗಳ ನಡುವೆ ಮನರಂಜನೆಯ ತಾಣವಾಗಿ ಮಾಡಿಕೊಳ್ಳುವವರು ಕೂಡ ಇದ್ದಾರೆ.

ಓಡಾಡುವ ರಸ್ತೆಯಲ್ಲಿ ಸೀದಾ ಸಾದ ಹೋದರೆ ಹೇಗೆ? ನಮ್ಮನ್ನು ಮತ್ತೊಬ್ಬರು ಗುರುತಿಸುವ ನಿಟ್ಟಿನಲ್ಲಿ ಒಂದಲ್ಲ ಒಂದು ತಲೆಹರಟೆ ಮಾಡುವವರೇ ಹೆಚ್ಚು!! ರೋಡ್ ನಲ್ಲಿ ಸ್ಟಂಟ್ ಮಾಡಿಕೊಂಡು, ಅತಿ ವೇಗವಾಗಿ ಹೋಗುವ ಇಲ್ಲವೇ ತಮ್ಮ ವಾಹನಗಳ ಮುಂದೆ ಯಾವುದಾದರೂ ಪ್ರಾಣಿಗಳಿದ್ದರೆ ಅದಕ್ಕೆ ತೊಂದರೆ ಕೊಡುವ ವಿನಾ ಕಾರಣ ಹಾರ್ನ್ ಹೊಡೆಯುವ, ಗಾಡಿಗಳನ್ನು ಓವರ್ ಟೇಕ್ ಮಾಡಲು ಪರದಾಡುವ ಹೀಗೆ ನಾನಾ ಮನಸ್ಥಿತಿಯ ವ್ಯಕ್ತಿಗಳು ನಮ್ಮ ನಡುವೆಯಿದ್ದಾರೆ.

ಏನೋ ಮಾಡಲೂ ಹೋಗಿ ಮತ್ತೊಂದು ಅವಾಂತರ ಮಾಡಿಕೊಳ್ಳುವ ಮಂದಿಯೇ ಹೆಚ್ಚು. ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮಾಡಿದ್ದುಣ್ಣೋ ಮಹಾರಾಯ!! ಎಂಬಂತಹ ಮಾತುಗಳು ಈ ವೀಡಿಯೊ ನೋಡಿದವರ ಬಾಯಲ್ಲಿ ಕೇಳಿ ಬರುತ್ತಿದೆ.

ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದ ಮಹಿಳೆಯೊಬ್ಬರು ತನ್ನ ಹತ್ತಿರ ಚಾಲನೆ ಮಾಡುತ್ತಿದ್ದ ಇನ್ನೊಬ್ಬ ಬೈಕ್ ಸವಾರನನ್ನು ಒದೆಯಲು ಪ್ರಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಸಂಚಲನ ಮೂಡಿಸಿದೆ.

ಮೂಲತಃ ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ಈ ಕ್ಲಿಪ್‌ನಲ್ಲಿ ಮಹಿಳೆಯೊಬ್ಬರು ತನ್ನ ಬೈಕ್‌ನ ಹಿಂಭಾಗದಿಂದ ತನ್ನ ಪಕ್ಕದಲ್ಲಿ ಚಲಿಸುತ್ತಿದ್ದ ಇನ್ನೊಬ್ಬ ಸವಾರನ ಮೇಲೆ ಕಾಲಿನಲ್ಲಿ ತುಳಿಯಲು ಹೋಗಿ ತಾನೇ ಬಿದ್ದಿರುವ ಘಟನೆ ನಡೆದಿದೆ.

ಆಕೆ ಬಿದ್ದಾಗ ಹಿಂದಿನಿಂದ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಜನರು ಕೂಡ ತಮ್ಮ ವಾಹನವನ್ನು ನಿಲ್ಲಿಸಿ ನಡೆಯುತ್ತಿದ್ದ ನಾಟಕವನ್ನು ನೋಡಿ ಮುಂದೆ ಸಾಗಿದ್ದಾರೆ. ಮಹಿಳೆ ಬಿದ್ದಾಗ ಹೆಚ್ಚಿನ ಗಾಯಗಳು ಆದಂತೆ ಕಂಡು ಬರುತ್ತಿಲ್ಲ.

ಈ ವೀಡಿಯೊ ನೋಡಿದ ನೆಟ್ಟಿಗರು ನಗೆಗಡಲಲ್ಲಿ ತೇಲುತ್ತಿದ್ದು, ವೀಡಿಯೋ ವೀಕ್ಷಿಸಿ ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ . “ಹಹಹಾ ಹ್ಹಾ ಆಕೆ ಬಿದ್ದಿರುವುದು ಒಳ್ಳೆಯದ್ದಾಗಿದೆ ಎಂದು ಖುಷಿ ಪಟ್ಟಿದ್ದಾರೆ. ಮತ್ತೊಬ್ಬರಿಗೆ ತೊಂದರೆ ಕೊಡಲು ಹೋಗಿ ಮಹಿಳೆ ತಾನೇ ಉಳಿದವರ ಮುಂದೆ ಬಿದ್ದು, ಎಲ್ಲರ ಮುಂದೆ ನಗೆಪಾಟಲಿಗೆ ಗುರಿಯಾಗಿದ್ದು ವಿಪರ್ಯಾಸ.

Leave A Reply

Your email address will not be published.