ಡೆಡ್ಲಿ ವೈರಸ್ ತಯಾರಿಗೆ ರೆಡಿಯಾದ ಪಾಕಿಸ್ತಾನ, ಚೀನಾ| ಭಾರತಕ್ಕೆ ಕಾದಿದೆಯಾ ಆಪತ್ತು?

ಜಗತ್ತು ಎಂದು ಕಂಡರಿಯದ ಕೋರೋನಾ ಮಹಾಮಾರಿಗೆ ಎರಡು ವರ್ಷಗಳ ಕಾಲ ಭಯದಲ್ಲೇ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗಷ್ಟೇ ಕೊರೊನಾ ವೈರಸ್‌ನಿಂದ ಬಿಡುಗಡೆ ಹೊಂದಿದೆವು ಎಂಬ ನಿಟ್ಟುಸಿರು ಬಿಡುತ್ತಿರುವ ನಡುವೆ ಮತ್ತೊಂದು ಆಘಾತಕಾರಿ ಸಂಗತಿ ಬಹಿರಂಗವಾಗಿದೆ.

ಚೀನಾ ಹಾಗೂ ಪಾಕಿಸ್ತಾನ ಜೈವಿಕ ಅಸ್ತ್ರ ಅಭಿವೃದ್ಧಿಪಡಿಸುವ ಕುರಿತು ರಹಸ್ಯ ಸಂಶೋಧನೆ ನಡೆಸುತ್ತಿವೆ ಎಂಬ ಕಳವಳಕಾರಿ ವಿಚಾರ ಹೊರಬಿದ್ದಿದೆ. ಪಾಕಿಸ್ತಾನದ ರಾವಲ್ಪಿಂಡಿಯ ಪ್ರಯೋಗಾಲಯ ಬಳಸಿಕೊಂಡು ಕೋವಿಡ್‌ಗಿಂತಲೂ ಭೀಕರ ಹಾಗೂ ಅದಕ್ಕಿಂತ ಘೋರವಾಗಿ ಹೆಚ್ಚು ಹಾನಿ ಮಾಡಬಲ್ಲ ವೈರಸ್ ಅನ್ನು ಚೀನಾ ಸೃಷ್ಟಿಸಲು ಹೊರಟಿರುವ ಕುರಿತು ಜಾಗತಿಕ ಮಾದ್ಯಮಗಳು ವರದಿ ಮಾಡಿವೆ.

ಜೈವಿಕ ಅಸ್ತ್ರದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುವ ನಿಟ್ಟಿನಲ್ಲಿ ವಿಶ್ವಕ್ಕೆ ಕೋವಿಡ್ ಹಬ್ಬಿಸಿದ ಕುಖ್ಯಾತಿ ಹೊಂದಿರುವ ಚೀನಾದ ವುಹಾನ್ ವೈರಾಲಜಿ ಸಂಸ್ಥೆ ಹಾಗೂ ಪಾಕಿಸ್ತಾನದ ರಕ್ಷಣಾ ವಿಜ್ಞಾನ-ತಂತ್ರಜ್ಞಾನ ಸಂಸ್ಥೆಗಳು ಅತ್ಯಾಧುನಿಕ ವೈಜ್ಞಾನಿಕ ಮೂಲಸೌಕರ್ಯ ಸೃಷ್ಟಿಸಿವೆ ಎನ್ನಲಾಗುತ್ತಿದೆ.

ಅತ್ಯಂತ ಅಪಾಯಕಾರಿ ರೋಗಕಾರಕ ವೈರಸ್‌ಗಳ ಕುರಿತು ಸಂಶೋಧನೆ ನಡೆಸುವ ಕೇಂದ್ರವಾಗಿರುವ, ಈ ಪ್ರಯೋಗಾಲಯ ರಾವಲ್ಪಿಂಡಿಯ ಚಾಲಾ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಕುರಿತು ಸುದ್ದಿಸಂಸ್ಥೆ ವರದಿ ನೀಡಿವೆ.ಸಾಮಾನ್ಯವಾಗಿ ಬಿಎಸ್‌ಎಲ್ -೪ ಲ್ಯಾಬ್‌ಗಳನ್ನು ಮಾರಣಾಂತಿಕ ಸೋಂಕುಗಳಿಗೆ ಕಾರಣವಾಗುವ ಸೋಂಕು ಕಾರಕಗಳ ಕುರಿತ ಅಧ್ಯಯನಕ್ಕೆ ಬಳಸಲಾಗುತ್ತದೆ. ಇಂತಹ ರೋಗಗಳಿಗೆ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿರುವುದಿಲ್ಲ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

೨ ಸ್ಟಾರ್ ಹೊಂದಿರುವ ಜನರಲ್‌ವೊಬ್ಬರು ಇದರ ನೇತೃತ್ವ ವಹಿಸಿದ್ದು, `ಬಯೋಸೇಫ್ಟಿ ಲೆವೆಲ್ ೪’ (ಬಿಎಸ್‌ಲ್-೪) ಘಟಕವಾಗಿದೆ.ಈ ಪ್ರಯೋಗಾಲಯದಲ್ಲಿ ಅತ್ಯಂತ ಅಪಾಯಕಾರಿಯಾಗಿದ್ದು, ಹೆಚ್ಚು ಸೋಂಕು ಹರಡುವ ವೈರಸ್‌ಗಳನ್ನು ಪರೀಕ್ಷಿಸಿ, ಅಭಿವೃದ್ಧಿಪಡಿಸಲಾಗುತ್ತದೆ .

ಸದ್ಯ ಇದು ವೈಜ್ಞಾನಿಕ ಪ್ರಯೋಗವೆಂದು ಹೇಳಿಕೊಂಡರು ಕೂಡ ವೈರಸ್‌ಗಳನ್ನು ಅಸ್ತ್ರ ಮಾಡಿಕೊಳ್ಳುವ ಕೆಲಸವೆಂದು ಜೈವಿಕ ಅಸ್ತ್ರಗಳ ಪರಿಣತರು ಎಚ್ಚರಿಸಿರುವುದಾಗಿ ವರದಿ ತಿಳಿಸಿದೆ.

Leave A Reply

Your email address will not be published.