ರಾಜ್ಯದಲ್ಲಿ ಏನೇ ಆಗಲಿ..ಏನೇ ಹೋಗಲಿ.. ಕುಡಿಯೋದೆ ನಮ್ಮ ವೀಕ್ನೆಸ್ ಅಂತ .. ಎಣ್ಣೆ ಪ್ರಿಯರು ಬಾರ್ ಗೆ ದೌಡಾಯಿಸಿ ಕುಡಿಯದೆ ಹೋದರೆ ಮದ್ಯ ಪ್ರಿಯರಿಗೆ ದಿನವೇ ಪೂರ್ತಿಯಾಗದು. ಬಾರ್ ಮುಂದೆ ನಿಂತು ಎಣ್ಣೆ ಬೇಕು ಅಣ್ಣಾ…ಇನ್ನೂ ಬೇಕು ಅಣ್ಣಾ.. ಅಂತ ಕಂಠಪೂರ್ತಿ ಕುಡಿದಾಗಲೆ ಲೋಕದ ಇಹಪರದ ಚಿಂತೆಗಳೆಲ್ಲ ಮಾಯವಾಗುತ್ತದೆ ಎಂಬ ನಂಬಿಕೆ ಹೆಚ್ಚಿನವರದ್ದು. ಹಾಗಾಗಿ, ಕುಡಿಯುವವರಿಂದಲೆ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ಹಣ ಜಮೆಯಾಗುವುದರಿಂದ ಸರ್ಕಾರ ಕೂಡ ಈ ಕುರಿತು ಚಕಾರ ಎತ್ತದು.
ಇದೀಗ ಆಘಾತಕಾರಿ ಮಾಹಿತಿ ಬಹಿರಂಗವಾಗಿದ್ದು, ಕಳೆದ ಏಳು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಬಿಯರ್ ಕುಡಿಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
ಹೌದು! ಈ ವರ್ಷ ಬಿಯರ್ (Beer) ಕುಡಿಯುವವರ ಸಂಖ್ಯೆ ಹೆಚ್ಚಾಗಿದ್ದು, ಉಳಿದೆಲ್ಲ ಮದ್ಯಕ್ಕಿಂತ ಬಿಯರ್ ಬಾಟಲಿಗಳೇ ಹೆಚ್ಚು ಖಾಲಿಯಾಗಿವೆ. ಮೊದಲು ಹವ್ಯಾಸವಾಗಿ ಮತ್ತೆ ಚಟದಂತೆ ಮಾರ್ಪಟ್ಟು ಕುಡಿತದ ದಾಸರಾಗುವ ಸಂಖ್ಯೆ ಹೆಚ್ಚು ಎಂದರೂ ತಪ್ಪಾಗಲಾರದು.
ಸಾಮಾನ್ಯವಾಗಿ ಹೊಸದಾಗಿ ಕುಡಿತದ ಚಟವನ್ನು ಪ್ರಾರಂಭಿಸುವವರೆಲ್ಲ ಮೊದಲು ಕೈ ಹಾಕುವುದೇ ಬಿಯರ್ ಬಾಟಲಿಗೆ . ಹೀಗಾಗಿ, ಸದ್ಯ ಈಗಿರುವ ಅಂಕಿ- ಅಂಶ ಗಮನಿಸಿದರೆ, ಯುವಜನತೆ ಹೆಚ್ಚು ಕುಡಿಯುವುದರ ಕಡೆ ಮುಖ ಮಾಡಿದ್ದಾರೆಯೇ ಎಂಬ ಅನುಮಾನವನ್ನು ಸೃಷ್ಟಿಸಿದೆ.ಕಳೆದ ಏಳು ತಿಂಗಳ ಅವಧಿಯಲ್ಲಿ ಹೆಚ್ಚು ಮದ್ಯದ ನಶೆಯಲ್ಲಿ ತೇಲಿದವರಲ್ಲಿ ಬಿಯರ್ ಪ್ರಿಯರು ಮೊದಲಿನ ಪಟ್ಟದಲ್ಲಿದ್ದಾರೆ.
ಮದ್ಯ ಮಾರಾಟದಿಂದಲೇ ಸರ್ಕಾರಕ್ಕೆ ₹16,948 ಕೋಟಿ ವರಮಾನ ಸಂಗ್ರಹವಾಗಿದೆ. ಈ ರೀತಿ ಸಂಗ್ರಹವಾದ ಮೊತ್ತದಲ್ಲಿ ಬಿಯರ್ ಪ್ರಿಯರ ಕೊಡುಗೆಯೇ ಹೆಚ್ಚಾಗಿದೆ. ಮದ್ಯ (ಐಎಂಎಲ್) ಮತ್ತು ಬಿಯರ್ ಮಾರಾಟದಲ್ಲಿ ಏರಿಕೆ ಕಂಡು ಬಂದಿದ್ದು ಇದರಲ್ಲಿ ಬಿಯರ್ ಸೇವನೆ ಗಣನೀಯವಾಗಿ ಅಂದರೆ ಶೇ 59.66ರಷ್ಟು ಹೆಚ್ಚಾಗಿದೆ.
ಕಳೆದ ವರ್ಷದ ಏಳು ತಿಂಗಳ ಅವಧಿಯ ವರಮಾನಕ್ಕೆ ಹೋಲಿಸಿದರೆ 2,333 ಕೋಟಿ ರೂಪಾಯಿ ಹೆಚ್ಚುವರಿ ವರಮಾನ ಸಂಗ್ರಹವಾಗಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದು, ಇನ್ನು ವಿಸ್ಕಿ, ಬ್ರಾಂದಿ ಹಾಗೂ ರಮ್ ಸೇವನೆಯಲ್ಲೂ ಶೇ 7.64 ರಷ್ಟು ಹೆಚ್ಚಾಗಿದೆ.
ಈ ವರ್ಷ ಅಬಕಾರಿ ಇಲಾಖೆಯು 29 ಸಾವಿರ ಕೋಟಿ ರೂಪಾಯಿಯನ್ನು ಮದ್ಯ ಮಾರಾಟದಿಂದ ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿದ್ದು, ಸದ್ಯದಲ್ಲೇ ಗುರಿ ಮುಟ್ಟುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಸದ್ಯ 16,948 ಕೋಟಿ ರೂಪಾಯಿ ಮದ್ಯ ಮಾರಾಟದಿಂದ ಸಂಗ್ರಹವಾಗಿದೆ. ಒಟ್ಟಾರೆ 397.43 ಲಕ್ಷ ಬಾಕ್ಸ್ ಮದ್ಯ(ಐಎಂಎಲ್) ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 28.22 ಲಕ್ಷ ಬಾಕ್ಸ್ ಹೆಚ್ಚುವರಿ ಮದ್ಯ ಮಾರಾಟವಾಗಿದೆ ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.
ಸಾಮಾನ್ಯವಾಗಿ ಅಬಕಾರಿ ಇಲಾಖೆಯ ಬಳಿ ಎಷ್ಟು ಪ್ರಮಾಣದಲ್ಲಿ ಯಾವ ಮದ್ಯ ಮಾರಾಟವಾಗಿದೆ ಎನ್ನುವುದರ ಬಗ್ಗೆ ಮಾತ್ರ ಮಾಹಿತಿ ಲಭ್ಯವಾದರು ಕೂಡ ಖರೀದಿಸಿದವರ ಮಾಹಿತಿ ಲಭ್ಯವಾಗುವುದಿಲ್ಲ .ಕನಿಷ್ಠ ವಯೋಮಾನದವರಿಗಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡಬಾರದು ಎನ್ನುವ ನಿಯಮವಿದೆಯಾದರೂ, ಕೆಲವು ನಿರ್ದಿಷ್ಟ ಕಡೆಗಳಲ್ಲಿ ಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿಲ್ಲ.
ಇದರ ಜೊತೆಗೆ ಕೆಲವರು ಬೇರೆ ಮದ್ಯ ಸೇವನೆ ಮಾಡುವುದನ್ನು ಬಿಟ್ಟು ಬಿಯರ್ ಮೊರೆ ಹೋಗಿರುವ ಸಾಧ್ಯತೆಯು ಕೂಡ ದಟ್ಟವಾಗಿದೆ. ಮದ್ಯ ಮಾರಾಟದಿಂದ ಸರ್ಕಾರಕ್ಕೆ ಹೆಚ್ಚು ಆದಾಯವೇನೋ ಸಂಗ್ರಹವಾಗಿದ್ದು, ಆದರೆ, ಇದರಲ್ಲಿ ಬಿಯರ್ ಪ್ರಮಾಣವೇ ಹೆಚ್ಚಾಗಿರುವುದರಿಂದ ಅನೇಕ ಊಹಾಪೋಹ ಗಳಿಗೆ ಎಡೆ ಮಾಡಿ ಕೊಟ್ಟಿದೆ.ಯುವಕರು ಅಥವಾ ಹೊಸದಾಗಿ ಯಾರಾದರೂ ಮದ್ಯ ಸೇವನೆಗೆ ಸೇರ್ಪಡೆ ಆಗಿದ್ದಾರೆಯೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.