ದೊಡ್ಡಪತ್ರೆ/ ಸಾಂಬಾರು ಬಳ್ಳಿ/ಸಾಂಬ್ರಾಣಿ ಎಲೆಯ ಆರೋಗ್ಯ ಪ್ರಯೋಜನಗಳು

ಹೆಚ್ಚಿನವರು ತಮ್ಮ ಹಿತ್ತಲಲ್ಲಿ ಇಲ್ಲವೇ ಕೈತೋಟದಲ್ಲಿ ಸಾಂಬ್ರಾಣಿ ಎಲೆಯನ್ನು ಬೆಳೆಸಿರುತ್ತಾರೆ. ಆರೋಗ್ಯದ ಗಣಿಯಾಗಿರುವ ದೊಡ್ಡಪತ್ರೆಯನ್ನು ಮನೆಯ ಹಿತ್ತಲಿನಲ್ಲಿ ಬೆಳೆಯುವುದರ ಜೊತೆಗೆ ದಿನನಿತ್ಯ ನಿಯಮಿತವಾಗಿ ಸೇವನೆ ಮಾಡಿ ಹಲವು ರೀತಿಯ ಉಪಯೋಗ ಪಡೆಯಬಹುದಾಗಿದೆ.

ಇದನ್ನು ಸಾಂಬ್ರಾಣಿ, ಸಂಬಾರಬಳ್ಳಿ, ಅಜವಾನದೆಲೆ, ಕರ್ಪೂರವಳ್ಳಿ, ಚೆಂಪರವಳ್ಳಿ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ.

ಶೀತ ಮತ್ತು ಕೆಮ್ಮು ಎನ್ನುವುದು ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದ್ದು, ವಾತಾವರಣದಲ್ಲಿ ಉಂಟಾಗುವ ಕೊಂಚ ಬದಲಾವಣೆ ಅಥವಾ ಸೋಂಕುಗಳಿಂದ ಬಹುಬೇಗ ಪ್ರೇರೇಪಿತಗೊಳ್ಳುತ್ತದೆ. ಅಂತಹ ಶೀತ ಕೆಮ್ಮು ಸಮಸ್ಯೆಗೆ ಈ ಸೊಪ್ಪು ರಾಮಬಾಣವಾಗಿದೆ.

ದೊಡ್ಡಪತ್ರೆ ಎಲೆಯನ್ನು ಜಜ್ಜಿ ಅದರ ವಾಸನೆಯನ್ನು ಸೇವಿಸಿದರೆ ಕಟ್ಟಿದ ಮೂಗಿನ ಸಮಸ್ಯೆಯಿಂದ ನಿವಾರಣೆ ಹೊಂದಬಹುದು.

ಕೆಮ್ಮು, ಕಫ ತೊಂದರೆಯಿಂದ ಬಳಲುತ್ತಿದ್ದರೆ ದೊಡ್ಡಪತ್ರೆ ಎಲೆಗಳನ್ನು ಹುರಿದು, ಅದರ ರಸಕ್ಕೆ ಜೇನುತುಪ್ಪವನ್ನು ಬೆರೆಸಿ ಸೇವನೆ ಮಾಡುವುದರಿಂದ ಸಮಸ್ಯೆಗಳು ದೂರವಾಗುತ್ತವೆ.

ದೊಡ್ಡಪತ್ರೆ ಎಲೆ, ತುಳಸಿ ಮತ್ತು ವೀಳ್ಯದೆಲೆಯನ್ನು ಅರೆದು ರಸ ತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ನೆಗಡಿ, ಕೆಮ್ಮು ದೂರವಾಗುತ್ತದೆ. ನಾರಿನಂಶ, ಜೀವಸತ್ವ ಹಾಗೂ ಕಬ್ಬಿಣಾಂಶಗಳ ಆಗರವಾಗಿರುವ ಸಾಂಬ್ರಾಣಿ ಸೊಪ್ಪನ್ನು ಹಾಗೆಯೇ ಜಗಿದು ತಿನ್ನಬಹುದಾಗಿದೆ.

ಸಂಜೀವಿನಿ ಗಿಡವಾದ ದೊಡ್ಡಪತ್ರೆ ಅಥವಾ ಸಾಂಬ್ರಾಣಿ ಎಲೆಯಲ್ಲಿ ನೀರಿನಂಶ ಹೆಚ್ಚಿದ್ದು ಹಲವಾರು ಔಷಧಿಯ ಗುಣಗಳನ್ನು ಹೊಂದಿದೆ.

ಇದನ್ನು ಸ್ವಚ್ಛವಾಗಿ ತೊಳೆದು ಕಾವಲಿಯ ಮೇಲಿಟ್ಟು ಬಿಸಿ ಮಾಡಿ ರಸ ಹಿಂಡಿ ಜೇನುತುಪ್ಪದೊಂದಿಗೆ ಮಕ್ಕಳಿಗೆ ಕೊಟ್ಟರೆ ಶೀತ, ಕೆಮ್ಮು, ಕಫದ ಸಮಸ್ಯೆ ನಿವಾರಣೆಯಾಗುತ್ತದೆ.

ಕಾಮಾಲೆ ರೋಗವುಳ್ಳವರು 10(ಹತ್ತು) ದಿನಗಳ ಕಾಲ ದೊಡ್ಡಪತ್ರೆ ಎಲೆಗಳನ್ನು ಆಹಾರ ರೂಪದಲ್ಲಿ ಸೇವಿಸಿದರೆ ರೋಗ ಗುಣವಾಗುತ್ತದೆ. ದೊಡ್ಡಪತ್ರೆ ಎಲೆಯ ಪೇಸ್ಟ್ ತಯಾರಿಸಿ ಅದನ್ನು ಚೇಳು, ಕಂಬಳಿ ಹುಳದಂತಹ ಕೀಟಗಳು ಕಚ್ಚಿದ ಗಾಯಕ್ಕೆ ಹಚ್ಚಿದರೆ ನೋವು ದೂರವಾಗುತ್ತದೆ.

ಅಲ್ಲದೆ, ದೊಡ್ಡಪತ್ರೆಯ ಎಲೆಯನ್ನು ಉಪ್ಪು ಸಹಿತ ತಿಂದರೆ ಜೀರ್ಣಶಕ್ತಿ ಅಧಿಕವಾಗುತ್ತದೆ. ದೊಡ್ಡ ಪತ್ರೆಯ ರಸವನ್ನು ಮೊಸರಿನಲ್ಲಿ ಬೆರೆಸಿ ಮುಖ, ಕೈಕಾಲುಗಳಿಗೆ ಹಚ್ಚಿಕೊಳ್ಳವುದರಿಂದ ತ್ವಚೆಯನ್ನು ಕಾಂತಿಯುತಗೊಳಿಸಬಹುದು.

ಶೀತದಿಂದಾಗಿ ಮಕ್ಕಳಿಗೆ ಮಲಬದ್ದತೆಯಾದರೆ ಎಲೆಗಳ ರಸವನ್ನು ಜೇನುತುಪ್ಪ ಬೆರೆಸಿ ಕುಡಿಸಿದರೆ ಮಲಬದ್ದತೆ ನಿವಾರಣೆಯಾಗುತ್ತದೆ. ದೊಡ್ಡಪತ್ರೆ ಎಲೆ, ಕಾಳುಮೆಣಸು ಮತ್ತು ಉಪ್ಪನ್ನು ಅಗೆದು ರಸ ಕುಡಿದರೆ ಬಾಯಿಯ ದುರ್ನಾತ ದೂರವಾಗಿ ಪಿತ್ತ ಶಮನವಾಗುತ್ತದೆ.

ಗ್ಯಾಸ್ಟ್ರಿಕ್ ಕೂಡ ಈ ದೊಡ್ಡ ಪತ್ರೆ ಎಲೆಯಿಂದ ದೂರವಾಗುವ ಜೊತೆಗೆ ರಕ್ತವನ್ನು ಕೂಡ ಶುದ್ಧೀಕರಿಸುತ್ತದೆ . ದೊಡ್ದ ಪತ್ರೆಯ ಚಟ್ನಿ ತಂಬುಳಿ ಮಾಡಿಕೊಂಡು ಕೂಡ ಈ ದೊಡ್ಡ ಪತ್ರೆ ಎಲೆಯನ್ನು ಬಳಸಬಹುದಾಗಿದೆ.

ಸಂಧಿವಾತದ ಸಮಸ್ಯೆಯಿಂದ ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ, ದೊಡ್ಡಪತ್ರೆ ಎಲೆಗಳನ್ನು ಅರೆದು ಪೇಸ್ಟ್ ರೀತಿಯಲ್ಲಿ ತಯಾರಿಕೊಂಡು ಲೇಪನಮಾಡುವುದರಿಂದ ನೋವು ನಿವಾರಣೆಯಾಗುತ್ತದೆ.

ಬಹುಪಯೋಗಿ ಔಷಧಗಳ ಗುಣಗಳ ಆಗರವಾಗಿರುವ ದೊಡ್ಡಪತ್ರೆಯ ಸೇವನೆಯಿಂದ ಅನೇಕ ಪ್ರಯೋಜನ ಪಡೆಯಬಹುದು.

Leave A Reply

Your email address will not be published.