Google : ಗೂಗಲ್ ಗೆ ದಂಡದ ಮೇಲೆ ದಂಡ | 5 ದಿನದಲ್ಲಿ ಮತ್ತೆ ದಂಡ ಬಿತ್ತು, ಬರೋಬ್ಬರಿ 936 ಕೋಟಿ ಫೈನ್ ಹಾಕಿದ ಸಿಸಿಐ!!ಕಾರಣವೇನು?
ಇತ್ತೀಚೆಗೆ ದೈತ್ಯ ಟೆಕ್ ಗೂಗಲ್ ಹಲವಾರು ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿದೆ. ಅ.20 ರಂದು ಪ್ಲೇ ಸ್ಟೋರ್ ಗೆ ಸಂಬಂಧಿಸಿದ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡ ಕಾರಣ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಬರೋಬ್ಬರಿ 1,337.76 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಆಂಟಿಟ್ರಸ್ಟ್ ನ ತನಿಖೆ ಮುಕ್ತಾಯಗೊಳ್ಳುತ್ತಿದ್ದಂತೆ ಮತ್ತೊಂದು ಬಾರಿ ದಂಡ ವಿಧಿಸಿದೆ.
ಏಕೆಂದರೆ ಪ್ಲೇ ಸ್ಟೋರ್ ನಲ್ಲಿ ತನ್ನ ಪಾವತಿಗಳ ಅಪ್ಲಿಕೇಶನ್ ಮತ್ತು ಅಪ್ಲಿಕೇಶನ್ ನಲ್ಲಿ ಪಾವತಿ ವ್ಯವಸ್ಥೆಯನ್ನು ಉತ್ತೇಜಿಸಲು ಅದರ ಮಾರುಕಟ್ಟೆ ಸ್ಥಾನವನ್ನು ದುರುಪಯೋಗ ಪದಡಿಸಿಕೊಂಡಿದೆ. ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲೂ ತನ್ನ ಕಮಾಂಡಿಗ್ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಅಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಇದೊಂದು ಸ್ಮಾರ್ಟ್ ಫೋನ್ ಗಳಲ್ಲಿ ಅಪ್ಲಿಕೇಶನ್ ಮತ್ತು ಪ್ರೋಗ್ರಾಮ್ ಗಳನ್ನು ಚಲಾಯಿಸಲು ಬಳಸುವ ಸಿಸ್ಟಮ್. ಸಿಸಿಐ ಯು ಈ ಸಿಸ್ಟಮ್ ಗೆ ಸಂಬಂಧಿಸಿದಂತೆ ಗೂಗಲ್ ನ ವಿವಿಧ ಚಟುವಟಿಕೆಗಳನ್ನು ಪರಿಶೀಲಿಸಿದೆ.
ಗೂಗಲ್ ಕ್ರೋಮ್,ಗೂಗಲ್ ಸರ್ಚ್, ಯುಟ್ಯೂಬ್ ಅನ್ನು ಪ್ಲೇ ಸ್ಟೋರ್ ನೊಂದಿಗೆ ಟೈ ಅಪ್ ಮಾಡುವ ಮೂಲಕ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿದೆ. ಪ್ಲೇಸ್ಟೋರ್‌ನಲ್ಲಿ ಪಾವತಿ ಮಾಡಿದ ಆಪ್‌ಗಳಿಗಾಗಿ ಗೂಗಲ್ ತನ್ನದೇ ಆದ ಬಿಲ್ಲಿಂಗ್ ವ್ಯವಸ್ಥೆಯನ್ನು ಅನುಸರಿಸುತ್ತಿರುವುದು ಕಾನೂನು ಸಮ್ಮತವಲ್ಲ. ಈ ಅನ್ಯಾಯದ ವ್ಯಾಪಾರ ಅಭ್ಯಾಸವನ್ನು ನಿಲ್ಲಿಸಲು ಮತ್ತು ತ್ಯಜಿಸುವಂತೆ ಭಾರತವು ಕಂಪನಿಗೆ ನಿರ್ದೇಶನ ನೀಡಿದೆ. ಮತ್ತು ಬರೋಬ್ಬರಿ 936.44 ಕೋಟಿ ರೂ. ದಂಡ ವಿಧಿಸಿದೆ.
ಆದರೆ ಗೂಗಲ್, ದಂಡ ವಿಧಿಸಿರುವ ಕ್ರಮಕ್ಕೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದೆ. ಮತ್ತು ಈ ಕ್ರಮದಿಂದ ಭಾರತದ ಉದ್ದಿಮೆಗಾರರಿಗೆ ಹಿನ್ನಡೆಯಾಗಲಿದೆ ಮತ್ತು ಗ್ರಾಹಕರಿಗೆ ಗಂಭೀರವಾದ ಸುರಕ್ಷತಾ ಅಪಾಯಗಳು ಎದುರಾಗಲಿವೆ. ಭಾರತೀಯರಿಗೆ ಮೊಬೈಲ್ ಸಾಧನಗಳ ಮೇಲಿನ ವೆಚ್ಚವು ಹೆಚ್ಚಾಗಲಿದೆ ಎಂದು ಎಚ್ಚರಿಕೆಯನ್ನು ಇ–ಮೇಲ್ ಮೂಲಕ ಹೇಳಿದ್ದಾರೆ.