ದೀಪಗಳ ಹಬ್ಬ ದೀಪಾವಳಿ | ಆದರೆ ಕೇರಳದಲ್ಲಿ ದೀಪಾವಳಿಯನ್ನು ಸಂಭ್ರಮ, ಸಂತಸದಿಂದ ಆಚರಣೆ ಮಾಡಲ್ಲ; ಯಾಕೆ?

ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ.

ಕೆಲ ಕಡೆ ಆಶ್ವಯುಜ ಮಾಸದ ಕೊನೆಯ ಎರಡು ದಿನಗಳು ಹಾಗೂ ಕಾರ್ತಿಕ ಮಾಸದ ಮೊದಲನೆಯ ದಿನ ಈ ಹಬ್ಬವನ್ನು ಆಚರಿಸಿದರೆ ಇನ್ನು ಕೆಲ ಕಡೆ ಮುಂದಿನ ಎರಡು ದಿನಗಳನ್ನು ಸೇರಿಸಿ 5 ದಿನ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ದೀಪಾವಳಿಗೆ ಅದರದ್ದೇ ಆದ ಮಹತ್ವವಿದೆ ಹಾಗೂ ಅವರದ್ದೆ ಆದ ಕೆಲವು ಸಂಪ್ರದಾಯಗಳು ಇರುತ್ತದೆ. ಕೆಲವರು ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ತಮ್ಮ ಹಬ್ಬವನ್ನು ಆಚರಿಸುತ್ತಾರೆ.

ಕೇರಳವು ವಿವಿಧ ಸಮುದಾಯಗಳಿಂದ ಕೂಡಿದ್ದು ಬಹುಮುಖಿ ಸಂಸ್ಕೃತಿಯನ್ನು ಹೊಂದಿದೆ. ಹಾಗಾಗಿ ಇಲ್ಲಿ ಹಬ್ಬಗಳ ಮಹತ್ವ, ಆಚರಣೆ ಕೂಡ ಉತ್ತರ ಭಾರತದ ವೈದಿಕ ಸಂಸ್ಕೃತಿಗಿಂತ ವಿಭಿನ್ನವಾಗಿದೆ.

ಎಲ್ಲೆಡೆ ಈಗಾಗಲೇ ಜೋರು ತಯಾರಿ ಶುರುವಾಗಿದ್ದರೂ ಕೂಡ ಕೇರಳದಲ್ಲಿ ಮಾತ್ರ ದೀಪಾವಳಿಯನ್ನು ಅಷ್ಟೊಂದು ವಿಜೃಂಭಣೆಯಿಂದ ಆಚರಿಸುವ ಕ್ರಮ ಇಲ್ಲ.

ಕೇರಳ ದಕ್ಷಿಣ ಭಾರತದ ಭಾಗವೇ ಆಗಿದ್ದರೂ ಕೂಡ ಅಕ್ಕಪಕ್ಕದ ರಾಜ್ಯಗಳು ಆಚರಿಸಿದಷ್ಟು ಜೋರಾದ ಸಂಭ್ರಮ ಅಲ್ಲಿರುವುದಿಲ್ಲ. ಎಲ್ಲರ ಪ್ರಕಾರ ದೀಪಾವಳಿ ಹಬ್ಬ ರಾಮಾಯಣದ ಕಥೆಗೆ ಹೊಂದಿಕೊಂಡಿದೆ.

ದಕ್ಷಿಣ ಭಾರತದಲ್ಲಿ ದೀಪಾವಳಿಯ ಮೂರನೇ ದಿನದ ಹಬ್ಬವೇ ಬಲಿ ಪಾಡ್ಯಮಿ. ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ಮಾಡುತ್ತಾರೆ, ಹಾಗಾಗಿ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯುತ್ತಾರೆ.

ಹಿರಣ್ಯ ಕಶ್ಯಪುವಿನ ವಂಶಸ್ಥನಾದ ಇವನು ದಾನವನಾದರೂ ಈ ದಿನ ಬಲೀಂದ್ರನನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ತುಳುನಾಡಾದ ಕರಾವಳಿಯಲ್ಲಿ ಬಲೀಂದ್ರನ ಗೊಂಬೆಯನ್ನು ರಚಿಸಿ ತುಳಸಿ ಕಟ್ಟೆಯ ಸಮೀಪ ನಿಲ್ಲಿಸಿ ಕೊನೆಯ ದಿನ ಬಲೀಂದ್ರ, ಬಲೀಂದ್ರ, ಬಲೀಂದ್ರ ಕೂ… ಕೂ.. ಎಂದು ಮೂರು ಬಾರಿ ಕರೆದು ಪೂಜೆ ಮಾಡಿ ಪಾತಾಳ ಲೋಕಕ್ಕೆ ಕಳುಹಿಸಿಕೊಡುವ ಪದ್ಧತಿಯಿದೆ.

ಒಂದೊಂದು ಕಡೆ ಒಂದೊಂದು ರೀತಿಯ ಆಚರಣೆ, ಸಂಭ್ರಮದಲ್ಲಿ ತೊಡಗಿದರು ಕೂಡ ವಿವಿಧ ಭಾಷೆ, ಆಚರಣೆ, ಪ್ರತೀತಿಗಳಿಂದ ಕೂಡಿದ ವೈವಿಧ್ಯಮಯ ನೆಲವಾಗಿರುವ ಕೇರಳದಲ್ಲಿ ಮಾತ್ರ ದೀಪಾವಳಿ ಹಬ್ಬ ಹೆಚ್ಚಾಗಿ ಆಚರಣೆ ಮಾಡುವುದಿಲ್ಲ. ಇದಕ್ಕೆ ಇದರದೇ ಆದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿದೆ.

ಕೇರಳ ದ್ರಾವಿಡ ಸಂಸ್ಕೃತಿಯನ್ನು ಹೊಂದಿರುವುದೇ ಇದಕ್ಕೆ ಕಾರಣವಾಗಿದೆ. ದಕ್ಷಿಣ ಭಾರತವು ದ್ರಾವಿಡ ಸಂಸ್ಕೃತಿಯನ್ನು ಅನುಸರಿಸಿದರೆ, ಉತ್ತರ ಭಾರತವು ವೈದಿಕ ಸಂಸ್ಕೃತಿಯನ್ನು ಬಲವಾಗಿ ತಬ್ಬಿಕೊಂಡಿದೆ..

ಕೇರಳವನ್ನು ಅಸುರ ರಾಜನಾದ ಮಹಾಬಲಿಯು ಆಳಿದನೆಂಬ ಪ್ರತೀತಿ ಪುರಾಣಗಳಲ್ಲಿದ್ದು, ಹಾಗಾಗಿ ಮಹಾಬಲಿಯ ನೆನಪಿಗಾಗಿ ಕೇರಳದಲ್ಲಿ ಆಚರಿಸುವ ಸಂಭ್ರಮದ ಮತ್ತು ದೊಡ್ಡ ಹಬ್ಬ ಓಣಂ.

ಇನ್ನು ಉತ್ತರ ಭಾರತದಲ್ಲಿ ದೀಪಾವಳಿಯು, ರಾಮನು ರಾವಣನ ವಿರುದ್ಧ ವಿಜಯ ಸಾಧಿಸಿದುದನ್ನು ಸಾಂಕೇತಿಸುತ್ತದೆ. ಆದ್ದರಿಂದ ರಾಕ್ಷಸನ ಹತ್ಯೆಯನ್ನು ಮಲಯಾಳಿಗಳು ಸಂಭ್ರಮಿಸುವುದಿಲ್ಲ ಹಾಗೆಯೇ ರಾಮನ ಪುನರ್ ಆಗಮನವನ್ನು ಒಪ್ಪುವುದಿಲ್ಲ. ಆದರೆ ಕೃಷ್ಣನ ಆರಾಧಕರಾದ ಮಲಯಾಳಿಗಳು ಕೃಷ್ಣನು ನರಕಾಸುರನನ್ನು ವಧೆ ಮಾಡಿದ ಎನ್ನುವುದನ್ನು ಮಾತ್ರ ಒಪ್ಪುತ್ತಾರೆ.

ಕೇರಳವು ಹಿಂದೂ, ಕ್ರಿಶ್ಚಿಯನ್​, ಮುಸ್ಲಿಮ್​ ಮತ್ತು ಇತರೇ ಸಮುದಾಯದವರಿಂದ ಮಿಳಿತಗೊಂಡು ಬಹುಮುಖಿ ಸಂಸ್ಕೃತಿಯಿಂದ ರೂಪುಗೊಂಡಿದೆ.

ಆ ಕಾರಣದಿಂದಾಗಿ ಇಲ್ಲಿಯ ಆಚರಣೆಗಳಿಗೆ ಅದರದೇ ಆದ ಹಿನ್ನೆಲೆ, ಮಹತ್ವ ಮತ್ತು ವೈಶಿಷ್ಟ್ಯ ಇದೆ. ಆದ್ದರಿಂದಲೇ ಉತ್ತರ ಭಾರತದಲ್ಲಿ ಆಚರಿಸುವ ಹಬ್ಬಗಳನ್ನು ಹೆಚ್ಚಾಗಿ ಆಚರಿಸುವುದಿಲ್ಲ .

ಮಲೆನಾಡಿನಲ್ಲಿ ಬಲಿಪಾಡ್ಯಮಿಯಂದು ಬೆಳಗ್ಗೆಯೇ ಹಟ್ಟಿಯನ್ನು ತೊಳೆದು, ಸೆಗಣಿಯಿಂದ ಗಣಪತಿಯನ್ನು ಮಾಡಿ, ಹೂವಿನಿಂದ ಸಿಂಗರಿಸುತ್ತಾರೆ.

ಕಂಚಿಕಡ್ಡಿ, ಬ್ರಹ್ಮದಂಡೆ ಗಿಡಗಳನ್ನು ತಂದು ಜಡೆಯಂತೆ ಹಣೆದು ಕೊಟ್ಟಿಗೆಯಲ್ಲಿ ಸೆಗಣಿ ಬೆನಕನ ಪಕ್ಕದಲ್ಲಿ ಇಡುತ್ತಾರೆ. ಎಲ್ಲಾ ಹಸುಗಳ ಮೈತೊಳೆದು ಹೂಹಾರ ಹಾಕಿ ಪೂಜಿಸುತ್ತಾರೆ.

ಹಣ್ಣು ತುಂಬಿದ ಎಡೆಯನ್ನು ನೈವೇದ್ಯ ಮಾಡುತ್ತಾರೆ. ಬಲಿ ಪಾಡ್ಯಮಿಯಂದು ಗೋಮಯದಿಂದ ಬಲಿಚಕ್ರವರ್ತಿಯ ಬಲಿಯಕೋಟೆಯನ್ನು ಕಟ್ಟಲಾಗುತ್ತದೆ. ತುಳಸಿಕಟ್ಟೆಯ ಸಮೀಪ ಗೋಮಯದಿಂದ ಏಳುಸುತ್ತಿನ ಕೋಟೆಯನ್ನು ಕಟ್ಟಿ, ಕೋಟೆಗೆ ಗಣಪತಿಯನ್ನು ಕಾವಲಿಗೆ ನಿಲ್ಲಿಸಲಾಗುತ್ತದೆ.

ಮನೆ ಬಾಗಿಲಿನ ಹೊಸ್ತಿಲಿಗೆ ಯಾವುದೇ ದುಷ್ಟಶಕ್ತಿಗಳು ಒಳಪ್ರವೇಶಿಸದಂತೆ ಸಗಣಿಯಿಂದ ಮಾಡಿದ ಸಣ್ಣ ಗೊಂಬೆಗಳನ್ನು ಇಡಲಾಗುತ್ತದೆ. ಸಂಜೆ ಗೋಧೂಳಿ ಲಗ್ನದ ಸಮಯದಲ್ಲಿ ಮನೆಯ ಸದಸ್ಯರೆಲ್ಲಾ ಬಲೀಂದ್ರನಿಗೆ ಪೂಜೆ ಮಾಡುತ್ತಾರೆ.

Leave A Reply

Your email address will not be published.