BBK 9 : ಈ ವಾರದ ಬಿಗ್ ಬಾಸ್ ಗೆ ಸುದೀಪ್ ಗೈರು | ವೀಕೆಂಡ್ ಕಾರ್ಯಕ್ರಮ ನಡೆಸಿಕೊಡೋರು ಯಾರು?

ಬಿಗ್ ಬಾಸ್ ಒಂದು ಮನೋರಂಜನೆ ಮಾತ್ರವಲ್ಲದೆ ಕುತೂಹಲಕಾರಿ ಪ್ರೋಗ್ರಾಮ್ ಅನ್ನೋದು ಈಗಾಗಲೇ ನಮಗೆ ತಿಳಿದಿದೆ. ಅಲ್ಲದೆ ಪ್ರಸ್ತುತ ಕನ್ನಡ ಬಿಗ್ ಬಾಸ್ ಸೀಸನ್ 9 ಯಶಸ್ವಿಯಾಗಿ ನಡೆಯುತ್ತಿದ್ದು ಈಗಾಗಲೇ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ನಡುವೆ ಗೆಲುವಿನ ಪೈಪೋಟಿ ಸಹ ಜೋರಾಗಿದೆ. ತಾನು ಹೆಚ್ಚು ನಾನು ಬೆಸ್ಟು, ನೀನು ವರ್ಸ್ಟ್ ಅನ್ನೋ ಕಿತ್ತಾಟ ಬೇರೆ ಆರಂಭ ಆಗಿದೆ.

ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ನಟಿ ಮಯೂರಿ, ದೀಪಿಕಾ ದಾಸ್, ನವಾಜ್, ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ, ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.

ಬಿಗ್ ಬಾಸ್ ಸೀಸನ್ 9ರ ಮೊದಲ ವಾರ ಐಶ್ವರ್ಯಾ ಮನೆಯಿಂದ ಹೊರಹೋಗಿದ್ದರು. 2ನೇ ವಾರ ನವಾಜ್ ಎಲಿಮಿನೇಟ್ ಆಗಿದ್ದಾರೆ. 3ನೇ ವಾರ ದರ್ಶ ಚಂದ್ರಪ್ಪ ಮನೆಯಿಂದ ಹೊರ ಹೋಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 15 ಮಂದಿ ಇದ್ದಾರೆ. ಮೂರು ವಾರಗಳಲ್ಲಿ ಮೂರು ಮಂದಿ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರಹೋಗಿದ್ದಾರೆ.

ಈಗ ಉಳಿದಿರುವ ಪ್ರಶ್ನೆ ನಾಲ್ಕನೇ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಮತ್ತು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಹೇಗಿರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಆದರೆ ಸುದೀಪ್ ಬಿಗ್ ಬಾಸ್ ವೀಕೆಂಡ್ ಎಪಿಸೋಡ್‌ಗೆ ಗೈರಾಗುವುದು ಬಹಳ ವಿರಳ. ಯಾವುದೇ ಶೂಟಿಂಗ್ ಇದ್ದರೂ ಸಹ ಮ್ಯಾನೇಜ್ ಮಾಡಿಕೊಂಡು ಬಿಗ್ ಬಾಸ್ ನಡೆಸಿಕೊಡುತ್ತಾರೆ. ಈಗಾಗಲೇ 9ನೇ ಸೀಸನ್ ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. ಮೊದಲ ಸೀಸನ್ ಒಟಿಟಿ ಬಿಗ್ ಬಾಸ್ ಸಹ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಇದುವರೆಗೆ ಅನಿವಾರ್ಯ ಆಗಿ ಗೈರು ಆಗಿದ್ದು ಅಂದರೆ ಕೋವಿಡ್ ಸಮಯದಲ್ಲಿ ಮಾತ್ರ. ಕೊರೊನಾ ಸಮಯದಲ್ಲಿ ಕಿಚ್ಚನಿಗೂ ಅನಾರೋಗ್ಯ ಕಾಡಿತ್ತು. ಹಾಗಾಗಿ ಕೆಲವು ವಾರ ಬಿಗ್ ಬಾಸ್‌ಗೆ ಗೈರಾಗಿದ್ದರು. ಅದು ಬಿಟ್ಟರೆ ಯಾವತ್ತು ಬಿಗ್ ಬಾಸ್ ಶೋಗೆ ಸುದೀಪ್ ಗೈರಾಗಿಲ್ಲ.

ಆದರೆ ಈ ವಾರ ಕಿಚ್ಚ ಸುದೀಪ್ ವಾರದ ಕತೆ ನಡೆಸಿಕೊಡಲು ಬರಲ್ಲ ಎನ್ನುವ ಸುದ್ದಿ ಕೇಳಿಬರುತ್ತಿದೆ. ಹೌದು ಈ ವಾರ ಬಾಗ್ ಬಾಸ್ ವೀಕೆಂಡ್‌ಗೆ ಸುದೀಪ್ ಬರಲ್ಲ ಅನ್ನೋ ಸುದ್ದಿ ಅಭಿಮಾನಿಗಳಿಗೆ ಬೇಸರ ತಂದಿದೆ.

ಪ್ರಸ್ತುತ ಸುದೀಪ್ ವಿದೇಶದಲ್ಲಿದ್ದಾರೆ. ಅಕ್ಟೋಬರ್ 18ರಂದು ಸುದೀಪ್ ಮತ್ತು ಪ್ರಿಯಾ ಸುದೀಪ್ ಅವರ ವಿವಾಹ ವಾರ್ಷಿಕೋತ್ಸವ ಇದ್ದ ಕಾರಣವಾಗಿ ಈ ಜೋಡಿ ವಿದೇಶಕ್ಕೆ ಹಾರಿದೆ. ಅಲ್ಲಿಯೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.ವಿದೇಶದಿಂದ ವಾಪಾಸ್ ಆಗುತ್ತಿದ್ದಂತೆ ಕಿಚ್ಚ ಗಂಧದ ಗುಡಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಅನ್ನೋ ಮಾಹಿತಿ ದೊರಕಿದೆ.

ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾದ ಗಂಧದ ಗುಡಿ ಪ್ರೀ ರಿಲೀಸ್ ಕಾರ್ಯಕ್ರಮ ಅಕ್ಟೋಬರ್ 21 ರಂದು ಶುಕ್ರವಾರ ಅದ್ದೂರಿಯಾಗಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯುತ್ತಿದೆ. ಈ ಕಾರಣವಾಗಿ ದಕ್ಷಿಣ ಭಾರತದ ಅನೇಕ ಸ್ಟಾರ್ ಕಲಾವಿದರು ಭಾಗಿಯಾಗುತ್ತಿದ್ದಾರೆ. ಮತ್ತು ಪುನೀತ ಪರ್ವ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಪ್ರಮುಖವಾಗಿ ಕಿಚ್ಚ ಕೂಡ ಹಾಜರಾಗುತ್ತಿದ್ದಾರೆ. ಹಾಗಾಗಿ ಬಿಗ್ ಬಾಸ್ ಶೋ ನಡೆಸಿಕೊಡಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ ಎಂಬ ಸುದ್ದಿ ಇದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ.

ಈಗ ಅಭಿಮಾನಿಗಳ ಪ್ರಕಾರ ವಾರದ ಕತೆ ನಡೆಸಿಕೊಡಲು ಸುದೀಪ್ ಬದಲಿಗೆ ಬೇರೆ ಯಾರಾದರೂ ಬಿಗ್ ಬಾಸ್ ನಡೆಸಿಕೊಡುತ್ತಾರಾ ಎಂಬ ಪ್ರಶ್ನೆ ಕಾಡಿದೆ.

Leave A Reply

Your email address will not be published.