ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡೋರಿಗೆ ಇಲ್ಲಿದೆ RBI ನ ಹೊಸ ಗೈಡ್ ಲೈನ್ಸ್!!!

ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಬಹುತೇಕ ಕೆಲಸಗಳು ಡಿಜಿಟಲ್ ಮುಖಾಂತರವಾಗಿಯೇ ನಡೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ಬ್ಯಾಂಕಿಂಗ್ ಕೆಲಸಗಳು ಮನೆಯಲ್ಲೆ ಕುಳಿತು ಸರಾಗವಾಗಿ ಹಣ ವರ್ಗಾವಣೆಯ ಜೊತೆಗೆ ಪಾವತಿ ಮಾಡುವ ಸೌಕರ್ಯವನ್ನು ಎಲ್ಲ ಬ್ಯಾಂಕ್ಗಳು ಒದಗಿಸಿ, ಪ್ರತಿ ಕೆಲಸಕ್ಕೂ ಬ್ಯಾಂಕಿನ ಶಾಖೆಗೆ ಓಡಾಡುವ ತಾಪತ್ರಯವನ್ನು ಕೂಡ ತಪ್ಪಿಸಿದೆ.

ಕ್ರೆಡಿಟ್ ಕಾರ್ಡ್ ನಮ್ಮ ಜೀವನದ ಅನಿವಾರ್ಯ ಭಾಗವಾಗಿದ್ದು, ಅದರ ಬಳಕೆಯ ಸುಲಭತೆ ಮತ್ತು ಅನುಕೂಲಕರ ಮರುಪಾವತಿ ಆಯ್ಕೆಗಳ ಜೊತೆಗೆ ಬಳಕೆದಾರರಿಗೆ ಉತ್ತಮ ಕೊಡುಗೆಯನ್ನು ನೀಡುತ್ತವೆ.

ಇಂದು ಕ್ರೆಡಿಟ್ ಕಾರ್ಡ್ ಪಡೆಯೋದು ತುಂಬಾ ಸರಳ ಹಾಗೂ ಸುಲಭ ವಿಧಾನವಾಗಿದ್ದು, ಆದರೆ, ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವ ಪ್ರಕ್ರಿಯೆ ಪಡೆದಷ್ಟು ಸುಲಭದ ಕೆಲಸವಲ್ಲ. ಹಾಗಾಗಿ, ಇದಕ್ಕೆ ಕೆಲವೊಂದು ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ ನ ಹೊಸ ನಿಯಮಗಳ ಪ್ರಕಾರ ಕ್ರೆಡಿಟ್ ಕಾರ್ಡ್ ನೀಡಿರುವ ಸಂಸ್ಥೆಗಳು ಕ್ಲೋಸ್ ಮಾಡುವಂತೆ ಗ್ರಾಹಕರು ಮಾಡಿರುವ ಮನವಿಯನ್ನು ಪುರಸ್ಕರಿಸಲು ಬದ್ಧವಾಗಿರಬೇಕು.

ಕ್ರೆಡಿಟ್ ಕಾರ್ಡ್ ಏಜೆಂಟ್‌ಗಳು ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡದಂತೆ ಗ್ರಾಹಕರ ಮನವೊಲಿಸಲು ಕೈಲಾದಷ್ಟು ಪ್ರಯತ್ನಪಡುತ್ತಾರೆ. ಕ್ರೆಡಿಟ್ ಲಿಮಿಟ್ ಹೆಚ್ಚಳ, ವಾರ್ಷಿಕ ಕಾರ್ಡ್ ಶುಲ್ಕದಲ್ಲಿ ವಿನಾಯ್ತಿ ಸೇರಿದಂತೆ ಅನೇಕ ಕೊಡುಗೆಗಳ ನೆಪ ಹೇಳಿ ಗ್ರಾಹಕರು ಕ್ರೆಡಿಟ್ ಕಾರ್ಡ್ ಅನ್ನು ತಮ್ಮ ಬಳಿಯೇ ಇರಿಸಿಕೊಳ್ಳಲು ನಾನಾ ರೀತಿಯ ಶತಾಯ ಗತಾಯ ಪ್ರಯತ್ನ ನಡೆಸುತ್ತಾರೆ.

ಇವೆಲ್ಲದರ ಜೊತೆಗೆ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವ ಮುನ್ನ ಗ್ರಾಹಕರಿಗೆ 2-3 ಬಾರಿ ಕರೆ ಮಾಡಿ ಅವರ ನಿರ್ಧಾರದ ಬಗ್ಗೆ ಖಚಿತಪಡಿಸಿಕೊಳ್ಳುತ್ತಾರೆ. ಹೀಗಾಗಿ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡೋದು ಪಡೆದಷ್ಟು ಸುಲಭದ ಕೆಲಸವಲ್ಲ.

ಯಾವ ಸಂಸ್ಥೆ ಕೂಡ ತನ್ನ ಗ್ರಾಹಕರನ್ನು ಕಳೆದುಕೊಳ್ಳಲು ಸಿದ್ಧವಿರೋದಿಲ್ಲ. ಹೀಗಾಗಿಯೇ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವಂತೆ ಮನವಿ ಮಾಡಿದ ತಕ್ಷಣ ಬ್ಯಾಂಕ್ ಅಥವಾ ಇತರ ಸಂಸ್ಥೆಗಳು ಒಮ್ಮೆಲೆ ಒಪ್ಪಿಗೆ ನೀಡುವುದಿಲ್ಲ.

ಆರ್ ಬಿ ಐ ಮಾಸ್ಟರ್ ಡೈರೆಕ್ಷನ್ -ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್-ನೀಡಿಕೆ ಹಾಗೂ ನಡವಳಿಕೆ ನಿರ್ದೇಶನಗಳು, 2022′ ಕ್ರೆಡಿಟ್ ಕಾರ್ಡ್ ನೀಡಿರುವವರು ಅದರ ರದ್ದತಿ ಕೋರಿ ಬರುವ ಎಲ್ಲ ಮನವಿಗಳನ್ನು ಪರಿಗಣಿಸಬೇಕು ಎಂದು ಸೂಚಿಸಿದೆ. ಗ್ರಾಹಕರು ಬಾಕಿ ಉಳಿದಿರುವ ಸಾಲವನ್ನು ತೀರಿಸಿದ ಏಳು ದಿನಗಳೊಳಗೆ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಬೇಕು ಎಂದು ಆರ್ ಬಿಐ (RBI) ನಿರ್ದೇಶನ ನೀಡಿದ್ದು, ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಿದ ತಕ್ಷಣ ಕಾರ್ಡ್ ದಾರರಿಗೆ ಇ-ಮೇಲ್, ಎಸ್ ಎಂಎಸ್ ಇತ್ಯಾದಿ ಮೂಲಕ ಮಾಹಿತಿ ರವಾನೆಯಾಗುತ್ತದೆ.

ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವಂತೆ ಮನವಿಯನ್ನು ಅನೇಕ ಮಾರ್ಗಗಳ ಮೂಲಕ ನೀಡಬಹುದಾಗಿದ್ದು, ಸಹಾಯವಾಣಿ, ಅದಕ್ಕಾಗಿಯೇ ಮೀಸಲಿಟ್ಟಿರುವ ಇ-ಮೇಲ್ ವಿಳಾಸ, ಐವಿಆರ್, ವೆಬ್ಸೈಟ್ ನಲ್ಲಿ ಅದಕ್ಕೆಂದೇ ಒಂದು ಲಿಂಕ್ ಮೀಸಲಿಡಲಾಗಿದೆ.

ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಅಪ್ಲಿಕೇಷನ್ ಅಥವಾ ಇತರ ಯಾವುದೇ ಲಭ್ಯ ಮಾಧ್ಯಮಗಳ ಮೂಲಕ ಗ್ರಾಹಕರು ಮಾಡಬಹುದಾಗಿದೆ’ ಎಂದು ಆರ್ ಬಿಐ ನಿರ್ದೇಶನದಲ್ಲಿ ತಿಳಿಸಲಾಗಿದೆ.

ಇದರ ಜೊತೆಗೆ ಮುಚ್ಚಿರುವ ಲಕೋಟೆಗಳಲ್ಲಿ ಪೋಸ್ಟ್ ಮುಖಾಂತರ ಮನವಿಗಳನ್ನು ಕಳುಹಿಸುವಂತೆ ಬಳಕೆದಾರರಿಗೆ ಕ್ರೆಡಿಟ್ ಕಾರ್ಡ್ ಕಂಪನಿಗಳು ಒತ್ತಡ ಹೇರುವಂತಿಲ್ಲ ಎಂದು ಆರ್ ಬಿಐ ಹೇಳಿದ್ದು, ಒಂದು ವೇಳೆ ಗ್ರಾಹಕರು ಮನವಿ ಸಲ್ಲಿಕೆ ಮಾಡಿದ ಕಾರ್ಯನಿರತ ಏಳು ದಿನಗಳೊಳಗೆ ಕಂಪನಿ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡದೆ ಇದ್ದಲ್ಲಿ ಆಗ ದಿನಕ್ಕೆ 500 ರೂ. ದಂಡ ವಿಧಿಸಲಾಗುತ್ತದೆ.

ಕ್ರೆಡಿಟ್ ಕಾರ್ಡ್ ಅನ್ನು ಗ್ರಾಹಕ ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ಬಳಸದೆ ಇದ್ದರೆ, ಆತನಿಗೆ ಈ ಬಗ್ಗೆ ಮಾಹಿತಿ ನೀಡಿ, ಕಂಪನಿ ಕ್ರೆಡಿಟ್ ಕಾರ್ಡ್ ರದ್ದತಿ ಪ್ರಕ್ರಿಯೆ ಪ್ರಾರಂಭಿಸಬಹುದಾಗಿದೆ. ಕ್ರೆಡಿಟ್ ಕಾರ್ಡ್ ದಾರರು 30 ದಿನಗಳೊಳಗೆ ಪ್ರತಿಕ್ರಿಯೆ ನೀಡದೆ ಇದ್ದರೆ, ಆಗ ಸಂಸ್ಥೆ ಆ ಗ್ರಾಹಕ ಎಲ್ಲ ಸಾಲಗಳನ್ನು ತೀರಿಸಿದ್ದಲ್ಲಿ ಆ ಖಾತೆಯನ್ನು ರದ್ದು ಮಾಡಬಹುದಾಗಿದೆ.

ಕಾರ್ಡ್ ಕ್ಲೋಸ್ ಮಾಡಿದ 30 ದಿನಗಳೊಳಗೆ ಕಾರ್ಡ್ ವಿತರಣೆ ಮಾಡಿದ ಸಂಸ್ಥೆ ಕ್ರೆಡಿಟ್ ಮಾಹಿತಿ ಕಂಪನಿಗೆ ಈ ಬಗ್ಗೆ ತಿಳಿಸಬೇಕಾಗುತ್ತದೆ. ಇನ್ನು ಕ್ರೆಡಿಟ್ ಕಾರ್ಡ್ ಖಾತೆ ಕ್ಲೋಸ್ ಮಾಡಿದ ಬಳಿಕ ಉಳಿದ ಬ್ಯಾಲೆನ್ಸ್ ಅನ್ನು ಕಾರ್ಡ್ ಹೊಂದಿದ್ದ ವ್ಯಕ್ತಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು.

ಕ್ರೆಡಿಟ್ ಕಾರ್ಡ್ ಬಳಕೆದಾರರು ಕ್ರೆಡಿಟ್‌ ಕಾರ್ಡ್‌ ಬಿಲ್‌ಗಳನ್ನು ನಿಗದಿತ ದಿನಾಂಕಕ್ಕೆ ಮೊದಲೇ ಪಾವತಿಸಬೇಕು. ಇಲ್ಲದಿದ್ದರೆ ವಿಳಂಬ ಶುಲ್ಕ ಭರಿಸಬೇಕಾಗುತ್ತದೆ. ಬಿಲ್‌ ಆಧರಿಸಿ ವಿಳಂಬ ಪಾವತಿ ಶುಲ್ಕ ವ್ಯತ್ಯಾಸವಾಗುತ್ತದೆ.

ಕ್ರೆಡಿಟ್‌ ಕಾರ್ಡ್‌ಗಳನ್ನು ಆನ್‌ಲೈನ್‌ ಮತ್ತು ಪಿಒಎಸ್‌ಗಳಲ್ಲಿ ಬಳಸುವ ಸಂದರ್ಭ ಎಚ್ಚರಿಕೆ ವಹಿಸಬೇಕು.ಅಲ್ಲದೆ, ಅಪರಿಚಿತರಿಗೆ ಕ್ರೆಡಿಟ್‌ ಕಾರ್ಡ್‌ ವಿವರಗಳನ್ನು ನೀಡಬಾರದು. ಬ್ಯಾಂಕ್‌ ಪ್ರತಿನಿಧಿಗಳ ಸೋಗಿನಲ್ಲಿ ಕ್ರೆಡಿಟ್‌ ಕಾರ್ಡ್‌ ಕುರಿತ ಗೌಪ್ಯ ವಿವರಗಳನ್ನು ಕೇಳಿದರೆ ಕೊಡಬಾರದು.

Leave A Reply

Your email address will not be published.