ಏನಿದು ಜಾನುವಾರು ‘ಚರ್ಮ ಗಂಟು’ ರೋಗ? ಲಕ್ಷಣಗಳೇನು? | ಇದರಿಂದ ಮುಕ್ತಿ ಪಡೆಯಲು ಅವಶ್ಯವಾದ ಮನೆಮದ್ದು ಇಲ್ಲಿದೆ

ಇಡೀ ದೇಶಾದ್ಯಂತ ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಚರ್ಮ ಗಂಟು ರೋಗದ ಲಕ್ಷಣಗಳು ರಾಜ್ಯದ ಜಾನುವಾರುಗಳಲ್ಲೂ ಕಂಡು ಬಂದಿದ್ದು ರೈತರಲ್ಲಿ ಆತಂಕ ಸೃಷ್ಟಿಸಿದೆ. ಮಳೆಯಿಂದ ಎಲ್ಲೆಡೆ ಹುಲ್ಲುಗಳು ಆವರಿಸಿದ್ದು, ನೊಣ ಮತ್ತು ಸೊಳ್ಳೆಗಳು ಹೆಚ್ಚಾಗುತ್ತಿವೆ. ಇದೇ ಚರ್ಮ ಗಂಟು ರೋಗ ಬರಲು ಪ್ರಮುಖ ಕಾರಣವಾಗಿದೆ.

ಜಾನುವಾರುಗಳ ಚರ್ಮದಲ್ಲಿ ಅಲ್ಲಲ್ಲಿ ಗಂಟುಗಳಂತೆ ಅಥವಾ ಗುಳ್ಳೆಗಳಂತೆ ಉಂಟಾಗುತ್ತದೆ. ಇದನ್ನು Lumpy skin disease (LSD) ಎಂದು ಕರೆಯುತ್ತಾರೆ. ಈ ರೋಗಕ್ಕೆ ಕ್ಯಾಪ್ರಿಪಾಕ್ಸ್ ಹೆಸರಿನ ಒಂದು ವೈರಸ್ ಕಾರಣವಾಗಿದೆ. ಹಿಂದೆ ಇದು ಅಲ್ಲಲ್ಲಿ ಇತ್ತಾದರೂ ಈಗ ಬಹುತೇಕ ಹೆಚ್ಚಿನ ಕಡೆ ಕಾಣಿಸುತ್ತಿದೆ. ಇದಕ್ಕೆ ಲಸಿಕೆಯೇ ಪರಿಹಾರ ಎಂದು ಕಂಡುಕೊಳ್ಳಲಾಗಿದ್ದು, ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ (ICAR) ಸಹಯೋಗದೊಂದಿಗೆ ಸಂಶೋಧಕರು ಈ ರೋಗಕ್ಕೆ ಲಸಿಕೆಯನ್ನು ಕಂಡು ಹುಡುಕಿದ್ದಾರೆ.

ಆರಂಭದಲ್ಲಿ ಗೋವಿನ ಮೈಯಲ್ಲಿ ಒಂದರೆಡು ಕಡೆ ಗಂಟು ರೂಪದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಕೆಲವೇ ದಿನಗಳಲ್ಲಿ ಮೈಯೆಲ್ಲ ಆವರಿಸಿಕೊಳ್ಳುತ್ತದೆ. ಬಳಿಕ ಗಂಟುಗಳು ಒಡೆದು ಕೀವು ಸೋರುತ್ತದೆ. ದಿನೆ ದಿನೆ ಹಸುಗಳು ತೂಕ ಕಳೆದುಕೊಂಡು ಬಡವಾಗಿ ಬಿಡುತ್ತವೆ. ಹಾಲು ಕೊಡುವ ಹಸುಗಳಿದ್ದರಂತೂ ಹಾಲಿನ ಉತ್ಪಾದನೆ ಭಾರಿ ಕಡಿಮೆಯಾಗಲಿದೆ. ಇದು ರೈತರ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇದು ಗಾಳಿಯ ಮೂಲಕ, ಸಂಪರ್ಕದ ಮೂಲಕ, ಕಲುಶಿತ ನೀರು, ಆಹಾರ, ಜಾನುವಾರು ಸಾಗಾಟ, ಕೃತಕ ಗರ್ಭದಾರಣೆ ಅಥವಾ ಇನ್ನಿತರ ಅಸ್ವಾಸ್ಥ್ಯಗಳಿಗೆ ಕೊಡಮಾಡಲ್ಪಡುವ ಇಂಜೆಕ್ಷನ್ ಸಿರಿಂಜ್ ( ಮರುಬಳಕೆ ಮಾಡಿದಾಗ) ಇದು ಪ್ರಸಾರವಾಗುತ್ತದೆ. ಇದು ಆಮದು ಆದ ರೋಗವಾಗಿದ್ದು, ಮೂಲತಃ ಇದು ಆಫ್ರಿಕಾ ದೇಶದ್ದು.

ಜಾನುವಾರುಗಳಿಗೆ ಬರುವ ಚರ್ಮ ರೋಗಗಳು ತೀವ್ರವಾದರೆ ಶರೀರವನ್ನು ಸೊರಗುವಂತೆ ಮಾಡುತ್ತದೆ. ಚರ್ಮ ರೋಗ ಏನೇ ಬಂದರೂ ಹಸು ಸ್ವಲ್ಪ ಬಡಕಲಾಗುತ್ತಾ ಬರುತ್ತದೆ. ಸಾಮಾನ್ಯವಾಗಿ ಪರಾವಲಂಬಿಯಾಗಿ ಬದುಕುವ ಶಿಲೀಂದ್ರಗಳು, ಬ್ಯಾಕ್ಟಿರಿಯಾ, ನಂಜಾಣುಗಳು ಕೆಲವೊಮ್ಮೆ ದೇಹಕ್ಕೆ ತೊಂದರೆ ಮಾಡುತ್ತದೆ. ಚರ್ಮ ಗಂಟು ರೋಗ ಎಂಬುದು ಮಾರಣಾಂತಿಕ ಖಾಯಿಲೆ ಅಲ್ಲದಿದ್ದರೂ ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಅದಕ್ಕೆ ಚಿನ್ನೆಯಾಧಾರಿತ ಔಷದೋಪಚಾರ ಮಾಡಿದರೆ ಬೇಗನೆ ವಾಸಿಯಾಗುತ್ತದೆ. ನಿರ್ಲಕ್ಷ್ಯ ಮಾಡಿದರೆ ಸ್ವಲ್ಪ ಜೋರಾಗುತ್ತದೆ. ಚರ್ಮಗಂಟು ರೋಗವನ್ನು ಲಂಪಿಸ್ಕಿನ್ ಎಂಬ ಸೊಳ್ಳೆಗಳು ಈ ಕಾಯಿಲೆಯನ್ನು ಹೆಚ್ಚು ಹರಡುತ್ತಿವೆ.

ಈಗಾಗಲೇ ಜಾನುವಾರು ರೋಗದಿಂದ ಬಳಲುತ್ತಿದ್ದರೆ ಸೂಕ್ತ ಚಿಕಿತ್ಸೆ ಜತೆಗೆ ಔಷಧ-ಆರೈಕೆ ಸಿಗಬೇಕು. ಆರೋಗ್ಯವಂತ ಜಾನುವಾರುಗಳಿಗೆ ಲಸಿಕೆ ನೀಡಬೇಕು. ಅತಿಯಾದ ಜ್ವರ, ಆಹಾರ ನಿರಾಕರಣೆ, ಹಾಲಿನ ಇಳುವರಿ ಕಡಿಮೆಯಾಗುವುದು, ಮೈಮೇಲೆ 2-5 ಸೆ.ಮೀ ಗಾತ್ರದ ಗಂಟುಗಳು ಕಾಣಿಸಿಕೊಳ್ಳುತ್ತವೆ. ಚರ್ಮಗಂಟು ರೋಗ ಬಂದರೆ ಯಾವ ರೀತಿಯ ಆರೈಕೆ ಸೂಕ್ತ ಎಂಬುದನ್ನು ವೈದ್ಯರು ಸೂಚಿಸಿದ್ದು, ಔಷಧಿಯ ಪಟ್ಟಿ ಇಲ್ಲಿದೆ ನೋಡಿ.

1) ಅರ್ಧ ಮಿಲಿ ಗ್ರಾಂ ಎಳ್ಳೆಣ್ಣೆ, 20 ಗ್ರಾಂ ಅರಶಿನ ಪುಡಿ, 100 ಗ್ರಾಂ ಮೆಹಂದಿ ಸೊಪ್ಪು, 100 ಗ್ರಾಂ ತುಳಸಿ ಎಲೆ, 100 ಗ್ರಾಂ ಬೇವಿನ ಸೊಪ್ಪು ಇವುಗಳ ಮಿಕ್ಸ್ ಮಾಡಿ ಕುದಿಸಿ ಆರಿದ ನಂತರ ಜಾನುವಾರುಗಳ ಮೈಮೇಲಿನ ಗಂಟುಗಳ ಮೇಲೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಹಚ್ಚಬೇಕು.
2) 100 ಗ್ರಾಂ ವೀಳ್ಯದೆಲೆ, 10 ಗ್ರಾಂ ಮೆಣಸು, 10 ಗ್ರಾಂ ಉಪ್ಪು, ಅರ್ಧ ಅಚ್ಚು ಬೆಲ್ಲವನ್ನು ರುಬ್ಬಿ ಉಂಡೆ ಮಾಡಿ 3ರಿಂದ 4 ಉಂಡೆಗಳನ್ನು ದಿನಕ್ಕೆ 2 ಬಾರಿ ತಿನ್ನಿಸಬೇಕು.

ರೋಗ ತಡೆಗೆ ಏನು ಮಾಡಬೇಕು?
*ಈ ರೋಗ ಸಮೀಪದಲ್ಲಿದ್ದರೆ ಗಾಳಿ, ನೀರಿನ ಮೂಲಕ ಹರಡಬಹುದು.
*ದೂರದ ಊರಿನಲ್ಲಿದ್ದರೆ ಮನುಷ್ಯರ ಬಟ್ಟೆ ಇತ್ಯಾದಿಗಳ ಮೂಲಕ ಪ್ರಸಾರವಾಗುವ ಸಾಧ್ಯತೆ ಇರುತ್ತದೆ.
*ಹಾಗಾಗಿ ಈ ಕುರಿತು ಜಾಗರೂಕತೆ ವಹಿಸಬೇಕು. ಒಂದು ಊರಿನಿಂದ ಮತ್ತೊಂದು ಊರಿಗೆ ಪಶುಗಳನ್ನು ಸಾಗಾಣಿಕೆ ಮಾಡಬಾರದು.
*ಕಚ್ಚುವ ನೊಣ, ಸೊಳ್ಳೆಗಳು, ಉಣ್ಣಿಗಳ ಮೂಲಕ ಹರಡುವ ಕಾರಣ ಅದರ ಹಾವಳಿಯನ್ನು ನಿಯಂತ್ರಿಸಬೇಕು.
*ಹಟ್ಟಿಯನ್ನು ಸ್ವಚ್ಚವಾಗಿಡುವುದು, ಕೊಟ್ಟಿಗೆಯ ಸಮೀಪ ಗೊಬ್ಬರ ರಾಶಿ ಹಾಕದಿರುವುದು, ಮಾಡಿ ಸೊಳ್ಳೆ ನಿಯಂತ್ರಣ ಮಾಡಬೇಕು.
*ಗೊಬ್ಬರದ ನೀರು ಸಂಗ್ರಹವಾಗುವ ಕಡೆಯಲ್ಲಿ ಕೀಟನಾಶಕ ಅಥವಾ ಕೆರೋಸಿನ್ ಹಾಕಿ ಮೊಟ್ಟೆ ಲಾರ್ವಾ ಬೆಳೆಯದಂತೆ ನೋಡಿಕೊಳ್ಳಬೇಕು.

Leave A Reply

Your email address will not be published.