ಮಂಗಳೂರು : ಬಸ್ ನಿಲ್ದಾಣಕ್ಕಾಗಿ ಭೂ ಸ್ವಾಧೀನ ,ಪಾವತಿಸದ ಪರಿಹಾರ-ಮ.ನ.ಪಾ.ಕಚೇರಿ ಜಫ್ತಿಗೆ ಮುಂದಾದ ಕೋರ್ಟ್

ಮಂಗಳೂರು : ಪಂಪ್‌ವೆಲ್‌ನಲ್ಲಿ ಹೊಸ ಬಸ್‌ ನಿಲ್ದಾಣ ನಿರ್ಮಾಣಕ್ಕಾಗಿ 2008ರಲ್ಲಿ ಭೂ ಸ್ವಾಧೀನ ಮಾಡಿದ್ದರೂ ಇನ್ನೂ ಪರಿಹಾರ ಪಾವತಿಸದ ಕಾರಣ ಮಂಗಳೂರಿನ ಪ್ರಧಾನ ಸತ್ರ ನ್ಯಾಯಾಲಯದ ಆದೇಶದಂತೆ ಕೋರ್ಟ್‌ ಅಧಿಕಾರಿಗಳು ಬುಧವಾರ ಮಹಾನಗರ ಪಾಲಿಕೆಯ ಭೂಸ್ವಾಧೀನ ವಿಭಾಗ ಮತ್ತು ಆಯುಕ್ತರ ಕಚೇರಿಯನ್ನು ಜಪ್ತಿ ಮಾಡಲು ಮುಂದಾದ ಘಟನೆ ನಡೆದಿದೆ.

ಆಯುಕ್ತರು ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ, ಅ. 25ರ ವರೆಗೆ ಪರಿಹಾರ ಪಾವತಿಗೆ ಗಡುವು ಕೇಳಿದ್ದು, ಜಪ್ತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಪಂಪ್‌ವೆಲ್‌ನ ಸುಮಾರು 10 ಎಕರೆ ಜಾಗವನ್ನು 2008ರಲ್ಲಿ ಅತ್ಯಾಧುನಿಕ ಬಸ್‌ ಟರ್ಮಿನಲ್‌ ನಿರ್ಮಾಣಕ್ಕೆ ಸ್ವಾಧೀನ ಪಡಿಸಲಾಗಿತ್ತು. ಇದರಲ್ಲಿ ಮೂರು ಎಕರೆ ಭೂಮಿಗೆ ಮಾತ್ರ ಪರಿಹಾರ ಪಾವತಿಸಲಾಗಿತ್ತು. ನಾಲ್ಕೈದು ಮಂದಿಗೆ ಉಳಿದ ಏಳು ಎಕರೆ ಜಾಗದ ಪರಿಹಾರ ಮೊತ್ತವನ್ನು ಪಾಲಿಕೆ ಪಾವತಿಸಲು ಬಾಕಿ ಇತ್ತು.

ಈ ಪೈಕಿ ಒಟ್ಟು 1.49 ಎಕರೆ ಜಾಗಕ್ಕೆ 3.48 ಕೋಟಿ ರೂ. ಪರಿಹಾರ ಪಾವತಿಸುವಂತೆ ಕೋರಿ ದಿ| ರಾಜೀವಿ ಪದ್ಮಪ್ಪ ಅವರ ಕುಟುಂಬಸ್ಥರು ಮಂಗಳೂರಿನ ಪ್ರಧಾನ ಸಿವಿಲ್‌ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾ ಲಯ ಬಾಕಿ ಮೊತ್ತ ಪಾವತಿಸುವಂತೆ 2019ರಲ್ಲೇ ಪಾಲಿಕೆಗೆ ಸೂಚಿಸಿತ್ತು. ಆದರೆ ಪಾಲಿಕೆಯಿಂದ ಮೊತ್ತ ಪಾವತಿಯಾಗಿರಲಿಲ್ಲ. ಕೋರ್ಟ್‌ ಆದೇಶ ಪಾವತಿಸದಿರುವ ಕುರಿತು ದೂರು ದಾರರು ಮತ್ತೆ ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಬಳಿಕ ಶಾಸಕರು, ಮೇಯರ್‌, ಭೂಸ್ವಾಧೀನ ಅಧಿಕಾರಿ, ಕಂದಾಯ ಅಧಿಕಾರಿ, ಪಾಲಿಕೆ ಆಯುಕ್ತರು ಸೇರಿ ಜಿಲ್ಲಾಡಳಿತ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಿ ಪರಿಹಾರಕ್ಕೆ ಯತ್ನಿಸಿದ್ದರು. ಆದರೂ ಪರಿಹಾರ ಮೊತ್ತ ಪಾವತಿ ಯಾಗಲೇ ಇಲ್ಲ. ಇದರಿಂದಾಗಿ ಸಂತ್ರಸ್ತರ ಕುಟುಂಬಸ್ಥರು ಕೋರ್ಟ್‌ ನಿಂದ ಪಾಲಿಕೆ ಸೊತ್ತು ಜಫ್ತಿ ಮಾಡಿ ಪರಿಹಾರ ಪಾವತಿಸಲು ಸೂಚಿಸುವಂತೆ ನಿರ್ದೇಶನ ಕೋರಿದ್ದರು. ಈ ನಡುವೆ ಜಿಲ್ಲಾ ಕೋರ್ಟ್‌ ನೀಡಿದ ಆದೇಶ ಪ್ರಶ್ನಿಸಿ ಪಾಲಿಕೆ ಹೈಕೋರ್ಟ್‌ ಮೆಟ್ಟಿಲೇರಿತ್ತು. ಸೊತ್ತು ಜಪ್ತಿಯ ತಡೆಯಾಜ್ಞೆಯನ್ನು ಹೈಕೋರ್ಟ್‌ ತೆರವುಗೊಳಿಸಿತ್ತು. ಆದರೆ ಈ ಕುರಿತ ಮೇಲ್ಮನವಿಯ ವಿಚಾರಣೆ ಇನ್ನೂ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ.

ಜಿಲ್ಲಾ ನ್ಯಾಯಾಲಯದ ಸೂಚನೆಯಂತೆ ಅಮೀನರು ಅ. 10ರಂದು ಪಾಲಿಕೆಗೆ ಆಗಮಿಸಿ ನೋಟಿಸ್‌ ನೀಡಿ, ಭೂಸ್ವಾಧೀನ ವಿಭಾಗ ಹಾಗೂ ಆಯುಕ್ತರ ಕಚೇರಿ ಜಪ್ತಿಯ ಸೂಚನೆ ನೀಡಿದ್ದರು. ಪರಿಹಾರ ಪಾವತಿಯಾಗದ ಹಿನ್ನೆಲೆಯಲ್ಲಿ ಬುಧವಾರ ಜಪ್ತಿ ಮಾಡಲು ಆಗಮಿಸಿದ್ದು. ಇದನ್ನು ತಿಳಿದ ಆಯುಕ್ತರು ನ್ಯಾಯಾ ಲಯಕ್ಕೆ ಮನವಿ ಸಲ್ಲಿಸಿ ಜಪ್ತಿಯನ್ನು ತಾತ್ಕಾಲಿಕ ಮುಂದೂಡಲು ಮನವಿ ಮಾಡಿದ್ದಾರೆ.

Leave A Reply

Your email address will not be published.