ವೈದ್ಯರ ಮಹಾ ಎಡವಟ್ಟು | 5 ವರ್ಷಗಳ ನಂತರ ಪತ್ತೆ ಆಯ್ತು ಸರ್ಜರಿ ಸಮಯ ಹೊಟ್ಟೆಯೊಳಗೆ ಬಿಟ್ಟ ಕತ್ತರಿ !

ವೈದ್ಯ ನಾರಾಯಣೋ ಹರಿಃ ಎಂದು ಸಾಮಾನ್ಯವಾಗಿ ವೈದ್ಯರನ್ನು ಗೌರವದಿಂದ ಕಾಣುತ್ತೇವೆ. ತಪ್ಪೇ ಮಾಡದವರು ಇರಲು ಸಾಧ್ಯವೇ ಇಲ್ಲ. ಆದರೆ, ಅದೇ ತಪ್ಪು ಜೀವಕ್ಕೆ ಕುತ್ತು ತರುವಂತಾದರೆ ಜೈಲಿನ ಅತಿಥಿಯಾಗುವ ಪ್ರಮೇಯ ಎದುರಾಗುವುದರಲ್ಲಿ ಸಂದೇಹವಿಲ್ಲ. ವೈದ್ಯರ ನಿರ್ಲಕ್ಷ್ಯ ಧೋರಣೆಯಿಂದ ಎಡವಟ್ಟು ನಡೆದಿದ್ದು, ಆದರೆ ಮಹಿಳೆ ಪ್ರಾಣಾಪಾಯದಿಂದ ಪಾರಾದ ಘಟನೆ ವರದಿಯಾಗಿದೆ.

ಕೋಝಿಕ್ಕೋಡ್‌ ಎಂಬಲ್ಲಿನ ಮಹಿಳೆಯೊಬ್ಬರು ಬರೋಬ್ಬರಿ 5 ವರ್ಷಗಳ ನಂತರ ತಮ್ಮ ಹೊಟ್ಟೆಯಿಂದ 11 ಸೆಂ.ಮೀ ಉದ್ದದ ಕತ್ತರಿ ತೆಗೆಸುವ ಮೂಲಕ ಜೀವ ಕಂಟಕ ದಿಂದ ಪಾರಾಗಿದ್ದಾರೆ .

ನವೆಂಬರ್ 30, 2017 ರಂದು ಹರ್ಷಿನಾ ಎಂಬ ಮಹಿಳೆ ಮೂರನೇ ಹೆರಿಗೆಗಾಗಿ ಕೋಝಿಕೋಡ್ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ, ಸಿಸೇರಿಯನ್ ಮಾಡಿಸಿಕೊಂಡಿದ್ದು, ಈ ಆಪರೇಷನ್ ಬಳಿಕ ಹಲವು ಬಾರಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು.

ಹಲವಾರು ಸಮಾಲೋಚನೆಗಳು ಮತ್ತು ತಪಾಸಣೆಗಳ ಹೊರತಾಗಿಯೂ ಮಹಿಳೆಗೆ ನೋವು ಕಡಿಮೆಯಾಗದೆ, ಕೊನೆಗೆ ನೋವನ್ನು ತಡೆಯಲು ಸಾಧ್ಯವಾಗದೆ ಇದ್ದಾಗ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ಶಸ್ತ್ರಚಿಕಿತ್ಸೆಯ ನಂತರ ಮಹಿಳೆ ತೀವ್ರ ಆಯಾಸ ಮತ್ತು ನೋವು ಅನುಭವಿಸಿದ್ದಾರೆ.

ನೋವು ಹೆಚ್ಚಾದ ನಂತರ ಆಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿ ಸಿಟಿ ಸ್ಕ್ಯಾನ್ ನಡೆಸಿದಾಗ, ಮಹಿಳೆಯ ಹೊಟ್ಟೆಯಲ್ಲಿ ಲೋಹದ ವಸ್ತುವಿದೆ ಎಂಬ ವಿಷಯ ತಿಳಿದು ಬಂದಿದೆ. ಸ್ಕ್ಯಾನಿಂಗ್‌ನಲ್ಲಿ ಮಹಿಳೆಯ ಹೊಟ್ಟೆಯೊಳಗೆ ಕತ್ತರಿ ಪತ್ತೆಯಾಗಿದೆ.

ಐದು ವರ್ಷಗಳ ಹಿಂದೆ ಮಹಿಳೆ ಸಿಸೇರಿಯನ್ ಮಾಡಿಸಿಕೊಂಡಿದ್ದು, ಕತ್ತರಿ ಇರುವ ವಿಚಾರ ಇತ್ತೀಚೆಗಷ್ಟೇ ತಿಳಿದು ಬಂದಿದೆ. ವೈದ್ಯರ ಅಜಾಗರೂಕತೆ ಮತ್ತು ನಿರ್ಲಕ್ಷ್ಯ ದಿಂದ ಸಂಭವಿಸಿದ ಘಟನೆಗೆ , ಅದೇ ಆಸ್ಪತ್ರೆಗೆ ಆಕೆಯನ್ನು ದಾಖಲಿಸಿ ಶಸ್ತ್ರಚಿಕಿತ್ಸೆಯನ್ನು ನಡೆಸಿ ಕತ್ತರಿಯನ್ನು ಹೊಟ್ಟೆಯಿಂದ ಹೊರ ತೆಗೆಯಲಾಗಿದೆ.

ಇದೀಗ ವೈದ್ಯಕೀಯ ನಿರ್ಲಕ್ಷ್ಯದಿಂದ ಮಹಿಳೆ ಅನುಭವಿಸಿದ ಸಂಕಟದ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರಿಗೆ ದೂರು ನೀಡಿದ್ದಾರೆ.

ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೇಳಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Leave A Reply

Your email address will not be published.