WhatsApp Hack : ನಿಮ್ಮ ವಾಟ್ಸ್​ಆ್ಯಪ್​​ ಬೇರೆಯವರು ವೀಕ್ಷಿಸುತ್ತಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ?

ಎಲ್ಲರ ಕೈಯಲ್ಲೂ ಹರಿದಾಡುವ ಮೊಬೈಲ್ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿ, ವಿಶ್ವದಲ್ಲಿಂದು ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಮಾಲೀಕತ್ವದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಆಗಿರುವ ವಾಟ್ಸಪ್ ಅಪ್ಲಿಕೇಶನ್ ಈ ವರ್ಷ ಹಲವು ಫೀಚರ್​ಗಳನ್ನು ಪರಿಚಯಿಸಿ ಮತ್ತಷ್ಟು ಪ್ರಸಿದ್ಧಿ ಪಡೆದುಕೊಂಡಿದೆ.

ಇದು ಅತ್ಯಂತ ಜನಪ್ರಿಯವಾಗಿದ್ದು, ಸಂದೇಶ ರವಾನೆಯಾಗಲು ಬಳಕೆಯಾಗುವ ಪ್ಲಾಟ್ ಫಾರಂ ಆಗಿದೆ.

ವಾಟ್ಸಾಪ್ ಚಾಟ್, ವಾಟ್ಸಾಪ್ ಕಾಲ್, ಅಥವಾ ವಾಟ್ಸಾಪ್ ವೀಡಿಯೊ ಕಾಲ್ ಇತ್ತೀಚಿನ ದಿನಗಳಲಿ ಭಾರೀ ಜನಪ್ರಿಯವಾಗಿದೆ. ಇದು ಇತರ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಿಗಿಂತ ಹೆಚ್ಚು ಸುರಕ್ಷಿತವಾಗಿದ್ದು ತ್ವರಿತ ಸಂದೇಶವನ್ನು ಕಳುಹಿಸಲು ನೆರವಾಗುತ್ತದೆ.

ಕೆಲವೊಮ್ಮೆ ಬಳಕೆದಾರರ ತಪ್ಪಿನಿಂದಾಗಿ ಬೇರೆಯವರು ಅವರ ವಾಟ್ಸಪ್ ಚಾಟ್‌/ ಮೀಡಿಯಾ ಫೈಲ್ಸ್‌ ಗಮನಿಸಲು ಸಾಧ್ಯವಾಗಿದ್ದು, ವಾಟ್ಸಪ್ ಅನ್ನು ಬೇರೆಯವರು ವೀಕ್ಷಿಸುತ್ತಿದ್ದಾರೆಯೇ ಎಂಬುದನ್ನು ಅರಿತುಕೊಳ್ಳಬಹುದು.

ದಿನದಿಂದ ದಿನಕ್ಕೆ ಹೊಸ ಅಪ್ಡೇಟ್ ಮಾಡುತ್ತಾ ಹೊಸ ವೈಶಿಷ್ಟ್ಯದ ಮೂಲಕ ಜನರ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ. ಮಲ್ಟಿ ಡಿವೈಸ್‌ ಸಪೋರ್ಟ್‌ ಅವಕಾಶ ನೀಡಿರುವುದರಿಂದ ಏಕಕಾಲಕ್ಕೆ ಎರಡು ಮೂರು ಡಿವೈಸ್ ಗಳಲ್ಲಿ ಖಾತೆ ಬಳಕೆ ಮಾಡಬಹುದಾಗಿದೆ. ಹಾಗಾಗಿ, ಕೆಲವು ಸಂದರ್ಭಗಳಲ್ಲಿ ಮಲ್ಟಿ ಡಿವೈಸ್ ಸಪೋರ್ಟ್‌ ಆಯ್ಕೆಯಿಂದ ವಾಟ್ಸಪ್ ಖಾತೆ ದುರುಪಯೋಗದ ಜೊತೆಗೆ ಇತರರು ಕದ್ದು ಮೆಸೇಜ್ ಓದಲು ಅವಕಾಶ ಕಲ್ಪಿಸಿದಂತೆ ಆಗುವ ಸಾಧ್ಯತೆಗಳು ಹೆಚ್ಚಿವೆ. ವಾಟ್ಸಾಪ್ ಚಾಟ್ ಅನ್ನು ಎನ್‌ಕ್ರಿಪ್ಟ್ ಮಾಡಲಾಗಿದ್ದರೂ, ಬೇರೆಯವರು ಸಾಮಾನ್ಯವಾಗಿ ಚಾಟ್ ಅನ್ನು ಓದಲು ಸಾಧ್ಯವಾಗುತ್ತದೆ.

ವಾಟ್ಸಪ್ ವೆಬ್ ಮೂಲಕ, ಯಾವುದೇ ಲ್ಯಾಪ್‌ಟಾಪ್ ಅಥವಾ PC ಯಲ್ಲಿ ನಿಮ್ಮ ವಾಟ್ಸಪ್ ಅನ್ನು ಓಪನ್ ಮಾಡಿದ್ದರೆ, ಈ ವೈಶಿಷ್ಟ್ಯದ ಮೂಲಕ, ಬೇರೆಯವರು ನಿಮ್ಮ ಚಾಟ್ ಅನ್ನು ಸುಲಭವಾಗಿ ಓದಬಹುದಾಗಿದೆ. ಅಲ್ಲದೆ, ಯಾರಿಗಾದರೂ ನೀವು ನಿಮ್ಮ ಮೊಬೈಲ್ ನೀಡಿದ್ದರೆ, ಅವರು ನಿಮ್ಮ ವಾಟ್ಸಪ್ ಅನ್ನು ವೆಬ್‌ಗೆ ಸಂಪರ್ಕಿಸಿದ್ದರೆ, ಎಲ್ಲಾ ಸಂದೇಶಗಳನ್ನು ಅವರು ಓದಲು ಸಾಧ್ಯವಾಗುತ್ತದೆ ಅಲ್ಲದೆ, ನಿಮ್ಮ ವಾಟ್ಸಪ್ ಚಟುವಟಿಕೆ ಮೇಲೆ ಕಣ್ಣಿಡುವ ಸಂಭವ ಕೂಡ ಹೆಚ್ಚಿದೆ.

ಬಳಕೆದಾರರ ವಾಟ್ಸಪ್ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ಓದುತ್ತಿದ್ದಾರೆಯೇ/ ವೀಕ್ಷಿಸುತ್ತಿದ್ದಾರೆಯೇ ಎನ್ನುವುದನ್ನು ತಿಳಿಯಲು ಯಾವುದೇ ಥರ್ಡ್‌ಪಾರ್ಟಿ ಆ್ಯಪ್ ನ ಅವಶ್ಯಕತೆ ಇಲ್ಲ, ಇದರ ಬದಲಿಗೆ ಬಳಕೆದಾರರು ಅವರ ವಾಟ್ಸಪ್ನಲ್ಲಿಯೇ ಮಾಹಿತಿ ಪಡೆಯಬಹುದಾಗಿದೆ.

ಬಳಕೆದಾರ ಪೋನಿನಲ್ಲಿ ವಾಟ್ಸಪ್ ಅಪ್ಲಿಕೇಶನ್ ಅನ್ನು ತೆರೆದು,ಅದರ ಬಲ ಭಾಗದ ಮೇಲ್ಭಾಗದಲ್ಲಿ ಕಾಣಿಸುವ ಮೂರು ಡಾಟ್‌ ಕ್ಲಿಕ್ ಮಾಡಬೇಕು. ಅಲ್ಲಿ ಕಾಣಿಸುವ ವಾಟ್ಸಪ್ ವೆಬ್ / ಲಿಂಕ್‌ ಡಿವೈಸ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಬಳಕೆದಾರ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಖಾತೆ ತೆರೆಯದಿದ್ದರೂ ಲಿಂಕ್ ಆಗಿರುವ ಬಗ್ಗೆ ಅಲ್ಲಿ ತೋರಿಸುತ್ತಿದ್ದರೆ ನಿಮ್ಮ ವಾಟ್ಸಪ್ ಅನ್ನು ಬೇರೆಯವರು ಓದುತ್ತಿದ್ದಾರೆ ಎಂಬುದು ತಿಳಿಯುತ್ತದೆ. ನಿಮಗೆ ತಿಳಿಯದೆ ಲಿಂಕ್ ಆಗಿದ್ದರೆ ಅದರ ಮೇಲೆ ಕ್ಲಿಕ್ ಮಾಡಿ ತಕ್ಷಣವೇ ಲಾಗೌಟ್ ಆಯ್ಕೆ ಒತ್ತಬೇಕು.

ಕೆಲವರಿಗೆ ಬೇರೆಯವರ ಮೆಸೇಜ್ ಇಣುಕಿ ನೋಡುವ ಕುತೂಹಲ ಇದ್ದು, ಅಂತಹವರು ಇತರರ ವಾಟ್ಸಪ್ ಮೆಸೆಜ್ ಓದಲು ಕಳ್ಳ ಮಾರ್ಗ ಹಿಡಿದು, ಬಾರ್‌ಕೋಡ್‌ ಸ್ಕ್ಯಾನ್ ಮಾಡಿ ಲಾಗಿನ್ ಆಗುವ ಅಥವಾ ಇತರೆ ಡಿವೈಸ್‌ನಲ್ಲಿ ನಕಲು ಮಾಡುವ ಸಾಧ್ಯತೆಗಳಿರುತ್ತವೆ. ಕೆಲವು ಬಳಕೆದಾರರು ತಮ್ಮ ಫೋನಿಗೆ ಯಾವುದೇ ಲಾಕ್‌ ಹಾಗೆಯೇ ವಾಟ್ಸಪ್ ತೆರೆಯಲು ಸಹ ಯಾವುದೇ ಪಾಸ್‌ವರ್ಡ್‌ ಇಡದೆ ಇದ್ದಾಗ ಇಂತಹ ಖಾತೆಗಳಿಗೆ ಸುಲಭವಾಗಿ ಇತರರು ಹ್ಯಾಕ್ ಮಾಡಬಹುದಾಗಿದೆ.

ಅವರ ವಾಟ್ಸಪ್ ಖಾತೆ ತೆರೆದು ವಾಟ್ಸಪ್​​ ವೆಬ್ / ಲಿಂಕ್‌ ಡಿವೈಸ್‌ ಬಾರ್‌ಕೋಡ್ ಸ್ಕ್ಯಾನ್ ಮೂಲಕ ಇನ್ನೊಂದು ಡಿವೈಸ್‌ನಲ್ಲಿ ನಕಲು ವಾಟ್ಸ್​ಆ್ಯಪ್​​ ತೆರೆದುಕೊಳ್ಳುವ ಅವಕಾಶ ಇರುತ್ತವೆ.

ವಾಟ್ಸ್​ಆ್ಯಪ್​​ ಹ್ಯಾಕ್ ಆಗುವುದನ್ನು ತಡೆಯಲು ಇತರೆ ಡಿವೈಸ್‌ಗಳಲ್ಲಿ ನೀವು ತೆರೆದಿರುವ ಎಲ್ಲಾ ಸೆಷನ್‌ಗಳಿಂದ ಲಾಗ್ ಔಟ್ ಮಾಡಬಹುದು. ಹೀಗೆ ಮಾಡಿದರೆ ಮೂರನೇ ವ್ಯಕ್ತಿಯು ನಿಮ್ಮ ಖಾತೆಗೆ ಪ್ರವೇಶವನ್ನು ತಕ್ಷಣ ಕಳೆದುಕೊಳ್ಳುತ್ತಾರೆ. ಈ ಸಂಗತಿಗಳು ಮತ್ತೆ ಸಂಭವಿಸುವುದನ್ನು ತಪ್ಪಿಸಲು, ಅಪ್ಲಿಕೇಶನ್ ಲಾಕ್‌ನೊಂದಿಗೆ ವಾಟ್ಸ್​ಆ್ಯಪ್​​ ಅನ್ನು ಕಾನ್ಫಿಗರ್ ಮಾಡುವುದು ಅತ್ಯಂತ ಪರಿಣಾಮಕಾರಿ ಪರಿಹಾರವಾಗಿದೆ.

ಈ ರೀತಿಯಾಗಿ, ಯಾರಾದರೂ ನಿಮ್ಮ ಫೋನ್ ಪಡೆದರೂ ಸಹ, ಅವರು ವಾಟ್ಸಪ್ ಅಪ್ಲಿಕೇಶನ್ ಅನ್ನು ಪ್ರವೇಶಿಸಲು ಸಾಧ್ಯವಿಲ್ಲ ಮತ್ತು ಅದನ್ನು ವಾಟ್ಸ್​ಆ್ಯಪ್​​ ವೆಬ್ ಮೂಲಕ ಪಿಸಿ ಅಥವಾ ಇತರ ಅಪ್ಲಿಕೇಶನ್‌ಗೆ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ವಾಟ್ಸಪ್ ಬಳಸುವಾಗ ಮುಂಜಾಗ್ರತೆ ವಹಿಸುವುದು ಒಳ್ಳೆಯದು.

Leave A Reply

Your email address will not be published.