ಸತ್ತ ಸಿರಿವಂತನನ್ನು ಮದುವೆಯಾಗಿ 20ಕೋಟಿಯ ಒಡತಿಯಾದ ಬಾರ್ ಗರ್ಲ್!

ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತಿದೆ. ಅದರಂತೆ, ಹಣ, ಆಸ್ತಿಗಾಗಿ ಎಂತಹ ಕೀಳು ಮಟ್ಟಕ್ಕೂ ಇಳಿಯಲು ಕೆಲವೊಂದಷ್ಟು ಜನ ಸಿದ್ಧರಿರುತ್ತಾರೆ. ಅದರಂತೆ ಇಲ್ಲೊಂದು ಕಡೆ ಬಾರ್ ಗರ್ಲ್ ಒಬ್ಬಳು ಆಸ್ತಿಗಾಗಿ ಸತ್ತ ಸಿರಿವಂತನನ್ನೇ ಮದುವೆಯಾಗಿದ್ದಾಳೆ.

ಹೌದು. ನಂಬಲು ಅಸಾಧ್ಯವಾದರೂ, ಇಂತವರೂ ಕೂಡ ಈ ಪ್ರಪಂಚದಲ್ಲಿ ಇದ್ದಾರೆ ಎನ್ನುವುದೇ ಸತ್ಯ. ಈ ಘಟನೆ ಮುಂಬೈನಲ್ಲಿ ನಡೆದಿದ್ದು, ಅಂಜಲಿ ಅಗರ್ವಾಲ್ (30), ಥಾಮಸ್ ರಾಮುಲ್ ಗೋಡ್ಪವಾರ್ (50) ಮತ್ತು ಮಹೇಶ್ ಕಾಟ್ಕರ್ (37) ಬಂಧಿತರು. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂಬುದರ ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ..

ಬಾರ್ ಗರ್ಲ್ ಆದ ಅಂಜಲಿ ಬಾರ್​​ನಲ್ಲಿ ಕೆಲಸ ಮಾಡುತ್ತಿದ್ದಾಕೆ. ಬಾರ್​ಗೆ ಬರುತ್ತಿದ್ದ ಶ್ರೀಮಂತ ವ್ಯಕ್ತಿಯ ಪರಿಚಯವಾಗಿತ್ತು. ಆತ ಸಿರಿವಂತ ಎಂದು ತಿಳಿಯುತ್ತಲೇ ಹೇಗಾದರೂ ಆತನ ಸ್ನೇಹ ಬೆಳೆಸಬೇಕೆಂದು ಈಕೆ ಯೋಚಿಸುತ್ತಾಳೆ. ಅದರಂತೆ ಹೇಗೋ ಬಲೆಗೆ ಬೀಳಿಸಿಕೊಳ್ಳುತ್ತಾಳೆ. ಆದ್ರೆ, ಈ ವೇಳೆ ಈಕೆಯ ಪ್ಲಾನ್ ಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಯಾಕಂದ್ರೆ, ಆ ಸಿರಿವಂತನೆ ಕಣ್ಮುಚ್ಚಿದ್ದು, ದೇವರ ಪಾದ ಸೇರಿದ್ದಾನೆ.

ಆದ್ರೆ, ಇಷ್ಟಕ್ಕೆ ಸುಮ್ಮನಾಗದ ಆಕೆ, ಆತ ಸತ್ತ ಮೇಲೂ ಆತನ ಆಸ್ತಿ ಮೇಲೆ ಕಣ್ಣು ಹಾಕಿದ್ದಾಳೆ. ಆತನ ಜತೆ ತಾನು ಮದುವೆಯಾದಂತೆ ನಕಲಿ ಮ್ಯಾರೇಜ್​ ಸರ್ಟಿಫಿಕೇಟ್​ ಸೃಷ್ಟಿಸಿದಳು. ನಂತರ, ತನ್ನ ಗಂಡ ಸತ್ತುಹೋಗಿದ್ದು, ಆತನ ಆಸ್ತಿಗೆ ತಾನೇ ಒಡತಿ ಎಂಬಂತೆ ಬಿಂಬಿಸಿ, ಆ ಮೃತ ವ್ಯಕ್ತಿಯ 19.70 ಕೋಟಿ ಮೌಲ್ಯದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾಳೆ.

ಈ ಬಾರ್​ಗರ್ಲ್​ಗೆ ಕ್ರೈಸ್ತ ಪಾದ್ರಿ ಥಾಮಸ್ ರಾಮುಲ್ ಗೋಡ್ಪವಾರ್ ಹಾಗೂ ಇನ್ನೊಬ್ಬ ಖದೀಮ ಮಹೇಶ್ ಕಾಟ್ಕರ್  ಸಾಥ್​ ನೀಡಿದ್ದರು. ಬಳಿಕ ಆಸ್ತಿ ವಿಚಾರ ತಿಳಿಯುತ್ತಿದ್ದಂತೆ ಮೃತ ವ್ಯಕ್ತಿಯ ತಾಯಿ, ನೌಪಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ತನಿಖೆ ನಡೆಸಿದಾಗ ಮೋಸದಾಟ ಬಯಲಿಗೆ ಬಂದಿದ್ದು ಮೂವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮಾಲೋಜಿ ಶಿಂಧೆ ಹೇಳಿದ್ದಾರೆ. ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಕ್ಟೋಬರ್ 7 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಒಟ್ಟಾರೆ, ಬಾರ್​ಗರ್ಲ್​ ಸತ್ತ ವ್ಯಕ್ತಿಯನ್ನೇ ಮದ್ವೆಯಾದಂತೆ ನಕಲಿ ದಾಖಲಿ ಸೃಷ್ಟಿಸಿ ಆತನ 20 ಕೋಟಿ ರೂಪಾಯಿಗಳನ್ನು ಗುಳುಂ ಮಾಡಿದ್ದಾಳೆ!…

Leave A Reply

Your email address will not be published.