ಪರೇಶ್‌ ಮೇಸ್ತ ಪ್ರಕರಣ ʼಮರು ತನಿಖೆ ಖಂಡಿತ’ – ಗೃಹ ಸಚಿವ ಆರಗ ಜ್ಞಾನೇಂದ್ರ

ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರದಲ್ಲಿ (Honnavar) 2017ರ ಡಿಸೆಂಬರ್ 6ರಂದು ನಡೆದಿದ್ದ ಗಲಭೆಯೊಂದರಲ್ಲಿ (Riot) ಮೀನುಗಾರ ಯುವಕ ಪರೇಶ್ ಮೇಸ್ತ (Paresh Mesta) ಶವವಾಗಿ ಪತ್ತೆಯಾಗಿದ್ದ. ಈ ಸಾವು ಆಕಸ್ಮಿಕ ಅಂತ ಸಿಬಿಐ (CBI) ಹೇಳಿದೆ. ಹೊನ್ನಾವರ ನ್ಯಾಯಾಲಯಕ್ಕೆ (Honnavar Court) ಬಿ ರಿಪೋರ್ಟ್ (B Report) ಸಲ್ಲಿಸಿರುವ ಸಿಬಿಐ ಅಧಿಕಾರಿಗಳು, ಪರೇಶ್ ಮೇಸ್ತ ಹತ್ಯೆ ನಡೆದಿಲ್ಲ, ಬದಲಾಗಿ ಆತನದ್ದು ಆಕಸ್ಮಿಕವಾಗಿ ಸಂಭವಿಸಿದ ಸಾವು ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಸದ್ಯ ಸಿಬಿಐ ಸಲ್ಲಿಸಿರುವ ವರದಿಯನ್ನು ಹೊನ್ನಾವರ ಕೋರ್ಟ್‌ ಪರಿಶೀಲಿಸಿದೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ನವೆಂಬರ್ 16ಕ್ಕೆ ಕೋರ್ಟ್ ತೀರ್ಪು (Judgment) ನೀಡಲಿದೆ.

ಈ ವಿಚಾರ ರಾಜಕೀಯ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಒಳಗಾಗಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಾವಿನ ವಿಷಯದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕ ನಡುವೆ ಮಾತಿನ ಚಕಮಕಿ ಭಾರೀ ಜೋರಾಗಿಯೇ ನಡೆದಿತ್ತು. ಹಾಗಾಗಿ ಈ ಸಾವಿನ ಕುರಿತು ಇದಕ್ಕೆ ರಾಜಕೀಯ ನಾಯಕರು ಮರು ತನಿಖೆಗೆ ಆಗ್ರಹಿಸಿದ್ದರು.

ಸದ್ಯ ಈ ವಿಚಾರವಾಗಿ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಪರೇಶ್‌ ಮೇಸ್ತ ಪ್ರಕರಣವನ್ನು ಮರು ತನಿಖೆ ನಿಶ್ಚಿತವಾಗಿದೆ. ಶೀಘ್ರವೇ ಪರೇಶ್‌ ಮೇಸ್ತ ಕುಟುಂಬದಿಂದ ಕಾನೂನು ಹೋರಾಟ ಮಾಡಲಿದ್ದಾರೆ. ಸಿಬಿಐ ವರದಿ ಬೆನ್ನಲ್ಲೇ ಕಾನೂನು ಹೋರಾಟಕ್ಕೆ ನಿರ್ಧಾರ ಮಾಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಪ್ರಕರಣದ ಹಿನ್ನಲೆ: 2017ರ ಡಿಸೆಂಬರ್ 6ರಂದು ಹೊನ್ನಾವರದ ಮೀನುಗಾರ ಪರಮೇಶ್ ಮೇಸ್ತ ನಾಪತ್ತೆಯಾಗಿದ್ದ. ಇದಲ್ಲದೆ, ಡಿಸೆಂಬರ್ 8 ರಂದು ಹೊನ್ನಾವರ ನಗರದ ಶನಿ ದೇವಾಸ್ಥಾನದ ಹಿಂಭಾಗದ ಹಟ್ಟಿ ಕೆರೆಯಲ್ಲಿ ಶವ ಪತ್ತೆಯಾಗಿತ್ತು. ಇದು ಪಟ್ಟಣದಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿತು. 2017 ಡಿಸೆಂಬರ್ 11 ರಂದು ಮೇಸ್ತಾ ಅವರನ್ನು ಕೊಲ್ಲಲಾಯಿತು ಎಂಬ ಆರೋಪ ಕೇಳಿಬಂತು. ಕಾರವಾರ, ಹೊನ್ನಾವರ, ಕುಮಟಾ, ಮುಂಡಗೋಡದಲ್ಲಿ ಹಿಂದೂಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದವು. ಕುಮಟಾದಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಐಜಿಪಿ ಅವರ ಕಾರಿಗೆ ಬೆಂಕಿ ಹಚ್ಚಲಾಯಿತು. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಯಿತು. ಪೊಲೀಸರಿಗೆ ಗಾಯಗಳಾಗಿದ್ದವು, ವಾಹನಗಳು ಜಖಂಗೊಂಡಿದ್ದವು.

ಪರೇಶ್ ಮೇಸ್ತಾ ಅವರ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಲಾಗುವುದು ಎಂದು ಅಂದಿನ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ವಿರೋಧ ಪಕ್ಷಗಳ ಹೋರಾಟಕ್ಕೆ ಮಣಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ. ಪೋಷಕರ ಒತ್ತಾಯದ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಈ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ. ನಾಲ್ಕೂವರೆ ವರ್ಷಗಳ ಕಾಲ ತನಿಖೆ ನಡೆಸಿದ ನಂತರ ಸಿಬಿಐ ತನ್ನ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

Leave A Reply

Your email address will not be published.