ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ : ಚಾರ್ಜ್ ಶೀಟ್ ಸಲ್ಲಿಕೆ | ಸುಮಾರು 800 ಪುಟಗಳ ಜಾರ್ಜ್ ಶೀಟ್ ಕೋರ್ಟ್ ಗೆ ಸಲ್ಲಿಕೆ

ಸರಳ ವಾಸ್ತು ಕಂಪನಿಯ ಸಂಸ್ಥಾಪಕ, ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಹಂತಕರಿಬ್ಬರ ವಿರುದ್ಧ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಸುಮಾರು 800ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್‌ ನ್ನು ಸಲ್ಲಿಸಿದ್ದಾರೆ. ಜು.5 ರಂದು ಹುಬ್ಬಳ್ಳಿಯ ಉಣಕಲ್ಲ ಕೆರೆ ಬಳಿಯ ಹೊಟೇಲೊಂದರಲ್ಲಿ ಇಬ್ಬರು ಚಾಕುವಿನಿಂದ ಇರಿದು ಹತ್ಯೆಗೈದು ಪರಾರಿಯಾಗಿದ್ದರು. ಈ ಕೊಲೆ ಘಟನೆ ನಡೆದ 4 ತಾಸಿನೊಳಗೆ ಪೊಲೀಸರು ಹಂತಕರನ್ನು ರಾಮದುರ್ಗ ಬಳಿ ಅಡ್ಡಗಟ್ಟಿ ವಶಕ್ಕೆ ಪಡೆದಿದ್ದರು.

ಗುರೂಜಿ ಹತ್ಯೆಗೆ ಸಂಬಂಧಿಸಿ ಪೊಲೀಸರು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕು ಧುಮ್ಮವಾಡ ಗ್ರಾಮದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತನಿಖಾಧಿಕಾರಿಗಳು ಬಂಧಿತರ ವಿರುದ್ಧ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳು ಸಹಿತ ಕೊಲೆಗೆ ಸಂಬಂಧಿಸಿದ ಇನ್ನಿತರ ವಿಷಯಗಳ ಕುರಿತು ಕಲೆ ಹಾಕಲಾದ ಮಾಹಿತಿ ಹಾಗೂ ಸಂಗ್ರಹಿಸಿದ ಸಾಕ್ಷಿಗಳು ಸೇರಿ 800ಕ್ಕೂ ಹೆಚ್ಚು ಪುಟಗಳುಳ್ಳ ಚಾರ್ಜ್‌ ಶೀಟ್‌ ಸಲ್ಲಿಸಲಾಗಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಗಳಿಂದ ಮಾಹಿತಿ ತಿಳಿದುಬಂದಿದೆ.

ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬಂಧಿಸಿ ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತರು ಎಸಿಪಿ ವಿನೋದ ಮುಕ್ತೇದಾರ ನೇತೃತ್ವದಲ್ಲಿ ಐದು ತನಿಖಾ ತಂಡ ರಚಿಸಿಲಾಗಿತ್ತು. ಇನ್ನು ಸರಳ ವಾಸ್ತು ಖ್ಯಾತಿಯ ಶ್ರೀ ಚಂದ್ರಶೇಖರ ಗುರುಜಿ ಕೊಲೆ ಪ್ರಕರಣ ದೇಶದಾದ್ಯಂತ ಭಾರೀ ಆತಂಕ ಮೂಡಿಸಿದ ಘಟನೆಯಾಗಿತ್ತು.

Leave A Reply

Your email address will not be published.