ಮತ್ತೆ ಭುಗಿಲೆದ್ದ ಹಿಜಾಬ್ ವಿವಾದ | ಸಮವಸ್ತ್ರ ಧರಿಸಲು ಹೇಳಿದ ಶಾಲೆಯ ವಿರುದ್ಧ ಪ್ರತಿಭಟನೆ
ಕರ್ನಾಟಕದಲ್ಲಿ ಹಿಜಾಬ್ ವಿವಾದ ಭಾರೀ ವಿವಾದ ಉಂಟು ಮಾಡಿದ್ದು ಗೊತ್ತೇ ಇದೆ. ಹಾಗೂ ಈ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಈಗ ಈ ಹಿಜಾಬ್ ವಿವಾದ ಈಗ ಕೇರಳದಲ್ಲೂ ಕಾಣಿಸಿಕೊಂಡಿದೆ. ಹಿಜಾಬ್ ಬಿಟ್ಟು ಶಾಲೆಯ ಸಮವಸ್ತ್ರ ಪಾಲಿಸಲು ಸೂಚಿಸಿದ ಶಾಲೆಯ ವಿರುದ್ಧ ಭಾರೀ ಪ್ರತಿಭಟನೆ ನಡೆಸಲಾಗಿದೆ.
ಇಲ್ಲಿನ ಶಾಲೆಯೊಂದರಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡದ್ದಕ್ಕೆ ವಿದ್ಯಾರ್ಥಿ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಕೇರಳದ ಕ್ಯಾಲಿಕಟ್ನ ಪ್ರಾವಿಡೆನ್ಸ್ ಗರ್ಲ್ಸ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸದಂತೆ ಸೂಚಿಸಿ, ಶಾಲಾ ಸಮವಸ್ತ್ರ ನಿಯಮ ಪಾಲಿಸಲು ಹೇಳಲಾಗಿದೆ ಎಂಬ ಆರೋಪ ಇಲ್ಲಿ ಕೇಳಿ ಬಂದಿದೆ.
ಹಾಗಾಗಿ ಇದರ ವಿರುದ್ಧ ಸಿಡಿದೆದ್ದ ಸೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್ಐಒ) ಮತ್ತು ಮುಸ್ಲಿಂ ಸ್ಕೂಡೆಂಟ್ಸ್ ಫೆಡರೇಶನ್ (ಎಂಎಸ್ಎಫ್) ವತಿಯಿಂದ ಶಾಲೆಯ ವಿರುದ್ಧ ಪ್ರತಿಭಟನಾ ರಾಲಿ ನಡೆಸಿದ್ದು ಮಾತ್ರವಲ್ಲದೇ, ಶಾಲೆಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ದಾರೆ.
ಸಾಂವಿಧಾನಿಕ ಹಕ್ಕನ್ನು ಶಾಲೆ ವಿರೋಧಿಸಿದೆ ಎಂದು ಶಾಲೆಯ ವಿರುದ್ಧ ಕ್ರಮ ಮತ್ತು ಅದರ ಆದೇಶವನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಘೋಷಣೆ ಕೂಗಿದರು. ಈ ವೇಳೆ ಶಾಲೆಯ ಮುಂದೆ ಹಾಕಲಾಗಿದ್ದ ಬ್ಯಾರಿಕೇಡ್ಗಳನ್ನು ತಳ್ಳಿ ಪ್ರತಿಭಟನಾಕಾರರು ದಾಂಧಲೆ ಎಬ್ಬಿಸಿದರು.
ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪೊಲೀಸರನ್ನು ಭೇದಿಸಿಕೊಂಡು ಪ್ರತಿಭಟನಾಕಾರರು ಮುನ್ನುಗ್ಗುತ್ತಿದ್ದಾಗ ಇದನ್ನು ತಡೆಯಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಇದಲ್ಲದೇ ಹಲವರನ್ನು ವಶಕ್ಕೆ ಪಡೆದಿದ್ದಾರೆ.