ದಲಿತ ಯುವಕನನ್ನು ಅಪಹರಣ ಮಾಡಿ ಮುಂಜಿ ಮಾಡಿಸಿ ಇಸ್ಲಾಂಗೆ ಮತಾಂತರ | ಈ ಪ್ರಕರಣ ಬಯಲಿಗೆ ಬಂದ ಬಗೆಯೇ ಆಶ್ಚರ್ಯ |

ದಲಿತ ಯುವಕನೋರ್ವನಿಗೆ ಆತನ ಇಚ್ಛೆಗೆ ವಿರುದ್ಧವಾಗಿ ಒತ್ತಾಯ ಪೂರ್ವಕವಾಗಿ ಖತ್ನಾ ಮಾಡಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ‌. ದಲಿತ ಯುವಕನನ್ನು ಮುಸ್ಲಿಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಲಾಗಿದೆ. ಆದರೆ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈಗ ಈ ಪ್ರಕರಣ ಬಯಲಿಗೆ ಬಂದಿದ್ದು, ಹುಬ್ಬಳ್ಳಿ ನವನಗರ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಇದೀಗ ಹುಬ್ಬಳ್ಳಿ ಪೊಲೀಸರ ತಂಡವೊಂದು ಬೆಂಗಳೂರಿಗೆ ತನಿಖೆಗೆಂದು ತೆರಳಿದ್ದಾರೆ.

 

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಯಾದವನಹಳ್ಳಿ ಗ್ರಾಮದ ಶ್ರೀಧರ ಗಂಗಾಧರ (26) ಮತಾಂತರಕ್ಕೆ ಒಳಗಾದ ಯುವಕ. ಮಂಡ್ಯದ ಅತ್ತಾವರ ರೆಹಮಾನ್, ಬೆಂಗಳೂರಿನ ಅಜೀಸಾಬ್, ನಯಾಜ್ ಪಾಷಾ, ನದೀಮ್ ಖಾನ್, ಅನ್ಸಾರ್ ಪಾಷಾ, ಸಯ್ಯದ್ ದಸ್ತಗಿರ, ಮಹ್ಮದ್ ಇಕ್ಬಾಲ್, ರಫಿಕ್, ಶಬೀರ್, ಖಾಲಿದ್, ಶಾಕಿಲ್ ಮತ್ತು ಅಲ್ತಾಪ್ ವಿರುದ್ಧ ಪ್ರಕರಣ ದಾಖಲಾಗಿದೆ.

ಆಗಿದ್ದಾದರೂ ಏನು? ಶ್ರೀಧರ ಗಂಗಾಧರ ಖಾಸಗಿ ಕಂಪನಿಯೊಂದರ ಕೆಲಸ. ಈತ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದ ತೊಂದರೆ ಇತ್ತು. ಈ ವಿಷಯವನ್ನು ಆರೋಪಿ ಅತ್ತಾವರ ರೆಹಮಾನ್‌ಗೆ ತಿಳಿಸಿದ್ದಾನೆ. ಹಣಕಾಸಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಆತನನ್ನು ನಂಬಿಸಿ ಮೇ ತಿಂಗಳಲ್ಲಿ ಬೆಂಗಳೂರಿನ ಬನಶಂಕರಿಯ ಮಸೀದಿಯೊಂದರಲ್ಲಿ ಬಲವಂತವಾಗಿ ಬಂಧಿಸಿಟ್ಟಿದ್ದಾರೆ.

ಅನಂತರ ಮುಸ್ಲಿಂ ಧರ್ಮದ ಬಗ್ಗೆ ನಂಬಿಕೆ ಬರುವ ಹಾಗೇ ಹಲವಾರು ವಿಷಯಗಳನ್ನು ಹೇಳಿ, ಆತನ ಮನಪರಿವರ್ತನೆ ಮಾಡಲಾಗಿದೆ. ನಂತರ ಆತನ ಮರ್ಮಾಂಗದ ತುದಿ ಕತ್ತರಿಸಿ ಖತ್ನಾ ಮಾಡಿದ್ದಾರೆ. ದನದ ಮಾಂಸ ತಿನ್ನುವಂತೆ ಒತ್ತಾಯಿಸಿ ಹಲ್ಲೆ ಕೂಡಾ ಮಾಡಿದ್ದಾರೆ. ಮತಾಂತರದ ಬಗ್ಗೆ ಖಾಲಿ ಬಾಂಡ್ ಪೇಪರ್ ಮೇಲೆ ಸಹಿ ಕೂಡ ಪಡೆದಿದ್ದಾರೆ.

ಅನಂತರ, ತಿರುಪತಿ, ಆಂಧ್ರದ ಚಿತ್ತೂರ, ಭುವನ್‌ನಗರ ಸೇರಿದಂತೆ ಹಲವು ಊರುಗಳ ಮಸೀದಿಗಳಿಗೆ ಕರೆದುಕೊಂಡು ಹೋಗಿ ಇಸ್ಲಾಂ ಧರ್ಮದ ತರಬೇತಿ, ಪ್ರಾರ್ಥನೆ ಹಾಗೂ ಉಳಿದ ಪದ್ಧತಿಗಳ ಕುರಿತು ತರಬೇತಿ ನೀಡಿ, ಆತನಿಗೆ ಪ್ರಾರ್ಥನೆಯನ್ನೂ ಕೂಡಾ ಮಾಡಿಸಿದ್ದಾರೆ. ಶ್ರೀಧರ ಕೈಯಲ್ಲಿ ಪಿಸ್ತೂಲ್ ಕೊಟ್ಟು ಫೋಟೋ ತೆಗೆಸಿದ್ದಾರೆ. ವೀಡಿಯೋ ಮಾಡಿಸಿಕೊಂಡಿದ್ದಾರೆ. ಫೋಟೋ-ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಭಯೋತ್ಪಾದಕನೆಂದು ಹೇಳಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಶ್ರೀಧರ ಖಾತೆಗೆ 35 ಸಾವಿರ ಹಣ ವರ್ಗಾಯಿಸಿ ತಾವು ಹೇಳಿದಂತೆ ಕೇಳಬೇಕು ಹಾಗೂ ಪ್ರತಿವರ್ಷ ಮೂವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಬೇಕು ಎಂದು ಜೀವ ಬೆದರಿಕೆ ಹಾಕಿ ತಾವು ಹೇಳಿದ ಹಾಗೇ ಕೇಳುವಂತೆ ಮಾಡಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ? ಈ ನಡುವೆ ಶ್ರೀಧರನಿಗೆ ಫೇಸ್‌ಬುಕ್‌ನಲ್ಲಿ ಹುಬ್ಬಳ್ಳಿಯ ಯುವತಿಯೊಬ್ಬಳು ಪರಿಚಯವಾಗಿ, ಆಕೆಯ ಜೊತೆಗೆ ಚಾಟಿಂಗ್ ನಡೆಯುತ್ತದೆ. ಯುವತಿಯೂ ಶ್ರೀಧರನಿಗೆ ಹುಬ್ಬಳ್ಳಿಗೆ ಬರುವಂತೆ ಕರೆದಿದ್ದಾಳೆ. ಅದರಂತೆ ಸೆ. 18ರಂದು ಹುಬ್ಬಳ್ಳಿಗೆ ಶ್ರೀಧರ ಆಗಮಿಸಿದ್ದಾನೆ. ಇಲ್ಲೇ ಎರಡ್ಮೂರು ದಿನ ಕಳೆದಿದ್ದಾನೆ. ಸೆ. 21ರಂದು ರಾತ್ರಿ ವೇಳೆ ಇಲ್ಲಿನ ಭೈರಿ ದೇವರಕೊಪ್ಪದಲ್ಲಿದ್ದಾಗ ಯಾರೋ
ಅಪರಿಚಿತರು ಈತನ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರ ಹಲ್ಲೆಗೊಂಡ ಈತನನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ಈ ಘಟನೆ ಸಂಬಂಧ ಕೇಸು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದಾಗ ಹಿಂದಿನ ಘಟನೆಯೆಲ್ಲ ಹೇಳಿದ್ದಾನೆ. ಹಾಗಾಗಿ ಈ ಕುರಿತು ನವನಗರ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಈ ನಡುವೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಯನ್ನೂ ಶುರು ಮಾಡಿದ್ದಾರೆ. ಎಸಿಪಿ ಹಂತದ ಹಿರಿಯ ಅಧಿಕಾರಿಯ ನೇತೃತ್ವದ ತಂಡವೊಂದು ತನಿಖೆಗೆಂದು ಬೆಂಗಳೂರಿಗೆ ತೆರಳಿದೆ ಎಂದು ಮೂಲಗಳು ತಿಳಿಸಿವೆ.

Leave A Reply

Your email address will not be published.