ಇನ್ನೇನು ತಾಳಿ ಕಟ್ಟಬೇಕು ಅಷ್ಟರಲ್ಲೇ ತಾಳಿ ಕಿತ್ತು ಮದುಮಗಳಿಗೆ ಕಟ್ಟಿದ ಯುವಕ

ತಾನು ಪ್ರೀತಿಸಿದ ಹುಡುಗಿ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗುತ್ತಿರುವುದನ್ನು ತಡೆಯಲು 24 ವರ್ಷದ ಯುವಕ ವರನ ಕೈ ತಾಳಿಯನ್ನು ಕಿತ್ತುಕೊಂಡು ಪ್ರಿಯತಮೆ ಕೊರಳಿಗೆ ಕಟ್ಟಲು ಯತ್ನಿಸಿದ ಸಿನಿಮೀಯ ಘಟನೆ ನಡೆದಿದೆ.

ಚೆನ್ನೈನ ಐಷಾರಾಮಿ ಹೋಟೆಲ್‍ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮತ್ತು ಯುವತಿಯಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಆಕೆಯ ಮದುವೆ ಬೇರೊಬ್ಬ ಯುವಕನೊಂದಿಗೆ ನಿಶ್ಚಯ ಆಗಿತ್ತು. ಈ ಮದುವೆಯನ್ನು ನಿಲ್ಲಿಸಿ ತನ್ನನ್ನು ಹೇಗಾದರೂ ಕರೆದುಕೊಂಡು ಹೋಗುವಂತೆ ಯುವತಿ ತನ್ನ ಪ್ರಿಯಕರನಿಗೆ ಮೊಬೈಲ್ ಮೂಲಕ ಸಂದೇಶ ಕಳುಹಿಸಿದ್ದಳು. ಹೀಗಾಗಿ ಬೆಳಗ್ಗೆಯೇ ಮದುವೆ ಮನೆಗೆ ಎಂಟ್ರಿ ಕೊಟ್ಟ ಯುವಕ ವರ ತನ್ನ ಪ್ರಿಯತಮೆಗೆ ತಾಳಿ ಕಟ್ಟುವ ಶುಭ ಗಳಿಗೆಗಾಗಿ ಕಾಯುತ್ತಿದ್ದ.
ವರ ತಾಳಿ ಪಡೆದು ವಧುವಿಗೆ ಕಟ್ಟಲು ಮುಂದಾಗುತ್ತಿದ್ದಂತೆ ವೇದಿಕೆ ಏರಿದ ಪ್ರಿಯಕರ ತಾಳಿಯನ್ನು ಕಿತ್ತುಕೊಂಡಿದ್ದಾನೆ. ನಂತರ ಆಕೆಯ ಕುತ್ತಿಗೆಗೆ ಕಟ್ಟಲು ಪ್ರಯತ್ನಿಸಿದ್ದಾನೆ. ಆದರೆ ಈ ವೇಳೆ ಅಲ್ಲಿದ್ದ ಜನರು ಆತನನ್ನು ತಡೆದು ಹಿಗ್ಗಾಮುಗ್ಗ ಥಳಿಸಿ ಹಾಕಿದ್ದಾರೆ.

ನಿನ್ನೆ, ಶುಕ್ರವಾರ ಬೆಳಗ್ಗೆ ಚೆನ್ನೈನ ಮದುವೆ ಮಂಟಪದಲ್ಲಿ ಈ ಸಿನಿಮೀಯ ಘಟನೆ ನಡೆದಿದ್ದು, ಘಟನೆ ಬಳಿಕ ಪೋಲೀಸರು ಎಂಟ್ರಿ ಕೊಟ್ಟಿದ್ದಾರೆ. ನಂತರ ತನಿಖೆ ಆರಂಭಿಸಿದ ಪೋಲಿಸರಿಗೆ ಯುವಕ ಮತ್ತು ಯುವತಿಯ ಪ್ರೀತಿಯ ಬಗ್ಗೆ ತಿಳಿದುಬಂದಿದ್ದು, ಜೊತೆಗೆ ಹುಡುಗಿಗೆ ಒಪ್ಪಿಗೆ ಇಲ್ಲದೇ ಹುಡುಗಿಯ ಕುಟುಂಬಸ್ಥರ ಒತ್ತಾಯದ ಮೇರೆಗೆ ಮದುವೆಯಾಗಲು ಮುಂದಾಗಿದ್ದಾಳೆ ಎಂದು ತಿಳಿದುಬಂದಿದೆ. ಹೀಗಾಗಿ ಪ್ರಿಯಕರ ಮದುವೆ ಮಂಟಪಕ್ಕೆ ಬಂದು ತಾಳಿ ಕಟ್ಟಲು ಪ್ರಯತ್ನ ಪಟ್ಟಿದ್ದಾನೆ ಎಂಬ ವಿಚಾರ ತಿಳಿದು ಬಂದಿದೆ.

ಈ ಘಟನೆಯಿಂದ ವರನ ಕುಟುಂಬಸ್ಥರು ಮತ್ತು ಹುಡುಗಿ ಮನೆಯವರ ನಡುವೆ ದೊಡ್ಡ ಜಗಳವಾಗಿ ಕೊನೆಗೆ ಮದುವೆ ನಿಂತಿದೆ. ಇದೀಗ ಕಲ್ಯಾಣ ಮಂಟಪಕ್ಕೆ ಒಳನುಗ್ಗಿದ ಯುವಕನ ಮನೆಯವರು ಮತ್ತು ಹುಡುಗಿಯ ಮನೆಯವರ ನಡುವೆ ಮದುವೆ ಮಾಡಲು ಮಾತುಕತೆ ನಡೆಯುತ್ತಿದೆಯಂತೆ.

Leave A Reply

Your email address will not be published.