ಗಣೇಶನಿಗೂ ಬಂತು ಆಧಾರ್ ಕಾರ್ಡ್!

ಅಯ್ಯೋ ಆಧಾರ್ ಕಾರ್ಡ್ ಯಾರಿಗೆ ಬೇಡ ಹೇಳಿ. ಹುಟ್ಟಿದ ಮಗುವಿನಿಂದ ಹಿಡಿದು ಮುದುಕರವರೆಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಅಂಥದರಲ್ಲಿ ಗಣೇಶನಿಗೆ ಆಧಾರ್ ಕಾರ್ಡ್ ಇಲ್ಲದಿದ್ದರೆ ಹೇಗೆ?. ಆದರೆ ನೀವು ಅಂದುಕೊಂಡ ರೀತಿ ಗಣೇಶ ಸಾಮಾನ್ಯ ಮನುಷ್ಯ ಅಲ್ಲ. ನಾವು ಹೇಳುತ್ತಿರುವುದು ಗಣಪತಿ ದೇವರ ಬಗ್ಗೆ.

ಹೌದು. ನಾವೆಲ್ಲರೂ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವುದನ್ನು ನೋಡಿದ್ದೇವೆ. ಅದರಂತೆ ಗಣೇಶೋತ್ಸವಕ್ಕೆ ಶುಭಕೋರುವ ಬ್ಯಾನರ್ ಗಳನ್ನು ಹಾಕುವುದನ್ನು ಕೂಡ ನೋಡಿದ್ದೇವೆ. ಆದ್ರೆ, ಇಲ್ಲೊಂದು ಕಡೆ ಗಣಪತಿಯ ಆಧಾರ್ ಕಾರ್ಡ್ ನ ದೊಡ್ಡ ಪೆಂಡಲ್ ಅನ್ನೇ ನಿರ್ಮಿಸಿದ್ದಾರೆ.

ವಿಶೇಷ ಏನಪ್ಪಾ ಅಂದ್ರೆ, ಆಧಾರ್ ಕಾರ್ಡ್ ನಂತೆಯೇ ರಚಿಸಿರುವ ಈ ಪೆಂಡಲ್ ನಲ್ಲಿ ಗಣಪತಿಯ ಹುಟ್ಟಿದ ದಿನಾಂಕ ಸ್ಥಳ ಎಲ್ಲವನ್ನು ಮುದ್ರಿಸಲಾಗಿದೆ. ಕೈಲಾಸದಲ್ಲಿರುವ ಗಣೇಶನ ವಿಳಾಸ ಮತ್ತು ಅವನ ದಿನಾಂಕವನ್ನು ಗುರುತಿಸಲಾಗಿದೆ. ಅದರೊಳಗೆ ಗಣೇಶನ ವಿಗ್ರಹವನ್ನು ಇರಿಸಲಾಗಿದೆ. ಇಂತಹ ಒಂದು ಸುಂದರವಾದ ಗಣಪನ ಆಧಾರ್ ಕಾರ್ಡ್ ತಯಾರಿಸಿದ್ದು ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿ.

ಅಷ್ಟೇ ಅಲ್ಲದೆ ಈ ಪೆಂಡಲ್ ನಲ್ಲಿ ಬದಿಯಲ್ಲಿರುವ ಬಾರ್‌ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ಗಣೇಶನ ಚಿತ್ರಗಳ ಗೂಗಲ್ ಲಿಂಕ್ ಪರದೆಯ ಮೇಲೆ ತೆರೆಯುತ್ತದೆ. ಅದರ ಮೇಲೆ ನಮೂದಿಸಲಾದ ವಿಳಾಸವು ಶ್ರೀ ಗಣೇಶ್ S/o ಮಹದೇವ್, ಕೈಲಾಶ್ ಪರ್ವತ, ಮೇಲಿನ ಮಹಡಿ, ಹತ್ತಿರ, ಮಾನಸರೋವರ, ಕೈಲಾಸ. ಇದರ ಜೊತೆಗೆ ಪಿನ್‌ಕೋಡ್- 000001 ಮತ್ತು ಹುಟ್ಟಿದ ವರ್ಷ 01/01/600CE(6ನೇ ಶತಮಾನ) ವನ್ನು ನಮೂದಿಸಲಾಗಿದೆ.

ಗಣೇಶ್ ಪಂಡಲ್‌ನ ಆಯೋಜಕ ಸರವ್ ಕುಮಾರ್ ಮಾತನಾಡಿ, ಕೋಲ್ಕತ್ತಾಗೆ ಭೇಟಿ ನೀಡಿದಾಗ ಫೇಸ್‌ಬುಕ್ ಥೀಮ್ ಪೆಂಡಾಲ್‌ ನೋಡಿದ್ದೆ. ಹೀಗಾಗಿ ಆಧಾರ್‌ ಕಾರ್ಡ್‌ ರೀತಿ ತಯಾರಿಸುವ ಆಲೋಚನೆ ನನಗೆ ಬಂದಿತು ಎಂದಿದ್ದಾರೆ. ಒಟ್ಟಾರೆ ಇವರ ವಿಶೇಷವಾದ ಪೆಂಡಲ್ ಎಲ್ಲರ ಗಮನವನ್ನು ಸೆಳೆದಿದ್ದಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Leave A Reply

Your email address will not be published.