ಇನ್ನು ಮುಂದೆ ಸೆ.5ರಿಂದ ಶಾಲಾ ವಿದ್ಯಾರ್ಥಿಗಳಿಗೆ ಸಂಜೆ ಟ್ಯೂಷನ್ ಪ್ರಾರಂಭ

ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರ’ ಕಾರ್ಯಕ್ರಮದ ಅಡಿ ‘ಸಂಜೆ ಟ್ಯೂಷನ್’ಗೆ ಸೆ. 5ರಿಂದ (ಶಿಕ್ಷಕರ ದಿನಾಚರಣೆ) ಆರಂಭವಾಗಲಿದೆ. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ವಾಸಿಸುವ ಪ್ರದೇಶಗಳ ಮಕ್ಕಳಿಗೆ ಇದು ಲಭ್ಯವಿದೆ. ಬಿಬಿಎಂಪಿ ಶಾಲೆ ಮಾತ್ರವಲ್ಲದೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಈ ಅಧ್ಯಯನ ಕೇಂದ್ರಗಳಿಗೆ ಪ್ರವೇಶ ಪಡೆಯಬಹುದಾಗಿದೆ.

ಬಿಬಿಎಂಪಿ ಕಲ್ಯಾಣ ವಿಭಾಗದಿಂದ ಬಡ ವಿದ್ಯಾರ್ಥಿಗಳಿಗಾಗಿ ಸಂಜೆ 5.30ರಿಂದ 7ರವರೆಗೆ ಟ್ಯೂಷನ್ ಇರಲಿದೆ. ಪ್ರತಿ ಕೇಂದ್ರದಲ್ಲಿ 25ರಿಂದ 30 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು.
ಸದ್ಯ ಬಿಬಿಎಂಪಿ ಶಾಲಾ ಕೊಠಡಿಗಳನ್ನು ಬಳಕೆ ಮಾಡಿಕೊಳ್ಳಲಾಗುವುದು. ಈ ಯೋಜನೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ನಗರದಲ್ಲಿ 200ರಿಂದ 300 ಅಧ್ಯಯನ ಕೇಂದ್ರ ಆರಂಭಿಸುವುದಕ್ಕೆ ಬಿಬಿಎಂಪಿ ಚಿಂತನೆ ನಡೆಸಿದೆ.

ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ವಾಸಿಸುವ ಪ್ರದೇಶಗಳ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರ’ ಕಾರ್ಯಕ್ರಮದ ಅಡಿ ಸಂಜೆ ಟ್ಯೂಷನ್ ಆಗಸ್ಟ್ 15ರಿಂದ ಪ್ರಾಯೋಗಿಕವಾಗಿ ನಗರದ 10 ಪ್ರದೇಶದಲ್ಲಿ ಪ್ರಾರಂಭಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಬಳಿಕ ಮುಂದೂಡಲಾಗಿತ್ತು.

ನಗರದ 10 ಪ್ರದೇಶದಲ್ಲಿ ಬಿಬಿಎಂಪಿ ಕಲ್ಯಾಣ ವಿಭಾಗದಿಂದ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗುತ್ತಿದ್ದು, ಅಗತ್ಯ ಪೌಂಡೇಷನ್ ಸಂಸ್ಥೆಗೆ ಈ 10 ಕೇಂದ್ರಗಳ ನಿರ್ವಹಣೆ ಜವಾಬ್ದಾರಿಯನ್ನು ನೀಡಲಾಗಿದೆ. ಮಕ್ಕಳಿಗೆ ತರಬೇತಿ ನೀಡುವ ಶಿಕ್ಷಕರಿಗೆ ಗೌರವ ಧನ ಸೇರಿದಂತೆ ಪ್ರತಿ ಕೇಂದ್ರದ ನಿರ್ವಹಣೆಗೆ ಮಾಸಿಕ 3,500 ರೂ. ನೀಡಲಾಗುತ್ತದೆ. ಕೇಂದ್ರದ 500 ಮೀಟರ್ ವ್ಯಾಪ್ತಿಯ 3 ರಿಂದ 5ನೇ ತರಗತಿಯ 25 ರಿಂದ 30 ವಿದ್ಯಾರ್ಥಿಗಳಿಗೆ ಟ್ಯೂಷನ್ ನೀಡಲಾಗುವುದು.

ಶಿಕ್ಷಕರ ದಿನಾಚರಣೆಯಂದು ಸಾಂಕೇತಿಕವಾಗಿ ಹತ್ತು ಸ್ಥಳದಲ್ಲಿ ‘ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರ’ ಆರಂಭಿಸಲಾಗುತ್ತಿದ್ದು, ಪ್ರತಿ ಕೇಂದ್ರಕ್ಕೆ ಪಾಲಿಕೆ ಮಾಸಿಕ .3,500 ವೆಚ್ಚ ಮಾಡಲಿದೆ. ಇದರಲ್ಲಿ 1,500 ಬೋಧನೆ ಮಾಡುವ ಶಿಕ್ಷಕರಿಗೆ ಗೌರವ ಧನ, ಉಳಿದ .2 ಸಾವಿರ ತರಬೇತಿ ಸಾಮಗ್ರಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರೆ ಕಾರ್ಯಕ್ಕೆ ವೆಚ್ಚ ಮಾಡಲಾಗುತ್ತದೆ.

ಕೊಳಗೇರಿ ಪ್ರದೇಶ ಸೇರಿದಂತೆ ಬಡವರು ಹೆಚ್ಚಾಗಿರುವ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಕ್ಕಳಿಗೆ ಹೆಚ್ಚಿನ ಕಲಿಕೆ, ತರಬೇತಿ, ಹೋಂ ವರ್ಕ್, ವಿವಿಧ ಕೌಶಲ್ಯ ವೃದ್ಧಿಸುವ ಉದ್ದೇಶದಿಂದ ಈ ಅಧ್ಯಯನ ಕೇಂದ್ರ ಪ್ರಾರಂಭಿಸಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಾಯೋಗಿಕ ಟ್ಯೂಷನ್ ಸ್ಥಳಗಳು

1.ಕ್ಲೀವ್ ಲ್ಯಾಂಡ್ ಟೌನ್ ಬಿಬಿಎಂಪಿ ಶಾಲಾ-ಕಾಲೇಜು 2.ಭೈರವೇಶ್ವರ ನಗರ ಬಿಬಿಎಂಪಿ ಶಾಲಾ-ಕಾಲೇಜು
3.ಶ್ರೀರಾಮಪುರ ಬಿಬಿಎಂಪಿ ಶಾಲಾ-ಕಾಲೇಜು
4.ಕಸ್ತೂರಿ ಬಾ ನಗರ ಬಿಬಿಎಂಪಿ ಶಾಲಾ-ಕಾಲೇಜು
5.ಆಸ್ಟೀನ್‌ಟೌನ್ ಬಾಲಕರ ಶಾಲೆ
6.ಗಂಗಾನಗರ ಪಾಲಿಕೆ ಪ್ರೌಢ ಶಾಲೆ
7.ಪಾದರಾಯನಪುರ ಪಾಲಿಕೆ ಶಾಲೆ-ಕಾಲೇಜು
8.ಮತ್ತಿಕೆರೆ ಬಿಬಿಎಂಪಿ ಶಾಲಾ-ಕಾಲೇಜು
9.ವಿಜಯನಗರ ಬಿಬಿಎಂಪಿ ಶಾಲಾ-ಕಾಲೇಜು
10.ಪಿಳ್ಳಣ್ಣ ಗಾರ್ಡನ್ ಬಿಬಿಎಂಪಿ ಶಾಲಾ-ಕಾಲೇಜು

Leave A Reply

Your email address will not be published.