Breaking News | ಇನ್ನೆರಡು ದಿನ ಸುಬ್ರಹ್ಮಣ್ಯದಲ್ಲಿ ದರ್ಶನ ಭಾಗ್ಯವಿಲ್ಲ, ಡಿಸಿ ಸೂಚನೆ – ಮೇಘ ಸ್ಫೋಟಕ್ಕೆ ತತ್ತರಿಸಿದ ಸುಬ್ರಹ್ಮಣ್ಯ ಹಿನ್ನೆಲೆ

ಧಾರಾಕಾರ ಮಳೆಯ ಅಬ್ಬರಕ್ಕೆ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಸಮಸ್ಯೆ ತಂದೊಡ್ಡಿದ್ದು, ದೇಗುಲಕ್ಕೂ ನೀರು ನುಗ್ಗಿದೆ. ಹೀಗಾಗಿ, ಮುಂದಿನ ಎರಡು ದಿನಗಳ ಕಾಲ ಭಕ್ತಾದಿಗಳು ದೇವಸ್ಥಾನ ಭೇಟಿಯನ್ನು ಮುಂದೂಡುವಂತೆ ಡಿಸಿ ಸೂಚನೆ ನೀಡಿದ್ದಾರೆ.

ಸುಬ್ರಹ್ಮಣ್ಯದಲ್ಲಿ ಇಂದು ಸುರಿದ ಭಾರೀ ಮಳೆಯಿಂದಾಗಿ ದರ್ಪಣತೀರ್ಥ ನದಿಯು ತುಂಬಿ ಹರಿದಿದೆ. ಇದರಿಂದಾಗಿ ಆದಿಸುಬ್ರಹ್ಮಣ್ಯ ದೇವಲಾಯದ ಒಳಗೆ ನೀರು ಪ್ರವೇಶಿಸಿದೆ. ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠಕ್ಕೂ ನೀರು ನುಗ್ಗಿರುವುದಾಗಿ ವರದಿಯಾಗಿದೆ. ಹಲವು ವರ್ಷಗಳ ನಂತರ ಆದಿ ದೇವಳದ ಒಳಗೆ ದರ್ಪಣ ತೀರ್ಥವು ಪ್ರವೇಶಿಸಿದೆ.

ದರ್ಪಣತೀರ್ಥ ನದಿಯು ತುಂಬಿ ಹರಿದ ಕಾರಣ ರುದ್ರಪಾದ ಸೇತುವೆಯು ಜಲಾವೃತಗೊಂಡಿದೆ. ದರ್ಪಣ ತೀರ್ಥದಲ್ಲಿನ ಪ್ರವಾಹದಿಂದ ಸುಬ್ರಹ್ಮಣ್ಯ ಪಂಜ ರಾಜ್ಯ ಸಂಪರ್ಕ ರಸ್ತೆಯ ಸೇತುವೆಯು ಮುಳುಗಡೆ ಭೀತಿ ಎದುರಿಸುತ್ತಿದೆ. ಸುಬ್ರಹ್ಮಣ್ಯದಲ್ಲಿ ಸುರಿಯುತ್ತಿರುವ ಮಹಾಮಳೆಯಿಂದ ತುಂಬಿ ಹರಿಯುತ್ತಿರುವ ದರ್ಪಣ ತೀರ್ಥದಿಂದ ನದಿ ತಟದಲ್ಲಿನ ಕೆಲ ಮನೆಗಳಿಗೆ ನೀರು ನುಗ್ಗಿದೆ. ಕಳವಳಕಾರಿ ಪರಿಸ್ಥಿತಿ ಸುಬ್ರಮಣ್ಯದಲ್ಲಿ ನಿರ್ಮಾಣ ಆಗಿದೆ.

ದ.ಕ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅದರಲ್ಲೂ ಸುಬ್ರಹ್ಮಣ್ಯ, ಕಲ್ಮಕಾರು, ಕೊಲ್ಲಮೊಗ್ರು,ಹರಿಹರ,ಬಾಳುಗೋಡು ಆಸುಪಾಸಿನ ಕಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಈ ಭಾಗದಲ್ಲಿ ಮುಂಜಾಗ್ರತ ಕ್ರಮವಹಿಸಲು ಎಸ್ ಡಿಆರ್ ಎಪ್ ಹಾಗೂ ಎನ್ ಡಿಆರ್ ಎಫ್ ತಂಡವನ್ನು ಆ ಭಾಗಕ್ಕೆ ಈಗಾಗಲೆ ಕಳುಹಿಸಿಕೊಡಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳಿಗೂ ಕಟ್ಟೆಚ್ಚರ ವಹಿಸಿ ಮುಂಜಾಗ್ರತೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ.

ಕೆಲವೇ ಗಂಟೆಗಳಲ್ಲಿ ೧೫೦ ಮಿಲಿಮೀಟರ್ ಮಳೆ ಹುಯ್ದಿದೆ. ಅದಕ್ಕಾಗಿ ಭಾರೀ ನೀರು ಸಂಗ್ರಹವಾಗಿದೆ. ಪ್ರವಾಹ ಪರಿಸ್ಥಿತಿ ಎದುರಾಗಿದೆ.

Leave A Reply

Your email address will not be published.