ವಿಷ ಮದ್ಯ ಸೇವಿಸಿ ಗುಜರಾತಿನಲ್ಲಿ 23 ಮಂದಿ ಸಾವು

ಗುಜರಾತ್ ನಲ್ಲಿ ಮದ್ಯ ನಿಷೇಧವಿದ್ದರೂ, ನಕಲಿ ಮದ್ಯದ ಸೇವನೆಯಿಂದಾಗಿ ಭೀಕರ ದುರಂತ ನಡೆದಿದೆ. ಈ ನಕಲಿ ಮದ್ಯ ಸೇವಿಸಿ ಕೆಲವು ಹಳ್ಳಿಗಳಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಿದೆ‌. ಮಾಹಿತಿ ಪ್ರಕಾರ, ಅಹಮದಾಬಾದ್ ಮತ್ತು ಬೊಟಾಡ್ ಜಿಲ್ಲೆಗಳ ಕೆಲವು ಹಳ್ಳಿಗಳಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇನ್ನೂ ಹತ್ತಾರು ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸುಮಾರು ಎರಡು ಡಜನ್ ಜನರು ಈ ನಕಲಿ ಶರಾಬು ಸೇವಿಸಿ ಆರೋಗ್ಯ ಹದಗೆಟ್ಟು ಅವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿತ್ತು. ಅನೇಕ ಮಂದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಕೆಲವು ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಈ ದುರಂತದಲ್ಲಿ ಇಬ್ಬರು ಮಹಿಳೆಯರು ಕೂಡ ನಕಲಿ ಮದ್ಯ ಸೇವಿಸಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಮೃತರ ಸಂಖ್ಯೆ 23ಕ್ಕೆ ಏರಿದ್ದು, 41 ಮಂದಿ ಭಾವಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರಂತದ ಕೇಂದ್ರ ಸ್ಥಳವಾದ ರೋಜಿದ್ ಗ್ರಾಮದಲ್ಲಿಯೇ 10 ಮಂದಿ ಮೃತಪಟ್ಟಿದ್ದಾರೆ. ದೂರದ ಹಳ್ಳಿಗಳಲ್ಲಿ ಈ ಸಾಲು ಸಾಲು ದುರಂತಗಳು ಸಂಭವಿಸಿರುವುದರಿಂದ ಮೃತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಕೆಲವು ವರದಿಗಳು ತಿಳಿಸಿವೆ.

ಹಳ್ಳಿಗಳಲ್ಲಿ ನಕಲಿ ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಕೆಲವು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave A Reply