ಬೆಂಗಳೂರು: ಪ್ರತಿಯೊಬ್ಬ ಮನುಷ್ಯನು ತನ್ನ ದೈನಂದಿನ ಚಟುವಟಿಕೆಗಾಗಿ ಸಮಯವನ್ನು ಅವಲಂಬಿಸಿ ಇರುತ್ತಾನೆ. ಹೀಗಾಗಿ ವಾಚ್ ಅಥವ ಗಡಿಯಾರವನ್ನು ಗಮನಿಸುತ್ತಲೇ ಇರುತ್ತಾರೆ. ಯಾವ ಕೆಲಸಕ್ಕೂ ಮುನ್ನ ಒಂದುಬಾರಿ ಸಮಯವನ್ನು ನೋಡುವುದು ಮನುಷ್ಯನ ಅಭ್ಯಾಸವಾಗಿದೆ. ಮನುಷ್ಯನ ಚಟುವಟಿಕೆಗಳನ್ನು ಗಮನಿಸಲೆಂದೇ ಸ್ಮಾರ್ಟ್ ವಾಚ್ ಚಾಲ್ತಿಯಲ್ಲಿದೆ. ಆದರೆ ಪ್ರಾಣಿಗಳಿಗೆ ಇಂತಹ ಯಾವುದೇ ಟೆಕ್ನಾಲಜಿಗಳು ಬಂದಿಲ್ಲ. ಆದರೆ, ಇದೀಗ ವಿದ್ಯಾರ್ಥಿಗಳು ನಡೆಸಿದ ಸಂಶೋಧನೆಯಲ್ಲಿ ಪ್ರಾಣಿಗಳಿಗೂ ಸ್ಮಾರ್ಟ್ ವಾಚ್ ಅನ್ನು ತಯಾರಿಸಿದ್ದಾರೆ.
ಪ್ರಸ್ತುತ ಚಾಲ್ತಿಯಲ್ಲಿರುವ ಸ್ಮಾರ್ಟ್ ವಾಚ್ ಮಾದರಿಯಲ್ಲಿಯೇ ಪ್ರಾಣಿಗಳಿಗೂ ಪಿಇಎಸ್ ವಿದ್ಯಾರ್ಥಿಗಳ ತಂಡ ಸ್ಮಾರ್ಟ್ ವಾಚ್ ಸಂಶೋಧನೆ ನಡೆಸಿದೆ. ಪ್ರಾರ್ಥನಾ, ಪಲ್ಲಿವಿ ಮತ್ತು ವಿಸ್ಮಯ ಎಂಬ ಮೂವರು ವಿದ್ಯಾರ್ಥಿಗಳು ಈಗಾಗಲೇ ಪಿಇಎಸ್ ವಿವಿಯಲ್ಲಿ ಎಂಜಿನಿಯರಿಂಗ್ ಕೋರ್ಸ್ ಮುಗಿಸಿ ನವೋದ್ಯಮ ಆರಂಭಿಸಿದ್ದಾರೆ. “ಫಾಂಡ್’ ಎಂಬ ಹೆಸರಿನಲ್ಲಿ ಹಕ್ಕು ಸ್ವಾಮ್ಯ (ಪೇಟೆಂಟ್) ಕೂಡ ಪಡೆದಿದೆ. ಸದ್ಯ ದಲ್ಲಿಯೇ ಫಾಂಡ್ ಸಂಸ್ಥೆ ಹೆಸರಿನಲ್ಲಿ ಆನ್ ಲೈನ್ ಮೂಲಕ ವಾಚ್‌ಗಳು ಲಭ್ಯವಾಗಲಿವೆ.
ಒಂದು ವರ್ಷದಲ್ಲಿ ನಾಯಿಗಳಿಗೆ ಬಳಸುವಂತಹ ವಾಚ್‌ಗಳನ್ನು ಸಂಶೋಧನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಈಗ ಸಂಶೋಧಿಸಿರುವ ತಂತ್ರಜ್ಞಾನವನ್ನೇ ಬಳಸಿ ಹಸು ಸೇರಿದಂತೆ ಇನ್ನಿತರ ಪ್ರಾಣಿಗಳಿಗೆ ಸ್ಮಾರ್ಟ್‌ವಾಚ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಪಿಇಎಸ್ ನವೋದ್ಯಮ ವಿಭಾಗದ ಮುಖ್ಯಸ್ಥ ಸುರೇಶ್ ನರಸಿಂಹ ತಿಳಿಸಿದ್ದಾರೆ.
ಪ್ರಸ್ತುತ ಮನುಷ್ಯರಿಗೆ ಇರುವ ಸ್ಮಾರ್ಟ್ ವಾಚ್‌ಗಳಲ್ಲಿ ಸಮಯ, ದಿನಾಂಕ, ಹಾರ್ಟ್‌ಬೀಟ್, ರಕ್ತದೊತ್ತಡದ ಮಟ್ಟ, ರನ್ನಿಂಗ್, ನ್ಪೋರ್ಟ್ಸ್, ನಿದ್ರಾಸಮಯ, ಉಸಿರಾಟ ಸೇರಿ ಇತರ ಮಾಹಿತಿಗಳು ಸಿಗುತ್ತವೆ. ಇದೇ ರೀತಿಯ ಫ್ಯೂಚರ್ ಇರುವ ವಾಚ್ ನ್ನು ನಾಯಿಗಳಿಗೆ ತಯಾರಾಗಿದೆ.ಮನೆಯಲ್ಲಿ ಸಾಕುವ ಪ್ರಾಣಿಗಳು ಆಹಾರವನ್ನು ಚೆನ್ನಾಗಿ ತಿಂದು ಬೊಜ್ಜಿನಿಂದ ಸಾವನ್ನಪ್ಪುವ ಸಾಧ್ಯತೆಗಳಿವೆ. ಇಂತಹ ಘಟನೆಗಳನ್ನು ತಪ್ಪಿಸುವುದಕ್ಕಾಗಿ ಪ್ರಾಣಿಗಳು ಪ್ರತಿ ದಿನ ಎಷ್ಟು ಆಹಾರ ತಿನ್ನುತ್ತವೆ, ಎಷ್ಟು ಸಮಯ ಓಡಾಡುತ್ತವೆ, ನಿದ್ರಿಸುತ್ತವೆ ಎಂಬ ಮಾಹಿತಿ ಈ ವಾಚ್‌ನಲ್ಲಿ ಸಿಗಲಿದೆ.
ಇತ್ತೀಚೆಗೆ ಅಂತೂ, ಪ್ರತಿಯೊಬ್ಬ ಮನುಷ್ಯನು ಕೆಲಸ ಎಂದು ಹೊರಗಡೆ ತೆರಳುವವರೇ ಹೆಚ್ಚಾಗಿದ್ದಾರೆ. ಈ ವೇಳೆ ಮನೆಯಲ್ಲಿ ಸಾಕು ಪ್ರಾಣಿಯಾದ ನಾಯಿ ಒಬ್ಬಂಟಿಯಾಗಿ ಇರುತ್ತದೆ. ಹೀಗಾಗಿ, ನಾಯಿಗಳನ್ನು ಉಪಚರಿಸಲು ಯಾರೊಬ್ಬರು ಇಲ್ಲದಿರುವ ಮನೆಗಳಲ್ಲಿ ಈ ವಾಚ್ ಸಹಕಾರಿಯಾಗಲಿದೆ. ಇದರಿಂದ ಮನೆಮಾಲೀಕ ವಾಚ್ ನ ಸಹಾಯದಿಂದ ನಾಯಿಯ ಪ್ರತಿನಿತ್ಯದ ಚಟುವಟಿಕೆಗಳನ್ನು ಗಮನಿಸಬಹುದಾಗಿದೆ.
You must log in to post a comment.