ನೀವು ದುಡ್ಡಿಗೆ ಮಹತ್ವ ನೀಡುತ್ತೀರಾದರೆ ಒಮ್ಮೆ ಗಮನಿಸಿ : ಆನ್‌ಲೈನ್‌ ಫುಡ್ ಆರ್ಡರ್‌, ಎಷ್ಟೊಂದು ಬೆಲೆ ವ್ಯತ್ಯಾಸ ನೋಡಿ !

ತಮಗೆ ಬೇಕಾದ ಆಹಾರಗಳನ್ನು ಸ್ಟೈಲ್ ಆಗಿ ಆನ್ ಲೈನ್ ಆಪ್ ಗಳಾದ ಸ್ವಿಗ್ಗಿ, ಜೋಮ್ಯಾಟೋ ಮುಖಾಂತರ ತರಿಸಿಕೊಳ್ಳುವ ಮುನ್ನ ಒಂದು ಸಲ ಯೋಚಿಸಿ ಗೆಳೆಯರೇ. ನೀವು ದುಡ್ಡಿಗೆ ಬೆಲೆ ಕೊಡುತ್ತೀರಾದರೆ, ನಿಮ್ಮಂತವರಿಗಾಗಿ ಈ ಪೋಸ್ಟ್.

ಈಗೇನಿದ್ದರೂ ಆನ್‌ಲೈನ್ ಯುಗ ಸೂಜಿಯಿಂದ ಹಿಡಿದು ಟಿವಿ ಪ್ರಿಜ್‌ ತಿನ್ನುವ ಆಹಾರ ಪ್ರತಿಯೊಂದು ಆನ್‌ಲೈನ್‌ನಲ್ಲಿಯೇ ಸಿಗುತ್ತಿರುತ್ತದೆ. ನಮ್ಮ ಉದಾಸ ಜನರಿಗೆ ಕುಂತ ಬುಡಕ್ಕೇ ಎಲ್ಲಾ ಬಂದು ಬೀಳುತ್ತಿರಬೇಕು. ಅದರಲ್ಲೂ ಯುವ ಸಮೂಹ. ಅವರಿಗೆ ಅಂಡರ್ ವೇರ್ ಕೂಡಾ ಆನ್‌ಲೈನ್‌ನಲ್ಲಿ ತರಿಸಿದರೆ ಮಾತ್ರ ಹಾಕೋದು. ಹಾಗಾಗಿದೆ ಆನ್ ಲೈನ್ ಮೇಲೆ ಅವರ ಡಿಪೆಂಡೆನ್ಸಿ. ಯುವಕ ಯುವತಿಯರು ಫುಡ್ ಡೆಲಿವರಿ ಮಾಡಿ ರುಚಿ ರುಚಿಯಾದ ಆಹಾರದ ಸವಿಯುತ್ತಿರುತ್ತಾರೆ. ದುಡ್ಡು ಎಷ್ಟು ಕೊಟ್ಟೆವು, ನೀಡಿದ ಹಣಕ್ಕೆ ಅದು ವರ್ಥಾ, ಊಹೂಂ ಏನೂ ನೋಡುವ ಗೋಜಿಗೆ ಯಾರೂ ಹೋಗುವುದಿಲ್ಲ.

ಆದರೆ ಮುಂಬೈಯ ವ್ಯಕ್ತಿಯೊಬ್ಬರು ಆನ್‌ಲೈನ್‌ ನಲ್ಲಿ ಆಹಾರವನ್ನು ಖರೀದಿಸಿದ್ದರು. ಅಲ್ಲಿ ಖರೀದಿಸಿದ ಬಿಲ್‌ ಹಾಗೂ ಆಫ್‌ಲೈನ್‌ ಬಿಲ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದನ್ನು ನೋಡಿ ಜನ ಗಾಬರಿಯಾಗಿದ್ದಾರೆ. ಅಲ್ಲದೇ ಇಷ್ಟೊಂದು ವ್ಯತ್ಯಾಸವಿರುತ್ತದೆಯೇ ಎಂದು ಜನ ಹೌಹಾರಿದ್ದು, ಆನ್‌ಲೈನ್‌ನಲ್ಲಿ ಈ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದೆ.

ರಾಹುಲ್ ಕಾಬ್ರಾ ಎಂಬ ವ್ಯಕ್ತಿ Zomato ಮತ್ತು ಆಫ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಒಂದೇ ಆಹಾರದ ಬಿಲ್‌ಗಳ ಚಿತ್ರಗಳನ್ನು  ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಒಂದೇ ವಸ್ತುವಿಗೆ ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಇರುವ ದರದ ವ್ಯತ್ಯಾಸ ನೋಡಿ ಜನ ಬೆಚ್ಚಿ ಬಿದ್ದಿದಾರೆ. ರಾಹುಲ್ ಕಾಬ್ರಾ ಅವರು ಮುಂಬೈನ ಪೂರ್ವ ಕಂಡಿವಲಿಯಲ್ಲಿರುವ ದಿ ಮೊಮೊ ಫ್ಯಾಕ್ಟರಿಯಿಂದ ಝೊಮಾಟೊ ಮೂಲಕ ವೆಜ್ ಬ್ಲ್ಯಾಕ್ ಪೆಪ್ಪರ್ ಸಾಸ್  ವೆಜ್ ಫ್ರೈಡ್ ರೈಸ್ ಮತ್ತು ಮಶ್ರೂಮ್ ಮೊಮೊಗೆ ಆರ್ಡರ್ ಮಾಡಿದ್ದರು.

ಈ ಆಫ್‌ಲೈನ್ ಆರ್ಡರ್‌ನ ಒಟ್ಟು ವೆಚ್ಚ 512 ರೂಪಾಯಿಗಳು, ಆದರೆ ಜೊಮ್ಯಾಟೋ ದಲ್ಲಿ ಈ ಆರ್ಡರ್‌ನ ವೆಚ್ಚ 690 ರೂಪಾಯಿ, ಅದೂ 75 ರೂಪಾಯಿ ರಿಯಾಯಿತಿ ದರ ಎಂಬ ದರಕಡಿತದ ನಾಟಕದ ಮೊತ್ತ ಕಳೆದ ನಂತರವೂ. ಹೀಗೆ 690 ತೆತ್ತು ಅವರು ಆಹಾರ ತರಿಸಿಕೊಂಡಿದ್ದಾರೆ.
ಅಂದರೆ 178 (690-512) ಹೆಚ್ಚಳವಾಗಿದ್ದು ಎಂದು ಅವರು ಹೇಳಿದ್ದಾರೆ.
ದುಡ್ಡಿನ ಮಹತ್ವ ಬಲ್ಲ ಜಗತ್ತಿನ ಶ್ರೇಷ್ಠ ಹೂಡಿಕೆ ತಜ್ಞ ವಾರೆನ್ ಬಫೆಟ್ ಗೆ ಈ ಲೆಕ್ಕವನ್ನು ಒಪ್ಪಿಸಿದರೆ, ಅವರು ಈ ರೀತಿ ಲೆಕ್ಕ ಮಾಡಬಹುದು.
1) ಆಫ್ ಲೈನ್ ಮೊತ್ತ : 512 ರೂಪಾಯಿ
2) ಆನ್ ಲೈನ್ ಮೊತ್ತ : 690 ರೂಪಾಯಿ
ವ್ಯತ್ಯಾಸ : 178 ರೂಪಾಯಿ
ಪರ್ಸೆಂಟೆಜ್ ವ್ಯತ್ಯಾಸ : 34.76 %. (178÷512 )
(ಬ್ಯಾಂಕುಗಳು ಫಿಕ್ಸ್ ಡ್ ಹೂಡಿಕೆ ಮೇಲೆ ನೀಡುವ ಬಡ್ಡಿ : 5.5 %)
ಇವುಗಳ ಆಧಾರದ ಮೇಲೆ ನೋಡುವುದಾದರೆ, ವಾರೆನ್ ಬಫೆಟ್ ಸರ್, ಅಂತ ವಸ್ತುಗಳನ್ನು ಕೊಳ್ಳುವುದಿರಲಿ, ಅಂತಹ ಸರ್ವಿಸ್ ನೀಡುವ ದಿಕ್ಕಿಗೆ ಮುಖಮಾಡಿ ನಿಂತು ಕೊಳ್ಳುವುದಿಲ್ಲ. ಆಟದ ಮಟ್ಟಿಗೆ ಹಣಕಾಸಿನ ಕಟ್ಟುನಿಟ್ಟಿನ ಮನುಶ್ಯ ಆತ. ಒಟ್ಟಾರೆ ಇದು ಹಣವನ್ನು ಸುಲಭವಾಗಿ ಪೋಲು ಮಾಡುವ ಒಂದು ಸುಲಭ ವಿಧಾನ ಅಲ್ಲದೆ. ಮತ್ತೇನಿಲ್ಲ.

ಝೊಮಾಟೊ ಸಂಸ್ಥೆಯು ಆಹಾರ ಸೇವಾ ಪೂರೈಕೆದಾರರಿಗೆ  ಹೆಚ್ಚಿನ ಆರ್ಡರ್‌ಗಳನ್ನು ತರುತ್ತದೆ ಎಂದು ಭಾವಿಸಿದ್ದೆ. ಆದರೆ ಅದು ಅದು ಹೆಚ್ಚಿನ ಬೆಲೆಯನ್ನು ವಿಧಿಸಬೇಕೇ? ಸರ್ಕಾರ ಈ ವೆಚ್ಚದ ಹೆಚ್ಚಳವನ್ನು ಮಿತಿಗೊಳಿಸುವ ಅವಶ್ಯಕತೆಯಿದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ. ಆನ್‌ಲೈನ್ ಮತ್ತು ಆಫ್‌ಲೈನ್ ಆರ್ಡರ್‌ಗಳಲ್ಲಿನ  ವ್ಯತ್ಯಾಸವು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದೆ.

ಓರ್ವ ಬಳಕೆದಾರ ಜೊಮ್ಯಟೋ ಮಾತ್ರ ಆಹಾರ ಮೆನು ಮತ್ತು ಬೆಲೆಯನ್ನು ನಿರ್ಧರಿಸುವುದಿಲ್ಲ. ರೆಸ್ಟೋರೆಂಟ್ ಪಾಲುದಾರರು ಅದನ್ನು ಒದಗಿಸುತ್ತಾರೆ. ಈ ಪಾಲುದಾರರಲ್ಲಿ ಕೆಲವರು ಜೊಮ್ಯಟೋ ಗೆ ತಮ್ಮ ಕಮಿಷನ್ ಅನ್ನು ಭಾಗಶಃ ಸರಿದೂಗಿಸಲು ಈ ಬೆಲೆಯನ್ನು ಹೆಚ್ಚಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ನಿಮ್ಮ ಸಮಯಕ್ಕೆ ನೀವು ಮೌಲ್ಯ ನೀಡುವುದಾದರೆ, ಇದು ಆಹಾರದ ಬೆಲೆಯಲ್ಲ. ಇದು ಸಮಯದ ಬೆಲೆ. ಪಿಕ್ ಅಪ್ ಮಾಡಲು ರೆಸ್ಟೋರೆಂಟ್‌ಗೆ ಪ್ರಯಾಣಿಸುವ ವೆಚ್ಚ (ಗ್ಯಾಸ್ ಬೆಲೆಗಳು ಗಣನೀಯವಾಗಿ ಏರಿದೆ) ಇವೆಲ್ಲವನ್ನೂ ಗಮನಿಸಬೇಕಾಗುವುದು. ಇದ್ಯಾವುದೂ ಲೆಕ್ಕಕ್ಕೆ ಇಲ್ಲ ಎಂದಾದಲ್ಲಿ ನೀವು ಈ ಅಪ್ಲಿಕೇಶನ್‌ಗಳನ್ನು ಬಳಸದಿರುವುದು  ಒಳಿತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
‘ಈ ಆಹಾರ ವಿತರಣಾ ಅಪ್ಲಿಕೇಶನ್‌ಗಳು ಅವರು ಏನು ಶುಲ್ಕ ವಿಧಿಸಿದರೂ, ನಮಗೆ ಸಮಯದ ಕೊರತೆ ಇರುವುದರಿಂದ ನಾವು ಪಾವತಿಸಲು ಸಿದ್ಧರಿದ್ದೇವೆ ಎಂಬ ತೀರ್ಮಾನಕ್ಕೆ ಬಂದಿವೆ. ಅವರು ನಮ್ಮ ಪರಿಸ್ಥಿತಿಯ ಅನಗತ್ಯ ಲಾಭವನ್ನು ಪಡೆಯುತ್ತಿದ್ದಾರೆ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ.
‘ನಾನು ನೋಡಿದಂತೆ ಜೊಮೆಟೊ ಹಾಗೂ ಸ್ವಿಗ್ಗಿ ವಿತರಿಸಿದ ಪ್ಯಾಕೇಜ್‌ಗಳು ಆಫ್‌ಲೈನ್ ಖರೀದಿ ವೇಳೆಯ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣವನ್ನು ಹೊಂದಿವೆ ಎಂದು ಮತ್ತೊಬ್ಬರು ಬರೆದಿದ್ದಾರೆ.’
ಗ್ರಾಹಕರಗಳ ಕಾಮೆಂಟ್ಗಳು ಅರ್ಥವತ್ತಾಗಿವೆ. ಆದರೆ ಸಮಯಕ್ಕೆ ಬೆಲೆ ಇದೆ ಎಂದು ಪ್ರತಿಯೊಬ್ಬರೂ ಒಪ್ಪಿಕೊಳ್ಳಲೇ ಬೇಕು. ಸಮಯಕ್ಕಿಂತ ಹೆಚ್ಚಿನ ಬೆಲೆ ಆರೋಗ್ಯದ್ದು. ಮನೆಯಲ್ಲಿ ಕೂತು ಕುಂತಲ್ಲೇ ಬೊಜ್ಜು ಬೆಳೆಸಿ ಕರಗಿ ಹೋಗುವುದಕ್ಕಿಂತ ನಾಲ್ಕು ಹೆಜ್ಜೆ ಮುಂದಕ್ಕೆ ಹಾಕಿ, ಆಫ್ ಲೈನ್ ಅಂಗಡಿಗಳ ಮುಂದೆ ಆಹಾರ ಪಡೆಯುವುದು ಸೂಕ್ತ. ಇಲ್ಲದಕ್ಕಿಂತ ಮುಖ್ಯವಾಗಿ ಯಾರಿಗೆ ತನ್ನ ಆಹಾರವನ್ನು ಮನೆಯಲ್ಲಿಯೇ ಮಾಡಿಕೊಳ್ಳುವ ಅರ್ಹತೆ ಮತ್ತು ಸಮಯ ಇಲ್ಲವೋ, ಆತ ಅಥವಾ ಆಕೆಯ ಆರೋಗ್ಯ ಉಳಿಯುವುದಿಲ್ಲ. ಎಂದಾದರೊಂದು ದಿನ ರುಚಿಕರವಾದ ಹೋಟೆಲ್ ಊಟ ಬೇಕೆಂದಾಗದಲ್ಲಿ ಮನೆಯಿಂದ ಹೊರಟು ಹೋಟೆಲಿನಿಂದ ಖುದ್ದಾಗಿ ತರಿಸಿಕೊಳ್ಳುವುದು ಲೇಸು.

Leave A Reply

Your email address will not be published.