ಆನ್ಲೈನ್ ವೀಡಿಯೋ ನೋಡುವ ಚಟದಿಂದ ಹೊರಬರಲಾರದೇ 16 ರ ಬಾಲಕಿಯಿಂದ ಸೂಸೈಡ್ !

ಈ ವೀಡಿಯೋ ಗೇಮ್ ಚಟ ನಿಜವಾಗ್ಲೂ ಪುಟ್ಟ ಮಕ್ಕಳನ್ನು ಬಲಿ ತೆಗೆಳ್ಳುವುದರಲ್ಲಿ ಎತ್ತಿದ ಕೈ ಅಂತಾನೇ ಹೇಳಬಹುದು. ಎಷ್ಟೋ ಕಡೆ ಎಷ್ಟೋ ಸಂದರ್ಭದಲ್ಲಿ ನಾವು ಮಕ್ಕಳು ಈ ವೀಡಿಯೋ ಗೇಮ್ ಚಟಕ್ಕೆ ಮನೆ ಬಿಟ್ಟು ಹೋಗುವುದು, ತಂದೆ ತಾಯಿಯ ದುಡ್ಡು ಒನ್ಲೈನ್ ಮೂಲಕ ಪೇ ಮಾಡುವುದು…ಇದು ನಡೆತಾನೇ ಇದೆ. ಇದಕ್ಕೆ ಇನ್ನೊಂದು ಸೇರ್ಪಡೆ 16 ವರ್ಷದ ಬಾಲಕಿಯ ಆತ್ಮಹತ್ಯೆ.

ಮೊಬೈಲ್‌ನಲ್ಲಿ ಕೊರಿಯನ್ ವಿಡಿಯೋ ನೋಡುವ ಚಟಕ್ಕೆ ಸಿಲುಕಿದ್ದ 16 ವರ್ಷದ ಬಾಲಕಿಯೊಬ್ಬಳು ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ತಿರುವನಂತಪುರಂನಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಜೀವಾ ಎಂದು ಗುರುತಿಸಲಾಗಿದ್ದು, ಈಕೆ ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದಾಳೆ. ಆದ್ರೆ, ಈಕೆ 11ನೇ ತರಗತಿಗೆ ಪ್ರವೇಶಿಸಿದ ನಂತರ ಮೊಬೈಲ್ ಬಳಕೆ ಮಾಡಲು ಶುರು ಮಾಡಿದ್ದಾಳೆ. ಹಾಗಾಗಿ ಕಡಿಮೆ ಅಂಕ ಗಳಿಸುತ್ತಿದ್ದರ ಪರಿಣಾಮ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಮುಚ್ಚಿದ ಕೋಣೆಯಲ್ಲೇ ಓದುವ ಅಭ್ಯಾಸ ಹೊಂದಿದ್ದ ಜೀವಾ, ಘಟನೆ ನಡೆದ ದಿನ ತಂಗಿ ಊಟಕ್ಕೆಂದು ಕರೆದಾಗ ಬಾಗಿಲು ಬಡಿದರೂ, ಬಾಗಿಲು ತೆಗೆದಿಲ್ಲ. ಕೊನೆಗೆ ಅಕ್ಕಪಕ್ಕದವರು ಬಂದು ಕಿಟಕಿ ಗಾಜುಗಳನ್ನು ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಬಾಗಿಲು ಒಡೆದು ಆಕೆಯನ್ನು ಕೆಳಗಿಳಿಸಿದರು. ಆದರೆ, ಅಷ್ಟರಲ್ಲಾಗಲೇ ಆಕೆ ಸತ್ತುಹೋಗಿದ್ದಳು.

ಈ ವೇಳೆ ಶವದ ಬಳಿ ಮೂರು ಪುಟಗಳ ಸೂಸೈಡ್ ನೋಟ್ ಸಿಕ್ಕಿದ್ದು, ಅದರಲ್ಲಿ ‘ನಾನು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸುತ್ತಿದ್ದೇನೆ. ನನಗೆ ಯಾರೂ ಗೆಳೆಯರಿಲ್ಲ. ಇತ್ತೀಚೆಗೆ ನಾನು ಹೆಚ್ಚಾಗಿ ಕೊರಿಯನ್ ವೀಡಿಯೋಗಳನ್ನು ನೋಡುತ್ತಿದ್ದೇನೆ. ಅದರಿಂದ ನನಗೆ ಹೊರ ಬರಲಾಗುತ್ತಿಲ್ಲ’ ಎಂದು ಬರೆದಿದ್ದಾಳೆ.

ಪ್ರಾಥಮಿಕ ತನಿಖೆಯಲ್ಲಿ ಆಕೆಗೆ ಯಾವುದೇ ಆನ್‌ಲೈನ್ ಸ್ನೇಹ, ಆಟದ ಚಟ ಅಥವಾ ಸಾಮಾಜಿಕ ಮಾಧ್ಯಮದ ಅತಿಯಾದ ಬಳಕೆ ಇಲ್ಲ ಎಂದು ತಿಳಿದುಬಂದಿದೆ. ಮೊಬೈಲ್ ಚಟ ಮತ್ತು ನಂತರದ ಖಿನ್ನತೆಯ ಜೊತೆಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿರುವುದೇ ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.