ಬದುಕು ಕಟ್ಟಿಕೊಳ್ಳಲೆಂದು ಬೆಂಗಳೂರಿಗೆ ಬಂದ ಮೂಡುಬಿದಿರೆಯ ಉದ್ಯಮಿ ಆತ್ಮಹತ್ಯೆ!

ಬೆಂಗಳೂರು :ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಾಲವನ್ನು ಮಾಡಿಕೊಂಡಿದ್ದ ಉದ್ಯಮಿ, ಸಾಲವನ್ನು ತೀರಿಸಲಾಗದೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 

ಆತ್ಮಹತ್ಯೆ ಮಾಡಿಕೊಂಡವರನ್ನು ಮೂಡುಬಿದಿರೆಯ 45 ವರ್ಷದ ಉದ್ಯಮಿ ಪ್ರಮೋದ್ ಹೆಗಡೆ ಎಂದು ಗುರುತಿಸಲಾಗಿದೆ.

ಕಳೆದ 18 ವರ್ಷಗಳ ಹಿಂದೆ ಬದುಕು ಕಟ್ಟಿಕೊಳ್ಳಲೆಂದು ಬೆಂಗಳೂರಿಗೆ ಬಂದು, ಟ್ರಾನ್ಸ್‌ ‌ಪೊರ್ಟ್ ಬ್ಯುಸಿನೆಸ್ ಆರಂಭ ಮಾಡಿದ್ದರು. ಲಾಭವುಳ್ಳ ಬ್ಯುಸಿನೆಸ್ ಹೊಂದಿದ್ದ ಪ್ರಮೋದ್ ಇತ್ತೀಚೆಗೆ ಬೆಟ್ಟಿಂಗ್ ಗೀಳು ಮೈಗತ್ತಿಸಿಕೊಂಡು ಐಪಿಎಲ್ ಬೆಟ್ಟಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದ್ದರು ಎನ್ನಲಾಗಿದೆ. ಹೆಸರಘಟ್ಟ ರಸ್ತೆಯ ಹಾವನೂರು ಬಡಾವಣೆಯಲ್ಲಿ ಇದ್ದಕ್ಕಿದ್ದ ಹಾಗೆ ಅನುಮಾನಾಸ್ಪದ ರೀತಿಯಲ್ಲಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಉದ್ದಗಲಕ್ಕೂ ತನ್ನ ಟ್ರಾನ್ಸ್‌ಪೋರ್ಟ್ ಬ್ಯುಸಿನೆಸ್ ಹರಡಿಸಿದ್ದ ಪ್ರಮೋದ್ ಇತ್ತೀಚೆಗೆ ವ್ಯಾವಹಾರಿಕವಾಗಿ ಸಾಲ ಮಾಡಿದ್ದರಲ್ಲದೆ, ತನ್ನ ಸಂಬಂಧಿಯಿಬ್ಬರ ಬಳಿ 30 ಲಕ್ಷ ಸಾಲ ಮಾಡಿದ್ದರಂತೆ. ಆದ್ರೆ ಆ ಸಾಲದ ಹಣವನ್ನ ಏನು ಮಾಡಿದ್ದರು ಎಂಬುದು ಯಾರಿಗು ಗೊತ್ತಿಲ್ಲ. ಅಲ್ಲದೆ ಕಳೆದ ಕೆಲ ದಿನಗಳಿಂದ ಸಾಲ ವಾಪಸ್ ತೀರಿಸಲಾಗದೆ ಬೇಸತ್ತಿದ್ದರು ಎಂದು ತಿಳಿದುಬಂದಿದೆ.

ಇತ್ತೀಚೆಗೆ ಐಪಿಎಲ್‌ ಬೆಟ್ಟಿಂಗ್ ಸಹ ಆಡುತ್ತಿದ್ದರು ಎನ್ನುವ ವಿಚಾರ ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ. ಮೊನ್ನೆ ರಾತ್ರಿ ಐಪಿಎಲ್ ಮ್ಯಾಚ್ ನೋಡುತ್ತಿದ್ದ ವೇಳೆ ತನ್ನ ಸ್ನೇಹಿತನಿಗೆ ಚಿಕನ್ ತೆಗೆದುಕೊಂಡು ಬಾ ಎಂದು ಹೇಳಿ ಹೊರ ಕಳುಹಿಸಿದವರು ಮನೆ ಒಳಗೆ ನೇಣು ಬಿಗಿದುಕೊಂಡಿದ್ದಾರೆ.

ಸಂಬಂಧಿಯೊಬ್ಬರ ಮನೆಯ ಕಾರ್ಯಕ್ರಮಕ್ಕೆ ತೆರಳಿದ್ದ ಹೆಂಡತಿ ಫೋನ್ ಮಾಡಿದ್ದಾಗ ಮೃತ ಪ್ರಮೋದ್ ರಿಸೀವ್ ಮಾಡದಿದ್ದಕ್ಕೆ, ಪತ್ನಿ ವೀಣಾ ಆತನ ಸ್ನೇಹಿತ ಶಶಿಗೌಡ‌ರಿಗೆ ಫೋನ್ ಮಾಡಿ ವಿಚಾರಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಪ್ರಮೋದ್ ಮನೆಯಲ್ಲಿ ಸಾವಿಗೆ ಶರಣಾಗಿರುವುದರಿಂದ ಮನೆಯಲ್ಲಿ ಏನಾದರೂ ಡೆತ್‌ ನೋಟ್ ಬರಿದಿಟ್ಟಿದ್ದರಾ ಎಂದು ಪೊಲೀಸರು ತೀವ್ರವಾಗಿ ಶೋಧಿಸಿದ್ದಾರೆ. ಆದರೆ ಯಾವುದೇ ಡೆತ್‌ನೋಟ್ ಬರೆದಿಟ್ಟಿಲ್ಲ ಎಂಬುದು ತಿಳಿದು ಬಂದಿದೆ. ಬಾಗಲುಗುಂಟೆ ಪೊಲೀಸರು ಪ್ರಮೋದ್ ಮೃತದೇಹವನ್ನು ಸಪ್ತಗಿರಿ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆಯನ್ನು ಮಾಡಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

‘ಕೋವಿಡ್‌ ನಿಂದ ಸಾಲದ ಕೂಪಕ್ಕೆ ಸಿಲುಕಿದ್ದ ಪ್ರಮೋದ್ ಪೀಣ್ಯದಲ್ಲಿ ಟ್ರಾನ್‌ ಪೋರ್ಟ್ ವ್ಯವಹಾರ ಮತ್ತು ಗಮ್ ಫ್ಯಾಕ್ಟರಿಯನ್ನು ನಡೆಸುತ್ತಿದ್ದರು. ಕೋವಿಡ್‌ ನಿಂದ ಪ್ರಮೋದ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸಾಲವನ್ನು ಮಾಡಿಕೊಂಡಿದ್ದರು. ಟ್ರಾನ್ಸ್‌ ಪೋರ್ಟ್ ವ್ಯವಹಾರ ಅಷ್ಟಾಗಿ ನಡೆಯುತ್ತಿರಲಿಲ್ಲ. ಇದರಿಂದಾಗಿ ಪ್ರಮೋದ್ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ’ ಎಂದು ಪತ್ನಿ ವೀಣಾ ಹೆಗಡೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನುಮಾನಾಸ್ಪದ ಸಾವು ಹಿನ್ನೆಲೆ ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆಗೆ ಮುಂದಾಗಿದ್ದಾರೆ.

Leave A Reply

Your email address will not be published.