“ಮೊದಲ ಮುಟ್ಟು” ಇದರ ಆಚರಣೆಯನ್ನು ಭಾರತದ ವಿವಿಧ ಭಾಗಗಳಲ್ಲಿ ಹೇಗೆ ಆಚರಿಸಲಾಗುತ್ತದೆ ಗೊತ್ತಾ?

ಮುಟ್ಟು ಎನ್ನುವುದು ಪ್ರತಿಯೊಂದು ಹೆಣ್ಣಿಗೆ ದೇವರು ನೀಡಿದ ವರ ಅಂತಾನೇ ಹೇಳಬಹುದು. ಹಾರ್ಮೋನ್ ಬದಲಾವಣೆಯಿಂದ ಪ್ರತಿಯೊಂದು ಹೆಣ್ಣು ತನ್ನ ಮುಟ್ಟಾಗುತ್ತಾಳೆ. ಈ ಬದಲಾವಣೆಯ ಜೊತೆಗೆ ಆಕೆ ಪ್ರಬುದ್ಧತೆಯನ್ನು ಹೊಂದುತ್ತಾಳೆ. ಹುಡುಗಿಯೊಬ್ಬಳು ಮಹಿಳೆಯಾಗಲು ಪ್ರಾರಂಭವಾಗಿದ್ದಾಳೆ ಎಂದು ಇದರ ಅರ್ಥ.

ಭಾರತದ ಕೆಲವು ಕಡೆಗಳಲ್ಲಿ ಈ ಸಂತೋಷದ ವಿಷಯವನ್ನು ಮದುವೆ ಸಂಭ್ರಮದಷ್ಟೇ ಖುಷಿಯಾಗಿ ಆಚರಿಸಿದರೆ ಮತ್ತೆ ಕೆಲವು ಭಾಗಗಳಲ್ಲಿ ಮುಚ್ಚಿಡಲಾಗುತ್ತದೆ. ಮೊದಲ ಋತುಚಕ್ರದ ಆಚರಣೆಯನ್ನು ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಬಗೆಯ ಹೆಸರುಗಳಿಂದ ಕರೆಯಲಾಗುತ್ತದೆ. ಹಾಗಾದರೆ ಯಾವ ರಾಜ್ಯಗಳಲ್ಲಿ ಹೆಣ್ಣು ಋತುಮತಿಯಾದಾಗ ಹೇಗೆ ಆಚರಿಸಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.

ಕರ್ನಾಟಕದಲ್ಲಿ ಹೆಣ್ಣು ಮೊದಲ ಬಾರಿಗೆ ಋತುಮತಿಯಾದಾಗ ಅದ್ದೂರಿಯಾಗಿ, ಹಬ್ಬದಂತೆ ಆಚರಿಸಲಾಗುತ್ತದೆ. ಬಂಧುಗಳು, ಗುರು ಹಿರಿಯರನ್ನು ಆಹ್ವಾನಿಸಲಾಗುತ್ತದೆ. ಈ ಸಮಯದಲ್ಲಿ ಋತುಮತಿಯಾದ ಹೆಣ್ಣು ಮಗಳು ಸೀರೆಯನ್ನು ಧರಿಸಿ, ಶೃಂಗಾರ ಮಾಡಿಕೊಳ್ಳುತ್ತಾಳೆ. ಮನೆ ಶುದ್ಧೀಕರಣ ಎಂಬ ಹೆಸರಿನಲ್ಲಿ ಬ್ರಾಹ್ಮಣರನ್ನು ಮನೆಗೆ ಕರೆಸಿ ಋತುಶುದ್ಧಿ ಅಥವಾ ಋತು ಕಲಾ ಸಂಸ್ಕಾರವನ್ನು ಮಾಡಿಸಲಾಗುತ್ತದೆ. ಪುರಾತನ ಕಾಲದಲ್ಲಿ ಈ ಆಚರಣೆಯಿಂದಾಗಿ ಹೆಣ್ಣು ಮಕ್ಕಳಿಗೆ ಇದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿತ್ತು.

ಅಸ್ಸಾಂ ರಾಜ್ಯದಲ್ಲಿ ಮೊದಲ ಬಾರಿ ಹೆಣ್ಣು ಮಗುವು ಋತುಮತಿಯಾದರೆ ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಅಸ್ಸಾಂನ ಪದ್ಧತಿಯಂತೆ ಹುಡುಗಿಯು ಕೆಲಸ ಮಾಡುವುದನ್ನು ನಿಷೇಧಿಸಲಾಗುತ್ತದೆ. ಅಂದರೆ ಋತುಮತಿಯಾದ ಹೆಣ್ಣು ಮಗಳು ಕೊಠಡಿಯಲ್ಲೇ ಇರಬೇಕು. ಯಾವುದೇ ಕೆಲಸದಲ್ಲಿ ಅವಳು ಪಾಲ್ಗೊಳ್ಳುವ ಅಗತ್ಯವಿಲ್ಲ. ಸುಮಾರು 7 ದಿನಗಳ ಕಾಲ ಏಕಾಂತವಾಗಿ, ಹೊರಗಿನ ಪ್ರಪಂಚವನ್ನು ನೋಡದೆ ಉಳಿಯಬೇಕಾಗುತ್ತದೆ. 7 ದಿನಗಳ ನಂತರ ಬಾಳೆಗಿಡವನ್ನು ಶೃಂಗರಿಸಿ, ವಿವಾಹ ಮಾಡಲಾಗುತ್ತದೆ. ಈ ಸಮಯದಲ್ಲಿ ಬಂಧುಗಳು ಹುಡುಗಿಗೆ ಉಡುಗೊರೆಗಳನ್ನು ನೀಡುತ್ತಾರೆ.

ತಮಿಳುನಾಡಿನಲ್ಲಿ ಕೂಡ ಹೆಣ್ಣು ಮೊದಲ ಬಾರಿ ಮುಟ್ಟಾದಾಗ ‘ಮಂಜಲ್ ನೀರತು’ ಎಂಬ ಹೆಸರಿನಿಂದ ಹಬ್ಬದ ರೀತಿ ಸಂಭ್ರಮಿಸಲಾಗುತ್ತದೆ. ಈ ಸಮಯದಲ್ಲಿ ತಮ್ಮ ಬಂಧು, ಮಿತ್ರರನ್ನು ಬಹುಸಂಖ್ಯೆಯಲ್ಲಿ ಆಹ್ವಾನಿಸಿ, ಭರ್ಜರಿಯಾಗಿ ಮಾಡುತ್ತಾರೆ. ಈ ಆಚರಣೆಯಲ್ಲಿ ಹುಡುಗಿಯ ಚಿಕ್ಕಪ್ಪ, ಮಾವಿನ ಎಲೆಗಳು, ತೆಂಗಿನಕಾಯಿ ಮತ್ತು ಬೇವಿನ ಎಲೆಗಳನ್ನು ಬಳಸಿ ಗುಡಿಸಲು ನಿರ್ಮಿಸುತ್ತಾರೆ.
ಹುಡುಗಿಗೆ ಅರಿಶಿಣ ಮಿಶ್ರಿತ ನೀರಿನಿಂದ ಸ್ನಾನ ಮಾಡಿಸಲಾಗುತ್ತದೆ. ಸ್ನಾನದ ನಂತರ ಅವಳನ್ನು ಸೊಗಸಾದ ಸೀರೆಯನ್ನು ಉಡಿಸಿ, ಅಲಂಕರಿಸಿ ರುಚಿಕರವಾದ ಭಕ್ಷ್ಯಗಳನ್ನು ನೀಡಲಾಗುತ್ತದೆ. ಕೊನೆಗೆ ಪುಣ್ಯಧನ ಸಮಾರಂಭವನ್ನು ಮಾಡುವುದರ ಮೂಲಕ
ಮುಕ್ತಾಯಗೊಳಿಸಲಾಗುತ್ತದೆ.

ಒರಿಸ್ಸಾದಲ್ಲಿ ಕೂಡ ‘ರಾಜ ಪ್ರಭಾ’ ಎಂಬ ಹೆಸರಿನಿಂದ ಮೂರು ದಿನಗಳ ಕಾಲ ಸಮಾರಂಭವನ್ನು ಆಚರಿಸಲಾಗುತ್ತದೆ. ಮುಟ್ಟಾದ ನಾಲ್ಕನೇ ದಿನದಂದು ಹುಡುಗಿಗೆ ಸ್ನಾನ ಮಾಡಿಸಿ, ಮಿಥುನ ಸಂಕ್ರಾಂತಿ ಎಂದು ಕರೆಯಲ್ಪಡುವ ಪದ್ಧತಿಯನ್ನು ನೆರವೇರಿಸಲಾಗುತ್ತದೆ.
ಯುವತಿಗೆ ಈ ಸಮಯದಲ್ಲಿ ಹೊಸ ಹೊಸ ಬಟ್ಟೆಗಳನ್ನು ನೀಡಲಾಗುತ್ತದೆ, ಮತ್ತು ಹೊಸ ಬಟ್ಟೆಯನ್ನೇ ಹುಡುಗಿಯು ತೊಡುತ್ತಾಳೆ. ಅಲ್ಲದೆ, ಆಕೆಗಾಗಿ ಸಿಹಿ ಭಕ್ಷ್ಯಗಳನ್ನು ಮಾಡಿಕೊಡಲಾಗುತ್ತದೆ.

ಆಂಧ್ರ ಪ್ರದೇಶದಲ್ಲಿ ಹೆಣ್ಣು ಮಗುವು ಮೊದಲ ಬಾರಿಗೆ ಮುಟ್ಟಾದಾಗ ‘ಪೆದ್ದಮನಿಷಿ ಪಂಡಗ’ ಎಂಬ ಹೆಸರಿನಿಂದ ಅದ್ಧೂರಿಯಿಂದ ಆಚರಿಸಲಾಗುತ್ತದೆ. ಮಂಗಳ ಸ್ನಾನದ ಮೂಲಕ ಪ್ರಾರಂಭವಾಗುವ ಈ ಸಂಭ್ರಮಕ್ಕೆ 5 ಮಹಿಳೆಯರು ಹುಡುಗಿಗೆ ಸ್ನಾನವನ್ನು ಮಾಡಿಸುತ್ತಾರೆ.
ಈ ಸಮಯದಲ್ಲಿ ಹುಡುಗಿಯು ಊಟದಿಂದ ಹಾಸಿಗೆಯವರೆಗೆ ಎಲ್ಲಾ ವಸ್ತುಗಳಿಂದಲೂ ಪ್ರತ್ಯೇಕಿಸಲಾಗುತ್ತದೆ. ಈ ಸಂಭ್ರಮದ ಕೊನೆಯ ದಿನದಲ್ಲಿ ಹುಡುಗಿಯ ಚಿಕ್ಕಪ್ಪ ಸೀರೆ, ಆಭರಣಗಳನ್ನು ಉಡುಗೊರೆಯಾಗಿ ನೀಡುತ್ತಾರೆ.

Leave A Reply

Your email address will not be published.