40 ದಿನದ ಶಿಶುವಿನ ಹೊಟ್ಟೆಯೊಳಗೆ ಭ್ರೂಣ ಬೆಳವಣಿಗೆ!
ವೈದ್ಯಕೀಯ ಕ್ಷೇತ್ರದಲ್ಲಿ ಒಂದೊಂದು ಅಪರೂಪದ ಘಟನೆ ಬೆಳಕಿಗೆ ಬರುತ್ತಲೇ ಇದ್ದು, ಇದೀಗ ಒಂದು ಘಟನೆ ಪ್ರಕೃತಿಯ ವಿಸ್ಮಯದ ಸೃಷ್ಟಿಗೆ ಸಾಕ್ಷಿಯಾಗಿದೆ. ಹೌದು. 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣವು ಬೆಳವಣಿಗೆಯಾಗುತ್ತಿರುವಂತಹ ಅಚ್ಚರಿಯ ಸಂಗತಿ ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ಕಂಡುಬಂದಿದೆ.
ಮಗುವಿನ ಸೊಂಟದ ಬಳಿಯ ಭಾಗವು ಉಬ್ಬಿದ್ದರಿಂದ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಹೊಟ್ಟೆ ಉಬ್ಬರದಿಂದಾಗಿ ಮಗುವಿಗೆ ಸರಿಯಾಗಿ ಮೂತ್ರ ವಿಸರ್ಜಿಸಲಾಗುತ್ತಿರಲಿಲ್ಲ ಎಂದುಕೊಂಡು, ಉಬ್ಬುವಿಕೆಯ ಹಿಂದಿನ ಕಾರಣವನ್ನು ಕಂಡುಹಿಡಿಯಲು ವೈದ್ಯರ ತಂಡವು ಹಲವಾರು ಪರೀಕ್ಷೆಗಳನ್ನು ನಡೆಸಿತು.
ಆದರೆ ಬಳಿಕ ಬಂದ ಪರೀಕ್ಷೆಯ ಫಲಿತಾಂಶವು ಎಲ್ಲರನ್ನೂ ಬೆಚ್ಚಿ ಬೀಳಿಸುವಂತೆ ಮಾಡಿತು. ಶಿಶು ಭ್ರೂಣದ ಸಮಸ್ಯೆಯಿಂದ ಬಳಲುತ್ತಿದ್ದು, ಮಗು ತಾಯಿಯ ಹೊಟ್ಟೆಯಲ್ಲಿದ್ದಾಗಲೇ ಹೊಟ್ಟೆಯಲ್ಲಿ ಭ್ರೂಣವು ಬೆಳೆದಿದೆ ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.
ಈ ಬಗ್ಗೆ ಮಾತನಾಡಿದ ರಹಮಾನಿಯಾ ಮೆಡಿಕಲ್ ಸೆಂಟರ್ನ ಡಾ ಒಮರ್ ತಬ್ರೇಜ್, ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ಫೀಟಸ್ ಇನ್ ಫೆಟು’ ಅಥವಾ ಮಗುವಿನ ಹೊಟ್ಟೆಯಲ್ಲಿ ಭ್ರೂಣದ ಉಪಸ್ಥಿತಿ ಎಂದು ಕರೆಯಲಾಗುತ್ತದೆ. 10 ಲಕ್ಷ ಪ್ರಕರಣಗಳಲ್ಲಿ 5 ರೋಗಿಗಳಲ್ಲಿ ಸಂಭವಿಸುವ ಅಪರೂಪದ ಪ್ರಕರಣ ಇದಾಗಿದೆ. ಮಗುವಿನ ಸ್ಥಿತಿ ಹದಗೆಟ್ಟಾಗ, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಶಸ್ತ್ರ ಚಿಕಿತ್ಸೆಯ ನಂತರ, ಮಗುವಿನ ಹೊಟ್ಟೆಯಿಂದ ಭ್ರೂಣವನ್ನು ತೆಗೆದುಹಾಕಲಾಗಿದ್ದು, ಮಗು ಚಿಕಿತ್ಸೆಯ ನಂತರ ಸಂಪೂರ್ಣವಾಗಿ ಚೇತರಿಸಿಕೊಂಡಿದೆ ಹೇಳಿದ್ದಾರೆ.