ಹೆತ್ತಬ್ಬೆಯ ಪ್ರಾಣವನ್ನೇ ತೆಗೆಯಿತು ಮಗನ ಪಬ್ ಜಿ ಆಟದ ಹುಚ್ಚು!

ಚಿಕ್ಕಮಗಳೂರು: ಇಂದು ಪ್ರತಿಯೊಂದು ಮಕ್ಕಳಿಗೂ ಆನ್ಲೈನ್ ಗೇಮ್ ಚಟ ಅಧಿಕವಾಗಿದೆ. ಈ ಆಟಕ್ಕೆ ಪೋಷಕರ ವಿರೋಧ ವ್ಯಕ್ತಪಡಿಸಿದಾಗ ಅದೆಷ್ಟೋ ಮಕ್ಕಳು ಆತ್ಮಹತ್ಯೆ ಮಾಡಿದಂತಹ ಪ್ರಕರಣಗಳನ್ನು ಕೂಡ ನಾವು ಕಂಡಿದ್ದೇವೆ. ಆದ್ರೆ ಚಿಕ್ಕಮಗಳೂರು ತಾಲೂಕಿನ ಹಾಗಲಖಾನ್ ಎಸ್ಟೇಟ್ ನಲ್ಲಿ ಪುತ್ರನ ಪಬ್ ಜಿ ಗೇಮ್ ಹುಚ್ಚಿಗೆ ತಾಯಿ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಮೃತ ತಾಯಿಯನ್ನು ಮೈಮುನಾ (40) ಎಂದು ಗುರುತಿಸಲಾಗಿದೆ.

ಪಬ್ ಜಿ ಗೇಮ್ ಆಡದಂತೆ ಮಗನ ಜೊತೆ ತಂದೆ ಜಗಳ ನಡೆಸಿದ್ದು, ಈ ವೇಳೆ ಕೋಪದಿಂದ ಮಗ ಅಪ್ಪನ ಜೊತೆ ಜಗಳಕ್ಕಿಳಿದಿದ್ದ ಎನ್ನಲಾಗಿದೆ. ‘ನಿನ್ನನ್ನು ಸಾಯಿಸುತ್ತೇನೆಂದು’ ಮಗನಿಗೆ ತಂದೆ ಇಮ್ಮಿಯಾಜ್ ಬಂದೂಕು ಹಿಡಿದಾಗ, ಮಗನಿಗೆ ಗುಂಡು ಹಾರಿಸುತ್ತಾರೆಂದು ಹೆದರಿ ಹೆತ್ತಬ್ಬೆ ಮೈಮುನಾ ಅಡ್ಡ ಬಂದಿದ್ದಾರೆ.

ಮದ್ಯದ ಮತ್ತಿನಲ್ಲಿದ್ದ ಪತಿ ಇಮ್ಮಿಯಾಜ್ ಆಚೆ-ಈಚೆ ನೋಡದೆ ಅಡ್ಡ ಬಂದು ನಿಂತಿದ್ದ ಪತ್ನಿಗೆ ಗುಂಡು ಹಾರಿಸಿದ್ದಾನೆ. ಗುಂಡಿನೇಟು ತಿಂದ ಮೈಮುನಾ ಮಗನ ಜೀವ ಉಳಿಸಲು ತಾನೇ ಸಾವನ್ನಪ್ಪಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಇಮ್ಮಿಯಾಜ್ ಹಾಗೂ 17 ವರ್ಷದ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave A Reply

Your email address will not be published.