ಇನ್ಮುಂದೆ ರಾಜ್ಯದ ಮಸೀದಿಗಳಲ್ಲಿ ಮುಂಜಾನೆಯ ‘ಆಜಾನ್’ ಮೊಳಗಲ್ಲ | ಮುಸ್ಲಿಂ ಮುಖಂಡರ ಸಭೆಯಲ್ಲಿ ಮಹತ್ವದ ನಿರ್ಧಾರ
ರಾಜ್ಯ ಸರ್ಕಾರ ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಸುವುದರ ಕುರಿತು ಮಾರ್ಗಸೂಚಿಯನ್ನು ಈಗಾಗಲೇ ಜಾರಿ ಮಾಡಿದೆ. ಬೆಳಗಿನ ಜಾವದಲ್ಲಿ ಇಂತಿಷ್ಟೇ ಡೆಸಿಬಲ್ ಶಬ್ದವನ್ನು ಹೊರಸೂಸುವಂತೆ ಧ್ವನಿ ವರ್ಧಕ ಬಳಕೆಗೂ ಖಡಕ್ ಸೂಚನೆ ನೀಡಲಾಗಿದೆ.
ಈ ಕಾರಣದಿಂದ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವಂತ ಮುಸ್ಲಿಂ ಮುಖಂಡರು, ಇನ್ಮುಂದೆ ರಾಜ್ಯಾದ್ಯಂತ ಬೆಳಿಗ್ಗೆ 5 ಗಂಟೆಯ ಆಜಾನ್ ಕೂಗೋದನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ.
ಈ ಕುರಿತಂತೆ ಮುಸ್ಲಿಂ ಮುಖಂಡರು ಸಭೆ ನಡೆಸಿದ್ದಾರೆ. ಅನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದಂತ ಇಮಾಮ್ ಮೌಲಾನ್ ಮಕ್ಸೂದ್ ಇಮ್ರಾನ್ ರಶಾದಿ ಅವರು, ಇನ್ಮುಂದೆ ಬೆಳಿಗ್ಗೆ 5 ಗಂಟೆಗೆ ಧ್ವನಿ ವರ್ಧಕಗಳಲ್ಲಿ ಆಜಾನ್ ಕೂಗದಂತೆ ಎಲ್ಲಾ ಮಸೀದಿ, ಮುಸ್ಲಿಂ ಮುಖಂಡರಿಗೆ ಸೂಚನೆ ನೀಡಲಾಗಿದೆ ಎಂದರು.
ಮಸೀದಿಗಳಲ್ಲಿ ಬೆಳಿಗ್ಗೆ 5 ಗಂಟೆ, 5.15, 5.30ಕ್ಕೆ ಮೈಕ್ ನಲ್ಲಿ ಆಜಾನ್ ಕೂಗಬಾರದು. ಸರ್ಕಾರ ಧ್ವನಿ ವರ್ಧಕ ಕುರಿತಂತೆ ಹೊರಡಿಸಿರುವ ಮಾರ್ಗಸೂಚಿಯನ್ನು ಪಾಲಿಸಬೇಕು. ಬೆಳಿಗ್ಗೆ 6 ಗಂಟೆಯ ಬಳಿಕ ಪೊಲೀಸರಿಂದ ಅನುಮತಿ ಪಡೆದು, ಆಜಾನ್ ಕೂಗಲು ಸೂಚನೆ ನೀಡಿರೋದಾಗಿ ತಿಳಿಸಿದ್ದಾರೆ.