ಹಿರಿಯ ಗಾಯಕ ಡಾ. ರಾಜಶೇಖರ ಮನಸೂರ ನಿಧನ

ಹಿರಿಯ ಗಾಯಕ ಹಾಗೂ ಪ್ರಾಧ್ಯಾಪಕ ಡಾ. ರಾಜಶೇಖರ ಮನಸೂರ (79) ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

 ಪಂ. ಮಲ್ಲಿಕಾರ್ಜುನ ಮನಸೂರ ಅವರ ಪುತ್ರ ಇವರು. ಮಲ್ಲಿಕಾರ್ಜುನ ಮನಸೂರ ಅವರ 8 ಜನ ಮಕ್ಕಳಲ್ಲಿ ಏಕೈಕ ಪುತ್ರ. ರಾಜಶೇಖರ 20ನೇ ವಯಸ್ಸಿನಲ್ಲೇ ತಂದೆಯೊಂದಿಗೆ ಸಂಗೀತ ಕಛೇರಿಗಳಲ್ಲಿ ಭಾಗವಹಿಸಲು ಆರಂಭಿಸಿದರು. ಪೂರ್ಣಕಾಲಿಕ ಸಂಗೀತಗಾರನಾಗುವ ಬದಲು ಉದ್ಯೋಗ ಹೊಂದಬೇಕು ಎಂಬುದು ತಂದೆಯ ಆಶಯವಾಗಿತ್ತು.

ಡಾ. ರಾಜಶೇಖರ ಮನಸೂರ ಅವರು ಜೈಪುರ ಅತ್ರೌಲಿ ಘರಾಣೆ ಸಂಗೀತದ ಮೇರು ಗಾಯಕರಾಗಿದ್ದರು. ರಾಜಶೇಖರ ಅವರು ಮೂಲತಃ ಧಾರವಾಡ ತಾಲೂಕಿನ ಮನಸೂರ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಪತ್ನಿ, ಮೂವರು ಪುತ್ರಿಯರು ಇದ್ದಾರೆ.

ಆಕಾಶವಾಣಿ ಉನ್ನತ ದರ್ಜೆಯ ಗಾಯಕರಾಗಿದ್ದರು. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ (1997)ಗೆ ಭಾಜನರಾಗಿದ್ದರು. 2016ರಲ್ಲಿ ‘ರಾಷ್ಟ್ರೀಯ ಸಂಗೀತ ಅಕಾಡೆಮಿ ಪ್ರಶಸ್ತಿ’ಗೆ ಭಾಜನರಾದರು. ಚೆನ್ನೈನ ತಾನಸೇನ್ ಸಂಗೀತ ಅಕಾಡೆಮಿಯಿಂದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಮತ್ತು ಪಂಡಿತ್ ಸಣ್ಣ ಭರಮಣ್ಣ ಸ್ಮಾರಕ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾದರು.

Leave A Reply

Your email address will not be published.